16 ವರ್ಷ ಬಳಿಕ ಮಧ್ವ ಸರೋವರ ಸ್ವಚ್ಛ

ಉಡುಪಿ: ಶ್ರೀಕೃಷ್ಣ ಮಠದ ಮಧ್ವ ಸರೋವರದಲ್ಲಿ 16 ವರ್ಷಗಳ ಬಳಿಕ ಹೂಳೆತ್ತುವ ಕಾರ್ಯ ಗುರುವಾರ ಪ್ರಾರಂಭವಾಗಿದ್ದು, ಮೂರು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಗುರುವಾರ ಬೆಳಗ್ಗಿನ ಜಾವದವರೆಗೆ 5 ಪಂಪ್ ಅಳವಡಿಸಿ ಸರೋವರದಲ್ಲಿದ್ದ ನೀರನ್ನು ಖಾಲಿ ಮಾಡಿ, ರಾಜಾಂಗಣ ಆಸುಪಾಸಿನ ಬಾವಿಗಳಿಗೆ ತುಂಬಿಸಲಾಯಿತು. ಮಧ್ವ ಸರೋವರದ ಒಳಗೆ 2 ಸಣ್ಣ ಬಾವಿಗಳಿದ್ದು, ಮುಂಭಾಗದ ಬಾವಿಯಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಗುರುವಾರ ಬೆಳಗ್ಗೆ ಕೃಷ್ಣ ಪೂಜೆಗಾಗಿ ಸ್ನಾನ ಮಾಡಿದ ಬಳಿಕ ಹೂಳೆತ್ತಲು ಆರಂಭಿಸಲಾಯಿತು.

ಶ್ರೀಗಳ ಹಾಗೂ ವೈದಿಕರ ದೈನಂದಿನ ಸ್ನಾನಕ್ಕೆ ಅಡ್ಡಿಯಾಗದ ರೀತಿಯಲ್ಲಿ ಗುರುವಾರ ರಾತ್ರಿಯೊಳಗೆ ಸಣ್ಣ ಬಾವಿಯ ಹೂಳೆತ್ತಿ ಶುದ್ಧೀಕರಿಸಲಾಗಿದೆ. ಈ ಬಾವಿಯಲ್ಲಿ 5 ಅಡಿಯಷ್ಟು ಹೂಳು ತುಂಬಿತ್ತು ಎನ್ನುತ್ತಾರೆ ಕಾರ್ಮಿಕರು.

2ನೇ ಬಾರಿ ಸ್ವಚ್ಛತೆ: 2002-2004ರ ತಮ್ಮ ಪ್ರಥಮ ಪರ್ಯಾಯ ಕಾಲದಲ್ಲಿ ಪಲಿಮಾರು ಶ್ರೀಗಳು ಮಧ್ವ ಸರೋವರದ ಕೆಸರು ತೆಗೆದು ಶುದ್ಧೀಕರಿಸಿದ್ದರು. ಶ್ರಮದಾನದ ಮೂಲಕ ಹೂಳೆತ್ತುವ ಕೆಲಸ ಮಾಡಲಾಗಿತ್ತು. ಈಗ 2ನೇ ಬಾರಿ ಮಧ್ವ ಸರೋವರವನ್ನು 2 ಲಕ್ಷ ರೂ. ವೆಚ್ಚದಲ್ಲಿ ಸ್ವಚ್ಛಗೊಳಿಸಲು ಶ್ರೀಗಳು ಮುಂದಾಗಿದ್ದಾರೆ.
ಸುಮಾರು 50 ಸೆಂಟ್ಸ್ ವಿಸ್ತೀರ್ಣದಲ್ಲಿರುವ ಮಧ್ವ ಸರೋವರ ನಗರದ ಅತೀ ದೊಡ್ಡ ಕೆರೆಯಾಗಿದ್ದು, ದಿನದಿಂದ ದಿನಕ್ಕೆ ನೀರು ಬತ್ತುತ್ತಿದೆ. ಬೇಸಿಗೆ ಕಾಲದಲ್ಲಿ ಪ್ರತಿವರ್ಷ ಇಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. 2015ರ ಮೇ ತಿಂಗಳಲ್ಲಿ ತೆಪ್ಪೋತ್ಸವಕ್ಕೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಸರೋವರಕ್ಕೆ ಕಾಯಕಲ್ಪ ನೀಡುವುದು ಅನಿವಾರ್ಯವಾಗಿದೆ.

