More

    ಕಾನೂನು ಬಾಹಿರವಾಗಿ ಪದೋನ್ನತಿ ನೀಡಿಲ್ಲ

    ವಿಜಯವಾಣಿ ಸುದ್ದಿಜಾಲ ಮೈಸೂರು
    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಯಾವುದೇ ಅನರ್ಹ ನೌಕರರಿಗೆ ಕಾನೂನು ಬಾಹಿರವಾಗಿ ಪದೋನ್ನತಿ ನೀಡಿಲ್ಲ. ಅರ್ಹರಿಗೆ ಮಾತ್ರ ಪದೋನ್ನತಿ ನೀಡಿದೆ ಎಂದು ಪದೋನ್ನತಿ ಹೊಂದಿರುವ ನೌಕರರು ಸ್ಪಷ್ಟೀಕರಣ ನೀಡಿದ್ದಾರೆ.
    ‘ಮುಕ್ತ ವಿವಿಯಲ್ಲಿ ಅನರ್ಹರಿಗೆ ಪದೋನ್ನತಿ’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇದು ಪದೋನ್ನತಿ ಹೊಂದಿರುವ ಹಿರಿಯ ನೌಕರರಾದ ನಮಗೆ ಮಾನಸಿಕ ಹಿಂಸೆಗೆ ಕಾರಣವಾಗಿದೆ.
    ವರದಿಯಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರನಾಥ್ ವಿಚಾರಣಾ ಸಮಿತಿಯ ವರದಿಯನ್ನು ಮುಚ್ಚಿಟ್ಟು ನಿಯಮ ಪ್ರಕಾರ ಸ್ನಾತಕ ಪದವಿ ಪೂರೈಸದ 17 ಅನರ್ಹರಿಗೆ ಪ್ರಥಮ ದರ್ಜೆ ಸಹಾಯಕರು, ಅಧೀಕ್ಷಕ ಹುದ್ದೆಗಳಿಗೆ ಪದೋನ್ನತಿ ನೀಡಲಾಗಿದೆ ಎಂದು ತಿಳಿಸಲಾಗಿದೆ. ಇದು ಸತ್ಯಕ್ಕೆ ದೂರವಾಗಿದ್ದು, ನ್ಯಾಯಾಧೀಶರಿಂದ ವಿಚಾರಣೆಯೇ ನಡೆಯದಿರುವಾಗ ವರದಿಯ ಪ್ರಶ್ನೆ ಎಲ್ಲಿ ಬರುತ್ತದೆ ಎಂದಿದ್ದಾರೆ.
    ವಿವಿಯು ಹಿಂದಿನಿಂದಲೂ ನೀಡುತ್ತಾ ಬಂದಿರುವ ಶಿಕ್ಷಕೇತರ ಹುದ್ದೆಗಳ ಪದೋನ್ನತಿಗಳು ವಿಶ್ವವಿದ್ಯಾಲಯ ಕಾಯ್ದೆ ಮತ್ತು ಪರಿನಿಯಮಗಳ ಅನುಗುಣವಾಗಿಯೇ ನೀಡಲ್ಪಡುತ್ತಿದ್ದು, ಯಾವುದೇ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳಿಂದಾಗಲಿ ಉಲ್ಲೇಖಿತ ವರದಿ ತಿಳಿಸಿರುವಂತಹ ಯಾವುದೇ ರೀತಿಯ ಉಲ್ಲಂಘನೆ ಹಾಗೂ ನಿಯಮಬಾಹಿರತೆಗೆ ಆಸ್ಪದವಾಗಿರುವುದಿಲ್ಲ. ನಿಯಮಾನುಸರಾವೆ ನೇಮಕಾತಿ ಮತ್ತು ಪದೋನ್ನತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ನೌಕರರು ಸ್ಪಷ್ಟೀಕರಣ ನೀಡಿದ್ದಾರೆ.
