ರಾಮಮಂದಿರ ನಿರ್ಮಾಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ: ಅಮಿತ್‌ ಷಾ

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಒತ್ತಾಯಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ಗಜ್ರುಲಾದ ರ‍್ಯಾಲಿಯಲ್ಲಿ ಮಾತನಾಡಿ, ಆದಷ್ಟು ಶೀಘ್ರವೇ ಅಯೋಧ್ಯೆಯಲ್ಲಿ ಭವ್ಯ ರಾಮನ ದೇವಾಲಯ ನಿರ್ಮಾಣವು ನಮಗೆ ಬೇಕಾಗಿದ್ದು, ನಾವು ದೇವಾಲಯವನ್ನು ನಿರ್ಮಿಸುತ್ತೇವೆ. ಅಯೋಧ್ಯೆ ಕುರಿತಂತೆ ಪ್ರಕರಣ ಯಾವಾಗ ನ್ಯಾಯಾಲಯಕ್ಕೆ ಹೋದರೂ ಕೂಡ ಕಾಂಗ್ರೆಸ್‌ ಅದನ್ನು ಸ್ಥಗಿತಗೊಳಿಸಲು ಯತ್ನಿಸುತ್ತದೆ. ಈಗ ಎಲ್ಲ ವಿಪಕ್ಷಗಳು ಮತ್ತು ರಾಹುಲ್‌ ಗಾಂಧಿ ಅವರು ಸಾರ್ವತ್ರಿಕ ಚುನಾವಣೆಗೂ ಮುನ್ನ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.

ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಾರ್ಟಿಯ ಮೈತ್ರಿ ಕುರಿತಂತೆ ಉತ್ತರಿಸಿದ ಅವರು, 2014ರಲ್ಲಿ ಪಕ್ಷ ಸಾಧಿಸಿದ್ದಕ್ಕಿಂತಲೂ ಈ ಭಾರಿ ಹೆಚ್ಚಿನದನ್ನು ಸಾಧಿಸುವ ವಿಶ್ವಾಸವನ್ನು ಹೊಂದಿದ್ದೇನೆ. ಮೈತ್ರಿಯ ಬಗ್ಗೆ ನನಗೆ ಚಿಂತೆಯಿಲ್ಲ. ರಾಜ್ಯದ ಪ್ರತಿ ಪ್ರದೇಶದ ಬಗ್ಗೆಯೂ ನನಗೆ ತಿಳಿದಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗಳಿಸುತ್ತೇವೆ ಎಂದರು.

ಭಾರತವನ್ನು ರಕ್ಷಿಸಲು ದೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತ ನಾಯಕನ ಅಗತ್ಯವಿದೆ. 2016 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಗಲಕ್ಕೂ ಭಯೋತ್ಪಾದಕ ಚಟುವಟಿಕೆಯ ಅಡಗುತಾಣಗಳ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ಆದೇಶಿಸಿದ್ದಕ್ಕೆ ಮೋದಿ ಅವರನ್ನು ಶ್ಲಾಘಿಸಿದರು. (ಏಜೆನ್ಸೀಸ್)

Leave a Reply

Your email address will not be published. Required fields are marked *