ಸರೋವರದ ಮಹತ್ವ: ಅನಂತ ಪುಷ್ಕರಣಿ ಎಂದು ಕರೆಯಲಾಗುತ್ತಿದ್ದ ಈ ಸರೋವರದಲ್ಲಿ ಆಚಾರ್ಯ ಮಧ್ವರು ಗೋಪೀಚಂದನದೊಳಗಿದ್ದ ಕೃಷ್ಣ ಮೂರ್ತಿಯನ್ನು ತೊಳೆದು ಪಕ್ಕದಲ್ಲೇ ಪ್ರತಿಷ್ಠೆ ಮಾಡಿದ ಕಾರಣ ಮಧ್ವ ಸರೋವರ ಎಂದು ಪ್ರಸಿದ್ಧವಾಗಿದೆ. ನಗರೀಕರಣದ ಪ್ರಭಾವದಿಂದಾಗಿ ಈ ಸರೋವರದಲ್ಲೂ ಬೇಸಿಗೆ ಕಾಲದಲ್ಲಿ ನೀರಿಗೆ ಬರ ಎದುರಾಗುತ್ತದೆ. ಆದರೆ ಇಲ್ಲನ ಎರಡು ಸಣ್ಣ ಬಾವಿಗಳಲ್ಲಿ ನೀರಿನ ಒರತೆ ಸ್ವಲ್ಪ ಪ್ರಮಾಣದಲ್ಲಿ ಇಂದಿಗೂ ಇದೆ. 12 ವರ್ಷಕ್ಕೊಮ್ಮೆ ಭಾಗೀರಥಿ ಜಯಂತಿಯಂದು ಕಾಶಿಯಿಂದ ಗಂಗೆ ಈ ಸರೋವರಕ್ಕೆ ಆಗಮಿಸುತ್ತಾಳೆ ಎಂಬುದು ಪ್ರತೀತಿ. ಶತಮಾನಗಳ ಹಿಂದೆ ಇದನ್ನು ಕಣ್ಣಾರೆ ಕಂಡ ಅದಮಾರು ಮಠದ ಅಂದಿನ ಶ್ರೀಗಳು, ಗಂಗೆಯ ತಿಳಿನೀರು ಕಾಣಿಸಿಕೊಂಡ ಸ್ಥಳದಲ್ಲಿ ಭಾಗೀರಥಿ ದೇವಿಯನ್ನು ಪ್ರತಿಷ್ಠಾಪಿಸಿದ್ದರು.

ಮಧ್ವ ಸರೋವರದ ಹೂಳೆತ್ತುವಿಕೆ ಕಾರ್ಯ ನಡೆಯುತ್ತಿದ್ದು, 30ಕ್ಕೂ ಅಧಿಕ ಕಾರ್ಮಿಕರು ಮೂರು ದಿನ 1.5 ಅಡಿಯಷ್ಟು ಕೆಸರು ತೆಗೆದು ಸ್ವಚ್ಛಗೊಳಿಸಲಿದ್ದಾರೆ. ಶುಕ್ರವಾರ ಬೆಳಗ್ಗಿನ ಸ್ವಾಮೀಜಿ ಸ್ನಾನಕ್ಕೆ ಮುನ್ನ ಒಂದು ಬಾವಿಯನ್ನು ಶುದ್ಧೀಕರಿಸಿ ಬಿಟ್ಟುಕೊಡಲಾಗುತ್ತದೆ.
– ಶ್ರೀಶ ಭಟ್ ಕಡೇಕಾರ್, ಸಾರ್ವಜನಿಕ ಸಂಪರ್ಕಾಧಿಕಾರಿ, ಶ್ರೀಕೃಷ್ಣ ಮಠ

Leave a Reply

Your email address will not be published. Required fields are marked *