ಅರಣ್ಯಕ್ಕಾಗಿ ಹಸಿರು ಬೆಳೆಸಲು ಚಿಂತನೆ

ಚಿಕ್ಕಮಗಳೂರು: ಚುರ್ಚೆಗುಡ್ಡ, ಲಕ್ಷ್ಮೀಪುರ, ಹಿರೇಗೌಜ ಭಾಗಗಳಲ್ಲಿ ಜಾಗಗಳನ್ನು ಆಯ್ಕೆ ಮಾಡಿ ಸೀಡ್​ಬಾಲ್, ಬೀಜ ಬಿತ್ತನೆ ಮತ್ತು ಪ್ಲಾಂಟಿಂಗ್ ಮಾಡುವ ಕಾರ್ಯಕ್ರಮ ಸದ್ಯದಲ್ಲೇ ಆಯೋಜಿಸಲು ಸ್ವಚ್ಛ ಟ್ರಸ್ಟ್ ಮತ್ತು ಅರಣ್ಯ ಇಲಾಖೆ ಮುಂದಾಗಿದೆ.

ಸ್ವಚ್ಛ ಟ್ರಸ್ಟ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ನಗರದ ರಾಮೇಶ್ವರನಗರದ ಸ್ವಚ್ಛ ಟ್ರಸ್ಟ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಬೆಳೆಸಿ ಯೋಜನೆಯ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಜತೆ ಸಂವಾದದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಡಿಸಿಎಫ್ ಕುಮಾರ್ ಮಾತನಾಡಿ, ಈ ಪ್ರದೇಶಗಳಲ್ಲಿ ಸೂಕ್ತ ಜಾಗ ಆಯ್ಕೆ ಮಾಡಲು ಸಂಬಂಧಪಟ್ಟ ತಜ್ಞರೊಂದಿಗೆ ಸಮಾಲೋಚಿಸುವುದು ಅಗತ್ಯ. ಯೋಜನೆ ಫಲಪ್ರದವಾಗಲು ಪರಿಸರ ತಜ್ಞರಿಂದ ಸಲಹೆ ಪಡೆದು ಮುಂದಿನ ಕಾರ್ಯಯೋಜನೆ ರೂಪಿಸಬೇಕಿದೆ ಎಂದರು.

ಟ್ರಸ್ಟ್ ಅಧ್ಯಕ್ಷ ಡಾ. ಶುಭಾ ವಿಜಯ್ ಮಾತನಾಡಿ, ಮಲೆನಾಡಿನ ಹಸಿರು ಹಾಸಿನ ತವರಾಗಿದ್ದ ಚಿಕ್ಕಮಗಳೂರಿಗೆ ಹಸಿರು ಉಳಿಸಿ ಎನ್ನುವ ಶಬ್ದ ಬಳಸುವಂತಾಗಿರುವುದೇ ವಿಪರ್ಯಾಸ. ಹಚ್ಚ ಹಸಿರಿನ ನಾಡು, ಗಿರಿಶಿಖರಗಳ ಬೀಡಲ್ಲಿ ನೀರಿಗಾಗಿ ಹಾಹಾಕಾರ ಆರಂಭವಾಗಿದೆ ಎಂದು ಬೇಸರಿಸಿದರು.

ಮಾನವ ತನ್ನಿಂದಲೇ ಆದ ಪ್ರಕೃತಿ ವಿಕೋಪವನ್ನು ಅಸಹಾಯಕನಾಗಿ ನೋಡುವಂತಾಗಿದೆ. ಈ ಅಪಾಯದ ಸ್ಥಿತಿ ದೂರ ಮಾಡಿ ನಾಡಿಗೆ ಮತ್ತು ಪ್ರಕೃತಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಹಸಿರು ಬೆಳೆಸಿ ಬೃಹತ್ ಯೋಜನೆಗೆ ಅರಣ್ಯ ಇಲಾಖೆ ಕೈಜೋಡಿಸಿದೆ ಎಂದರು.

ಟ್ರಸ್ಟ್ ಉಪಾಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಚುರ್ಚೆಗುಡ್ಡದಿಂದಾಗಿ ಕಡೂರಿನಿಂದ ಚಿಕ್ಕಮಗಳೂರಿಗೆ ಬರುವ ಪ್ರಯಾಣಿಕರು ದಟ್ಟವಾದ ಕಾಡು ಹಾಗೂ ಮೃಗಗಳಿಂದ ಹೆದರುವ ಕಾಲವಿತ್ತು ಎಂದರು.

ಹಿಂದೆ ಕೈಮರ ಸುತ್ತಮುತ್ತ ಸೇರಿದಂತೆ ಚುರ್ಚೆಗುಡ್ಡ ಪ್ರದೇಶದಲ್ಲಿ ನೂರಾರು ವಾಹನಗಳು ತೆರಳಿ ಸೌದೆ ಕಡಿದು ಸಾಗಿಸುವ ಕಾಲಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಂಡಾಗ ಜನಪ್ರತಿನಿಧಿಗಳು ಶಿಫಾರಸು ಮಾಡಿ ಬಿಡಿಸಬೇಕಿತ್ತು. ಅಡುಗೆ ಅನಿಲ ಬಳಕೆ ಮಾಡುತ್ತಿರುವುದರಿಂದ ಸೌದೆ ಕಡಿಯುವ ಪ್ರಮೇಯ ಈಗಿಲ್ಲ. ಚುರ್ಚೆಗುಡ್ಡ ಸೇರಿ ಹಲವು ಪ್ರದೇಶಗಳಲ್ಲಿ ಸಾಮಾಜಿಕ ಅರಣ್ಯ ನಿರ್ವಿುಸಲು ಉದ್ದೇಶಿಸಲಾಗಿದೆ ಎಂದರು.

ಟ್ರಸ್ಟ್​ನ ಡಿ.ಎಚ್.ನಟರಾಜ್ ಮಾತನಾಡಿ, ಎಲ್ಲ ಸಂಘ-ಸಂಸ್ಥೆಗಳು, ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಿದಾಗ ಮಾತ್ರ ಇದರ ಯಶಸ್ಸು ಕಾಣಲು ಸಾಧ್ಯ. ಸೀಡ್​ಬಾಲ್ ತಯಾರಿಕೆ, ಅದರ ಬಳಕೆ ಮಾಡುವ ವಿಧಾನ ತಿಳಿವಳಿಕೆ ನೀಡಲು ಉತ್ತಿಷ್ಠ ಭಾರತದ ಸಂಸ್ಥೆ ಪದಾಧಿಕಾರಿಗಳು ಇಲ್ಲಿ ಬಂದಿದ್ದಾರೆ ಎಂದರು.

Leave a Reply

Your email address will not be published. Required fields are marked *