ಮಾನದಂಡಗಳು ನಿಗದಿಯಾಗುವವರೆಗೆ ತುರ್ತು ವಿಚಾರಣೆ ಇಲ್ಲ: ರಂಜನ್​ ಗೊಗೋಯ್​

ನವದೆಹಲಿ: ಆದ್ಯತೆ ಮೇರೆಗೆ ವಿಚಾರಣೆ ನಡೆಸುವ ಪ್ರಕರಣಗಳು ಮತ್ತು ತುರ್ತು ವಿಚಾರಣೆ ನಡೆಸುವ ಪ್ರಕರಣಗಳ ಕುರಿತು ನೂತನ ಮಾನದಂಡಗಳ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವವರೆಗೆ ಯಾವುದೇ ಪ್ರಕರಣವನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯ್​ ತಿಳಿಸಿದ್ದಾರೆ.

46ನೇ ಮುಖ್ಯನ್ಯಾಯಮೂರ್ತಿಯಾಗಿ ರಂಜನ್​ ಗೊಗೋಯ್​ ಅವರು ಬುಧವಾರ ಬೆಳಗ್ಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಆ ನಂತರ ಅವರು ಸುಪ್ರೀಂ ಕೋರ್ಟ್​ಗೆ ತೆರಳಿ ಮುಖ್ಯನ್ಯಾಯಮೂರ್ತಿಯಾಗಿ ಮೊದಲ ವಿಚಾರಣೆ ಕೈಗೆತ್ತುಕೊಂಡರು. ಈ ಸಂದರ್ಭದಲ್ಲಿ ಅವರು ತುರ್ತು ವಿಚಾರಣೆ ಕುರಿತು ಮಾನದಂಡಗಳನ್ನು ರಚಿಸಲಾಗುತ್ತಿದೆ. ನಾಳೆ ಯಾರಿಗಾದರೂ ಗಲ್ಲು ಶಿಕ್ಷೆಯಾಗುತ್ತಿದೆ ಎಂದಾದರೆ ಆ ಪ್ರಕರಣವನ್ನು ತುರ್ತು ವಿಚಾರಣೆ ನಡೆಸಬಹುದು. ಆದರೆ, ಎಲ್ಲಾ ಪ್ರಕರಣಗಳನ್ನು ಹೀಗೆ ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಗೊಗೋಯ್​ ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲ ಪ್ರಶಾಂತ್​ ಭೂಷಣ್​ ಅವರು ರೋಹಿಂಗ್ಯಾ ಮುಸ್ಲಿಮರನ್ನು ಮ್ಯಾನ್ಮಾರ್​ಗೆ ಗಡಿಪಾರು ಮಾಡಿದ ಪ್ರಕರಣವನ್ನು ತುರ್ತು ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ ನ್ಯಾಯ ಪೀಠ ಅರ್ಜಿಯನ್ನು ಪರಿಶೀಲಿಸಿದ ನಂತರ ತನ್ನ ನಿರ್ಧಾರವನ್ನು ತಿಳಿಸಲಿದೆ ಎಂದು ತಿಳಿಸಿದರು. (ಏಜೆನ್ಸೀಸ್​)