    ಸರ್ಕಾರದ 25.04.2001ರ ಅಧಿಸೂಚನೆ ಅನ್ವಯ, ವಿವಿಯು ಸುಗಮ ಆಡಳಿತಕ್ಕೆ ಪೂರಕವಾಗಿ ಅಗತ್ಯವಿರುವ ನೀತಿ ನಿಯಮಗಳನ್ನು ಜಾರಿಗೆ ತರುವ ಮತ್ತು ನೌಕರರ ಸೇವಾ ಸೌಲಭ್ಯಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ತನ್ನದೇ ಆದ ಪರಿನಿಯಮಗಳನ್ನು ರಚಿಸಿಕೊಳ್ಳುವವರೆಗೂ ಮೈಸೂರು ವಿವಿಯ ನಿಯಮಗಳು ಮತ್ತು ಪರಿನಿಯಮಗಳೇ ಚಾಲ್ತಿಯಲ್ಲಿರತಕ್ಕದ್ದು ಎಂದು ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕರಾಮುವಿಯಲ್ಲಿ ಸುಗಮ ಆಡಳಿತ ದೃಷ್ಟಿಯಿಂದ ಅವಶ್ಯವಿದ್ದ ಸಂದರ್ಭದಲ್ಲಿ ಮೈಸೂರು ವಿವಿ ನಿಯಮ ಮತ್ತು ಪರಿನಿಯಮಗಳನ್ನು ಆಧರಿಸಲಾಗಿರುತ್ತದೆ. ನಂತರದಲ್ಲಿ ಕರಾಮುವಿಯಲ್ಲಿ ಇಲ್ಲಿನ ವಿಶಿಷ್ಟ ಕಾರ್ಯ ಚಟುವಟಿಕೆಗಳಿಗೆ ಅನುಗುಣವಾಗಿ ವಿವಿಧ ಶಿಕ್ಷಕೇತರ ಹುದ್ದೆಗಳಿಗೆ ತನ್ನದೇ ನೇಮಕಾತಿ/ಪದೋನ್ನತಿ ಪರಿನಿಯಮಗಳನ್ನು ಹಾಗೂ ತಿದ್ದುಪಡಿ ಪರಿನಿಯಮಗಳನ್ನು ರಚಿಸಿಕೊಂಡು ಅವುಗಳಿಗೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಅಂಕಿತ ಪಡೆದುಕೊಳ್ಳಲಾಗಿದೆ. ಅವುಗಳನ್ವಯವೇ ನೇಮಕಾತಿ ಮತ್ತು ಪದೋನ್ನತಿಗಳನ್ನು ನೀಡುತ್ತಾ ಬರಲಾಗಿದೆ.
    ಸರ್ಕಾರ ಹಾಗೂ ರಾಜ್ಯದ ಇತರೆ ವಿವಿಗಳಲ್ಲಿಯೂ ಪದೋನ್ನತಿಗೆ ವಿದ್ಯಾರ್ಹತೆ ಪದವಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಕ್ತ ವಿವಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕೇತರ ವರ್ಗದ ನೌಕರರು ಪದೋನ್ನತಿ ಹೊಂದಲು ಪದವಿಯನ್ನು ಪಡೆಯಬೇಕೆಂಬುದನ್ನು ರದ್ದುಪಡಿಸಲು, ತಿದ್ದುಪಡಿ ಪರಿನಿಯಮವನ್ನು ರಚಿಸಿ ವ್ಯವಸ್ಥಾಪನಾ ಮಂಡಳಿಯ ಅನುಮೋದನೆ ಪಡೆದು ಕುಲಾಧಿಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿರುತ್ತದೆ.
    ನಂತರ ತಿದ್ದುಪಡಿಯ ಪರಿನಿಯಮಗಳ ಪ್ರಕಾರವೇ ಇಂದಿನವರೆಗೂ ವಿವಿಯ ಎಲ್ಲ ಹುದ್ದೆಗಳಿಗೂ ಪದೋನ್ನತಿ ನೀಡಲಾಗಿದ್ದು, ಸೌಲಭ್ಯ ಹೊಂದಿದ ಕೆಲ ನೌಕರರು ಈಗಾಗಲೇ ವಯೋನಿವೃತ್ತಿ ಹೊಂದಿದ್ದಾರೆ.
