ಸಿಜೆಐ ಸ್ಥಾನಕ್ಕೆ ಗೊಗೋಯ್​ ಹೆಸರು ಶಿಫಾರಸು ಮಾಡಿದ ದೀಪಕ್​ ಮಿಶ್ರಾ

ನವದೆಹಲಿ: ನ್ಯಾಯಮೂರ್ತಿ ರಂಜನ್​ ಗೊಗೋಯ್​ ಅವರ ಹೆಸರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿ ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರು ಕೇಂದ್ರ ಸರ್ಕಾರಕ್ಕೆ ಇಂದು ಪತ್ರ ರವಾನಿಸಿದ್ದಾರೆ.

ಸುಪ್ರೀಂ ಕೋರ್ಟ್​ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಗಳಾಗಿರುವ ರಂಜನ್​ ಗೊಗೋಯ್​ ಅವರು, ಅಕ್ಟೋಬರ್​ 3ರಂದು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರ ಅವಧಿ ಅಕ್ಟೋಬರ್​ 2ರ ವರೆಗೆ ಇದೆಯಾದರೂ, ಅಕ್ಟೋಬರ್​ 2ರಂದು ಸಾರ್ವತ್ರಿಕ ರಜೆ ಇರುವ ಕಾರಣಕ್ಕೆ ಅವರು ಒಂದು ದಿನ ಮೊದಲೇ, ಅಂದರೆ, ಅಕ್ಟೋಬರ್​ 1ರಂದು ನಿವೃತ್ತರಾಗುತ್ತಿದ್ದಾರೆ.

ಸೇವೆಯಿಂದ ನಿವೃತ್ತರಾಗುವ ಮುಖ್ಯನ್ಯಾಯಮೂರ್ತಿಗಳು, ಮತ್ತೊಬ್ಬ ಹಿರಿಯ ನ್ಯಾಯಮೂರ್ತಿಗಳನ್ನು ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಮಿಶ್ರಾ ಅವರೂ ಈ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

ದೀಪಕ್​ ಮಿಶ್ರಾ ಅವರು ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ಸೂಕ್ತರಾದವರನ್ನು ಶಿಫಾರಸು ಮಾಡುವಂತೆ ಕೇಂದ್ರ ಕಾನೂನು ಸಚಿವರು ಇತ್ತೀಚೆಗೆ ಕೋರಿದ್ದರು. ಅದರಂತೆ ಗೊಗೋಯ್​ ಅವರ ಹೆಸರನ್ನು ಸಿಜೆಐ ಮಿಶ್ರಾ ಶಿಫಾರಸು ಮಾಡಿದ್ದು, ರಾಷ್ಟ್ರಪತಿಯವರಿಂದ ಮುಖ್ಯನ್ಯಾಯಮೂರ್ತಿಯವರ ನೇಮಕವಾಗಲಿದೆ.

ನ್ಯಾ. ಗೊಗೋಯ್​ ಅವರ ಅವಧಿ ನವೆಂಬರ್​ 17ರ ವರೆಗೆ ಇರಲಿದೆ. ಜನವರಿಯಲ್ಲಿ ಸುಪ್ರೀಂಕೋರ್ಟ್​ನ ಮುಖ್ಯನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರ ವಿರುದ್ಧ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ್ದ ನಾಲ್ವರು ನ್ಯಾಯಮೂರ್ತಿಗಳಲ್ಲಿ ಗೊಗೋಯ್​ ಅವರೂ ಒಬ್ಬರಾಗಿದ್ದರು.