ಮೈಸೂರು ಲ್ಯಾಬ್‌ನಲ್ಲೂ ಮಂಗಳೂರು ಮೀನುಗಳಿಗೆ ಕ್ಲೀನ್‌ಚಿಟ್

 ಪ್ರಕಾಶ್ ಮಂಜೇಶ್ವರ ಮಂಗಳೂರು
ಮಂಗಳೂರಿನಿಂದ ಕಳುಹಿಸಲಾದ ವಿವಿಧ ಮೀನು ಮಾದರಿಗಳಲ್ಲಿ ಅಪಾಯಕಾರಿ ಫಾರ್ಮಲಿನ್ ರಾಸಾಯನಿಕ ಅಂಶವಿಲ್ಲ ಎಂದು ಮೈಸೂರಿನ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೃಢೀಕೃತ ಪ್ರಯೋಗಾಲಯ ವರದಿ ನೀಡಿದೆ.
ಎರಡು ವಾರ ಹಿಂದೆ ಕಳುಹಿಸಿದ ಮೀನಿನ ಸ್ಯಾಂಪಲ್‌ಗಳಿಗೆ ಸಂಬಂಧಿಸಿದ ಲ್ಯಾಬ್ ವರದಿ ಶನಿವಾರ ಮಂಗಳೂರಿನ ಆಹಾರ ಸುರಕ್ಷತಾ ಅಧಿಕಾರಿಗಳ ಕಚೇರಿ ತಲುಪಿದೆ.
ಕೇರಳದ ಕೊಚ್ಚಿನ್‌ನಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫಿಶರೀಸ್ ಟೆಕ್ನಾಲಜಿ- ಸಿಐಎಫ್‌ಟಿ ಅಭಿವೃದ್ಧಿಪಡಿಸಿದ ಕಿಟ್‌ನಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಮೀನಿನ ಮಾದರಿಗಳ ಸ್ಕ್ರೀನಿಂಗ್ ಟೆಸ್ಟ್ ನಡೆಸಲಾಗಿದ್ದು, ಎಲ್ಲವೂ ನೆಗೆಟಿವ್ (ಫಾರ್ಮಲಿನ್ ಅಂಶ ಇಲ್ಲ) ಬಂದಿತ್ತು.
ಸಾರ್ವಜನಿಕರ ಆತಂಕ ನಿವಾರಣೆಗಾಗಿ ಉಭಯ ಜಿಲ್ಲೆಗಳ ಎರಡು ಮಾರುಕಟ್ಟೆಗಳ ಮೀನಿನ ಸ್ಯಾಂಪಲ್‌ಗಳ ಅಂತಿಮ ದೃಢೀಕರಣ ಪರೀಕ್ಷೆಗಾಗಿ ಮೈಸೂರಿನ ಎಫ್‌ಎಸ್‌ಎಸ್‌ಎಐ ಲ್ಯಾಬ್‌ಗೆ ಕಳುಹಿಸಿಕೊಡಲಾಗಿತ್ತು.

