ವಿಜಯಪುರ: ರೋಟರಿ ಕ್ಲಬ್ ವತಿಯಿಂದ ನಿರಂತರವಾಗಿ ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ದಿವಟಗೇರಿ ಗಲ್ಲಿಯ ರಾಯರ ಮಠಕ್ಕೆ ಆರ್ಒ ವಾಟರ್ ಪ್ಲಾಂಟ್ ವಿತರಿಸಲಾಗಿದೆ ಎಂದು ರೋಟರಿ ಕ್ಲಬ್ 3170ರ ಪ್ರಾಂತದ ಗವರ್ನರ್ ನಾಸೀರ ಬೋರಸನವಾಲಾ ಹೇಳಿದರು.
ನಗರದ ದಿವಟಗೇರಿಗಲ್ಲಿಯ ರಾಯರ ಮಠದಲ್ಲಿ ರೋಟರಿ ಕ್ಲಬ್ ಉತ್ತರ ವಲಯದ ಶಾಖೆಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಆರ್ಒ ವಾಟರ್ ಟ್ಯಾಂಕ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ, ಇದರ ಜೊತೆಗೆ ಭೂತನಾಳ ಕೆರೆ ಬಳಿಯ ಗೋ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದರು.
ರೋಟರಿ ಕ್ಲಬ್ನ ಸಹ ಅಧ್ಯಕ್ಷ ಮಲ್ಲು ಕಲಾದಗಿ ಮಾತನಾಡಿ, ನಮಗೆ ಸಮಾಜ ಏನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.
ಚಾರ್ಟಟ್ ಅಕೌಂಟೆಂಟ್ ಡಿ.ಎಸ್. ಪಾಟೀಲ, ರೋಟರಿ ಕ್ಲಬ್ನ ಎ.ಜಿ. ಚಿದಾನಂದ ಸಿದ್ದಾಪುರ ಮಠ, ರಾಜ ಶಹಾ, ವೆಂಕಟೇಶ ಗುಡಿ, ಸನ್ನಿ ಖಾಸನಿಸ ಮತ್ತಿತರರಿದ್ದರು.