ಕೋಲ್ಕತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್​ ಪ್ರತಿಭಟನೆ; ಅಶ್ರುವಾಯು, ಜಲಫಿರಂಗಿ ಪ್ರಯೋಗಿಸಿದ ಪೊಲೀಸರು

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಕಾರ್ಯಕರ್ತರ ಸಾವನ್ನು ಖಂಡಿಸಿ ಪಕ್ಷದ ಕಾರ್ಯಕರ್ತರು ಇಂದು ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಬುಧವಾರ ಬಿಜೆಪಿ ಕಾರ್ಯಕರ್ತರು ಕೋಲ್ಕತದ ವೆಲ್ಲಿಂಗ್ಟನ್ ಪ್ರದೇಶದಿಂದ ಲಾಲ್​ ಬಜಾರ್​ ಪ್ರದೇಶದಲ್ಲಿರುವ ಪೊಲೀಸ್​ ಆಯುಕ್ತರ ಕಚೇರಿಗೆ ಬೃಹತ್​ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯಲ್ಲಿ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿರುವ ಬಿಜೆಪಿಯ 18 ಸಂಸದರು, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್​ ಘೋಷ್​ ಸೇರಿದಂತೆ ಬಿಜೆಪಿ ನಾಯಕರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಬಾವ್​ಬಜಾರ್​ ಬಳಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಆಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗಿಸಿದರು. ಆದರೂ ಪ್ರತಿಭಟನಾಕಾರರು ತಮ್ಮ ಪಟ್ಟು ಬಿಡಲಿಲ್ಲ. ಅವರು ಘೋಷಣೆ ಕೂಗುತ್ತಾ ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಕೆಲವರು ಸ್ಥಳದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ.

ಲಾಲ್​ ಬಜಾರ್​ ಕಡೆಗೆ ಬಿಪಿನ್​ ಬಿಹಾರಿ ಗಂಗೂಲಿ ರಸ್ತೆಯಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೋಲ್ಕತ ಪೊಲೀಸ್​ ಆಯುಕ್ತರ ಕಚೇರಿ ಬಳಿ 144ನೇ ಸೆಕ್ಷನ್​ ಜಾರಿಗೊಳಿಸಿದ್ದು, ಆಯುಕ್ತರ ಕಚೇರಿ ಬಳಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿ ಮಹಿಳಾ ಮೋರ್ಚಾದ ಐವರು ಕಾರ್ಯಕರ್ತೆಯೆರನ್ನು ಪೊಲೀಸರು ಬಂಧಿಸಿದ್ದಾರೆ.

ಚುನಾವಣೆ ಮುಗಿದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ಮುಂದುವರಿದಿದ್ದು, ಬಿಜೆಪಿಯ ಹಲವು ಕಾರ್ಯಕರ್ತರ ಹತ್ಯೆ ನಡೆದಿದೆ. (ಏಜೆನ್ಸೀಸ್​)