 ಕಿಟ್ ಸಾರ್ವಜನಿಕರಿಗೆ ಲಭ್ಯ: ಮೀನುಗಳಲ್ಲಿ ಫಾರ್ಮಲಿನ್ ಅಥವಾ ಅಮೋನಿಯಾ ಅಂಶ ಇರುವುದನ್ನು ಪತ್ತೆ ಹಚ್ಚುವ ಕೊಚ್ಚಿನ್ ಸಿಐಎಫ್‌ಟಿ ತಂತ್ರಜ್ಞಾನದ ಕಿಟ್ ಇನ್ನು ಸಾರ್ವಜನಿಕರ ಬಳಕೆಗೆ ಮಾರುಕಟ್ಟೆಯಲ್ಲೂ ಲಭ್ಯವಾಗಲಿದೆ.
ಸಾರ್ವಜನಿಕರ ಆತಂಕ ದೂರ ಮಾಡುವ ಉದ್ದೇಶದಿಂದ ಸಿಐಎಫ್‌ಟಿ ತಾನು ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಹೈಮೀಡಿಯಾ ಸಂಸ್ಥೆಗೆ ಹಸ್ತಾಂತರಿಸಿದ್ದು, ಶೀಘ್ರದಲ್ಲೇ ಇದರ ಉತ್ಪನ್ನ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಮಂಗಳೂರು ಪ್ರಯೋಗಾಲಯದಲ್ಲಿ ಫಾರ್ಮಲಿನ್ ಇದೆ ಎಂದಿತ್ತು ವರದಿ!: ಇದಕ್ಕೂ ಮೊದಲು ಮಂಗಳೂರು ಮೀನುಗಾರಿಕಾ ಕಾಲೇಜಿನ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮೀನಿನ ಸ್ಯಾಂಪಲ್‌ಗಳಲ್ಲಿ ಫಾರ್ಮಲಿನ್ ಇರುವ ಕುರಿತು ಪಾಸಿಟಿವ್ ವರದಿ ಬಂದಿರುವುದು ‘ವಿಜಯವಾಣಿ’ಗೆ ತಿಳಿದುಬಂದಿದೆ. ಆದರೆ ಕೆಲವು ಕಾರಣಗಳಿಗಾಗಿ ಅಧಿಕಾರಿಗಳು ಇದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಕೇರಳದ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಬಂದಿದ್ದ ಮೀನಿನ ಸ್ಯಾಂಪಲ್‌ಗಳಲ್ಲಿ ಫಾರ್ಮಲಿನ್ ಇದೆ ಎನ್ನುವ ವಿಷಯ ಬಹಿರಂಗಗೊಳ್ಳುತ್ತಲೇ ಮೀನುಗಾರಿಕಾ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸುಳ್ಯದ ಎರಡು ಹಾಗೂ ಉಡುಪಿಯ ಐದು ಸ್ಯಾಂಪಲ್‌ಗಳಲ್ಲಿ ಪಾಸಿಟಿವ್ ಫಲಿತಾಂಶ ದೊರೆತಿತ್ತು.
ಕೊಚ್ಚಿನ್ ಕಿಟ್ ಮಂಗಳೂರಿಗೆ ಬರುವ ವೇಳೆಗೆ ಜಿಲ್ಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿಯ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿರುವ ಹಿನ್ನೆಲೆಯಲ್ಲಿ ಫಾರ್ಮಲಿನ್ ಬಳಕೆ ತಕ್ಷಣ ನಿಲ್ಲಿಸಿರಬಹುದು. ಆದ್ದರಿಂದ ಬಳಿಕ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ದೊರೆಯದೆ ಇರಬಹುದು ಎನ್ನುವುದು ಕಾಲೇಜಿನ ಓರ್ವ ಹಿರಿಯ ಪ್ರೊಫೆಸರ್ ಶಂಕೆ.
ಕೊಚ್ಚಿನ್‌ನ ಸಿಐಎಫ್‌ಟಿ ಹಾಗೂ ಮೈಸೂರಿನ ಎಫ್‌ಎಸ್‌ಎಸ್‌ಎಐ ಹೆಚ್ಚು ವಿಶ್ವಾಸಾರ್ಹ ಸಂಸ್ಥೆಗಳಾಗಿರುವ ಹಿನ್ನೆಲೆಯಲ್ಲಿ ಇತರ ವರದಿಗಳನ್ನು ಪರಿಗಣಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸದಿರಲು ಜಿಲ್ಲಾಡಳಿತ ತೀರ್ಮಾನಿಸಿದಂತೆ ಕಾಣುತ್ತದೆ.

ಮೀನುಗಳಲ್ಲಿ ಫಾರ್ಮಲಿನ್ ಮತ್ತು ಅಮೋನಿಯಾ ಅಂಶವಿರುವುದನ್ನು ಪತ್ತೆ ಹಚ್ಚುವ ಪ್ರತ್ಯೇಕ ಕಿಟ್‌ಗಳು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಇದನ್ನು ಬಳಸಿಕೊಂಡು ಸಾರ್ವಜನಿಕರು ತಾವೇ ಮೀನು ಪರೀಕ್ಷಿಸಿಕೊಳ್ಳಲು ಅವಕಾಶ ದೊರೆಯುವುದು.
– ಮಹೇಶ್ ಕುಮಾರ್, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ದ.ಕ.