ಸಿಜೆಐ ಹುದ್ದೆಗೆ ಈಶಾನ್ಯ ರಾಜ್ಯದ ಮೊದಲಿಗ ನ್ಯಾ. ಗೊಗೋಯ್

ನವದೆಹಲಿ: ಸುಪ್ರೀಂ ಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಹಾಲಿ ಸಿಜೆಐ ದೀಪಕ್ ಮಿಶ್ರಾ ಶಿಫಾರಸು ಮಾಡಿದ್ದಾರೆ.

ಸಿಜೆಐ ನೇಮಕ ಪ್ರಕ್ರಿಯೆಗೆ ಸಂಬಂಧಿಸಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಪತ್ರಕ್ಕೆ ಅಧಿಕೃತವಾಗಿ ಮಂಗಳವಾರ ಪ್ರತಿಕ್ರಿಯಿಸಿರುವ ನ್ಯಾ.ದೀಪಕ್ ಮಿಶ್ರಾ, ಅಸ್ಸಾಂನ ನ್ಯಾ.ಗೊಗೋಯ್ ಹೆಸರು ಸೂಚಿಸಿದ್ದಾರೆ. ನಿವೃತ್ತಿಗೆ ಒಂದು ತಿಂಗಳು ಮೊದಲು ಮುಂದಿನ ಸಿಜೆಐ ಹೆಸರು ಶಿಫಾರಸು ಮಾಡುವುದು ಸುಪ್ರೀಂ ಕೋರ್ಟ್​ನ ವಾಡಿಕೆಯಾಗಿದೆ. ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ದೀಪಕ್ ಮಿಶ್ರಾ ಅವರು ಅ.2ರಂದು ನಿವೃತ್ತಿಯಾಗುತ್ತಿದ್ದು, ಅ.3ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಂದಿನ ಸಿಜೆಐ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕೇಂದ್ರ ಸರ್ಕಾರ ಈ ಶಿಫಾರಸು ಒಪ್ಪಿಕೊಂಡರೆ ಸಿಜೆಐ ಹೊಣೆಗಾರಿಕೆ ಹೊಂದಿದ ಈಶಾನ್ಯ ಭಾರತದ ಮೊದಲ ವ್ಯಕ್ತಿ ಎಂಬ ಖ್ಯಾತಿಗೆ ನ್ಯಾ.ರಂಜನ್ ಗೊಗೋಯ್ ಪಾತ್ರರಾಗಲಿದ್ದಾರೆ. ನ್ಯಾ.ಚೆಲಮೇಶ್ವರ್ ಜತೆ ಸುದ್ದಿಗೋಷ್ಠಿ ನಡೆಸಿದ ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ನ್ಯಾ.ಗೊಗೋಯ್ ಕೂಡ ಒಬ್ಬರಾಗಿದ್ದರು. ಗುವಾಹಟಿ ಹೈಕೋರ್ಟ್​ಗೆ 2001ರಲ್ಲಿ ನ್ಯಾಯಮೂರ್ತಿಯಾಗಿ ನೇಮಕವಾದ ನ್ಯಾ.ಗೊಗೋಯ್, 2012ರಲ್ಲಿ ಸುಪ್ರೀಂ ಕೋರ್ಟ್​ಗೆ ಬಡ್ತಿ ಪಡೆದಿದ್ದರು.