    ವರದಿಯಲ್ಲಿ ಹೆಸರಿಸಲಾಗಿರುವ 4 ನೌಕರ ಪೈಕಿ ಒಬ್ಬರು ಮುಕ್ತ ವಿವಿ ಸ್ಥಾಪನಾ ಪೂರ್ವದಲ್ಲಿ ಮೈಸೂರು ವಿವಿಯ ನೌಕರರಾಗಿದ್ದು, ನಂತರದಲ್ಲಿ 1996ರಲ್ಲಿ ಮುಕ್ತ ವಿವಿಯಲ್ಲಿ ಸೇವೆಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಉಳಿದ 3 ನೌಕರರು ಮುಕ್ತ ವಿವಿ ಮೂಲಕ ನೇಮಕಾತಿ ಪರಿನಿಯಮ ಅನುಕಂಪ ಆಧಾರಿತ ನೇಮಕಾತಿಯಲ್ಲಿ 2002ರಲ್ಲಿಯೇ ನೇಮಕಗೊಂಡಿದ್ದಾರೆ. ನಂತರ ವಿವಿಧ ಹಂತದ ಹುದ್ದೆಗಳಿಗೆ ಪದೋನ್ನತಿ ನೀಡಲಾಗಿದ್ದು, ಪ್ರಸ್ತುತ ಸಹಾಯಕ ಕುಲಸಚಿವರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಯಿಂದಲೇ ಅವರಿಗೆ ಅಂಗೀಕೃತ ಸಂಸ್ಥೆಗಳಿಂದ ಗಣಕಯಂತ್ರ ಮತ್ತು ಇನ್ನಿತರ ಆಡಳಿತಾತ್ಮಕ ತರಬೇತಿ ನೀಡಲಾಗಿದೆ. ವಕೀಲ ಪಿ.ರಾಮನಾಥ್ ಅವರಿಂದ ಕಾನೂನು ಸಲಹೆ ಪಡೆದುಕೊಳ್ಳಲಾಗಿದ್ದು, ದ್ವಿತೀಯ ದರ್ಜೆ ಹುದ್ದೆಯಿಂದ ಪ್ರಥಮ ದರ್ಜೆ ಗುಮಾಸ್ತರ ಹುದ್ದೆಗೆ ಪದೋನ್ನತಿಗೆ ಪದವಿಯ ಅವಶ್ಯಕತೆ ಇರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಹಿರಿಯ ಸಹಾಯಕ ಹುದ್ದೆಯಿಂದ ಅಧೀಕ್ಷಕ ಹುದ್ದೆಗೆ ಪದೋನ್ನತಿಗೆ ಹಿರಿಯ ಸಹಾಯಕ ಹುದ್ದೆಯಲ್ಲಿ ಯಾವುದೇ ಕನಿಷ್ಠ ಸೇವೆ ನಿಗದಿಯಾಗಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿರುತ್ತದೆ. ಆದಾಗ್ಯೂ ವರದಿಯಲ್ಲಿ ‘ಕನಿಷ್ಠ 5 ವರ್ಷಗಳ ಸೇವೆ ಬಳಿಕ ಬಡ್ತಿ ನೀಡಬೇಕೆಂಬ ನಿಯಮವಿದ್ದರೂ 1 ವರ್ಷದ ಅಂತರದಲ್ಲಿ ನಾಲ್ವರಿಗೆ ಅಧೀಕ್ಷಕ ಹುದ್ದೆಗೆ ಪದೋನ್ನತಿ ನೀಡಲಾಗಿತ್ತು’ ಎಂದು ತಪ್ಪು ಕಲ್ಪನೆಯ ವರದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts