ಪ್ರಕರಣಗಳ ಹಂಚಿಕೆಯಲ್ಲಿ ಸಿಜೆಐಗೆ ವಿಶೇಷ ಅಧಿಕಾರವಿದೆ: ಸುಪ್ರೀಂ

ನವದೆಹಲಿ: ಸುಪ್ರೀಂ ಕೋರ್ಟ್‌ನ ಸಮಾನ ನ್ಯಾಯಾಧೀಶರಲ್ಲಿ ಮುಖ್ಯ ನ್ಯಾಯಾಧೀಶರೇ ಮೊದಲಿಗರಾಗಿದ್ದು, ಅವರೇ ನ್ಯಾಯಾಲಯದ ವಿವಿಧ ಪೀಠಗಳಿಗೆ ಪ್ರಕರಣಗಳ ವಿಚಾರಣೆಗಳನ್ನು ನಿಯೋಜಿಸುವ ಅಧಿಕಾರ ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಮಾಜಿ ಕಾನೂನು ಸಚಿವ ಶಾಂತಿ ಭೂಷಣ್‌ ಅವರು ಸಿಜೆಐಯಿಂದ ಸುಪ್ರೀಂ ಕೋರ್ಟ್‌ನಲ್ಲಿನ ಪ್ರಕರಣಗಳ ಹಂಚಿಕೆಯ ರೋಸ್ಟರ್ ಆಚರಣೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.

ನ್ಯಾಯಾಧೀಶರಾದ ಎ.ಕೆ.ಸಿಕ್ರಿ ಮತ್ತು ಅಶೋಕ್‌ ಭೂಷಣ್‌ ಅವರನ್ನೊಳಗೊಂಡ ಪೀಠ, ಸಮಾನ ನ್ಯಾಯಾಧೀಶರಲ್ಲಿ ಮೊದಲಿಗರಾಗಿ ಸಿಜೆಐ ಇರುತ್ತಾರೆ. ಹಾಗಾಗಿ ಪ್ರಕರಣಗಳನ್ನು ವಿಚಾರಣೆಗೆ ಬೇರೆ ಪೀಠಗಳಿಗೆ ಹಂಚುವಾಗ ಅವರು ವಿಶೇಷ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಹೇಳಿದೆ.

ನ್ಯಾಯಮೂರ್ತಿ ಸಿಕ್ರಿ ಮಾತನಾಡಿ, ಸಂವಿಧಾನವೇ ಮುಖ್ಯ ನ್ಯಾಯಮೂರ್ತಿಗಿರುವ ವಿಶೇಷ ಅಧಿಕಾರವನ್ನು ಒಪ್ಪಿಕೊಂಡು ನ್ಯಾಯಾಲಯದ ಶಿಸ್ತು ಮತ್ತು ಆರೋಗ್ಯವನ್ನು ಪಾಲಿಸುತ್ತಿದೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಪ್ರಶ್ನಿಸುವಂತಿಲ್ಲ. ನ್ಯಾಯಾಧೀಶರ ಮಧ್ಯೆ ತಕರಾರು ಮತ್ತು ಭಿನ್ನಾಭಿಪ್ರಾಯ ಉಂಟಾದರೆ ಅದು ದೇಶದ ಜನತೆಗೆ ತಪ್ಪು ಸಂದೇಶ ರವಾನೆ ಮಾಡುತ್ತದೆ. ಇದು ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತದೆ. ಸಿಜೆಐ ಎಂದರೆ ಅವರು ನ್ಯಾಯಾಂಗ ವ್ಯವಸ್ಥೆಯ ವಕ್ತಾರರಾಗಿ ಅಥವಾ ನಾಯಕರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಸಿಜೆಐ ಅನ್ನು ಕೊಲಿಜಿಯಂ ನ ಒಂದು ಭಾಗ ಎಂದು ಅರ್ಥೈಸುವ ವ್ಯಾಖ್ಯಾನವನ್ನು ಸ್ವೀಕರಿಸುವುದು ಕಷ್ಟ. ಅಂತಹ ವ್ಯಾಖ್ಯಾನವು ದೈನಂದಿನ ಕಾರ್ಯಚಟುವಟಿಕೆಗಳನ್ನು ಕಷ್ಟಕರವಾಗಿಸುತ್ತದೆ. ಸುಪ್ರೀಂ ಕೋರ್ಟ್‌ನ ಸಮಯ ಪರೀಕ್ಷೆ ಮಾಡುವಂತ ಹೇಳಿಕೆಗಳು ಮತ್ತು ಅಭ್ಯಾಸಗಳಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಎಂದು ಹೇಳಿದರು. (ಏಜೆನ್ಸೀಸ್)