ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ನಾಳಿನ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಪೊಲೀಸ್ ಪೇದೆ ಹುದ್ದೆಯ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪರೀಕ್ಷೆ ಪ್ರಕ್ರಿಯೆ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಂಡಿದೆ.

ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣಕರ್ತ ಎನ್ನಲಾಗಿರುವ ಕಿಂಗ್​ಪಿನ್ ಹಾಗೂ ಕದ್ದು ಪರೀಕ್ಷೆ ಬರೆಯಲು ಅಣಿಯಾಗುತ್ತಿದ್ದ ನಾಲ್ವರು ಯುವತಿಯರೂ ಸೇರಿದಂತೆ ಒಟ್ಟು 115 ಮಂದಿ ಪರೀಕ್ಷಾರ್ಥಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದರು.

ತುಮಕೂರಿನ ಶಿವಕುಮಾರ್ ಎಂಬಾತ ಈ ಅಭ್ಯರ್ಥಿಗಳಿಂದ ಹಣ ಪಡೆದು ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಹಂಚಲು ಹವಣಿಸುತ್ತಿದ್ದ ಎನ್ನಲಾಗಿದೆ. ಇದರ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸ್ ಅಧಿಕಾರಿ ವೇಣುಗೋಪಾಲ್ ಮತ್ತು ಹಾಸನ ವೃತ್ತ ನಿರೀಕ್ಷಕ ಸತ್ಯ ನಾರಾಯಣ ಅವರು ಮಿಂಚಿನ ದಾಳಿ ನಡೆಸಿ ಕಿಂಗ್ ಪಿನ್ ಶಿವಕುಮಾರ್ ಪರೀಕ್ಷಾರ್ಥಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಪೊಲೀಸ್ ಹುದ್ದೆ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಪೊಲೀಸ್ ಇಲಾಖೆ ರದ್ದುಪಡಿಸಿ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇದರಿಂದಾಗಿ ಸರಕಾರಿ ಸೇವೆಯ ಕನಸು ಕಾಣುತ್ತಿದ್ದ ಅಭ್ಯರ್ಥಿಗಳು ನಿರಾಶರಾಗುವಂತಾಗಿದೆ.
ಒಟ್ಟು 2,113 ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸಿವಿಲ್ ಪೊಲೀಸ್ ಹುದ್ದೆಗೆ ಬೆಂಗಳೂರಿನಲ್ಲಿ ಲಿಖಿತ ಪರೀಕ್ಷೆ ಬರೆಯಬೇಕಿತ್ತು.

ಪರೀಕ್ಷಾರ್ಥಿಗಳಿಗೆ ತೊಂದರೆ

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಭಾನುವಾರ ನಿಗದಿಯಾಗಿದ್ದ ಸಿವಿಲ್‌ ‌ಪೊಲೀಸ್ ಲಿಖಿತ ಪರೀಕ್ಷೆ ದಿಢೀರನೆ ಮುಂದೂಡಿದ ಹಿನ್ನೆಲೆಯಲ್ಲಿ ದೂರದ ಊರುಗಳಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ.

ಹುಬ್ಬಳಿಯ ಅಭ್ಯರ್ಥಿಗಳು ಶನಿವಾರ ಮಧ್ಯಾಹ್ನ 2.15ರ ಜನಶತಾಬ್ದಿ ಎಕ್ಸ್​ಪ್ರೆಸ್​ನಲ್ಲಿ ಬೆಂಗಳೂರಿಗೆ ಬರಲು ಅಣಿಯಾಗಿದ್ದರು. ಆದರೆ, ಮದ್ಯಾಹ್ನ ೧.45ಕ್ಕೆ ಪರೀಕ್ಷೆ ಮುಂದೂಡಿದ ಬಗ್ಗೆ ಪರೀಕ್ಷಾರ್ಥಿಗಳ ಮೊಬೈಲ್​​ಗೆ ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಟಿಕೆಟ್​ ರದ್ದು ಮಾಡಲು ಅಭ್ಯರ್ಥಿಗಳು ಮನವಿ ಮಾಡಿದ್ದರು. ಆದರೆ, ಕಾಯ್ದಿರಿಸಿದ್ದ ಟಿಕೆಟ್ ರದ್ದುಗೊಳಿಸಲು ರೈಲ್ವೆ ಸಿಬ್ಬಂದಿ ನಿರಾಕರಿಸಿದರು.

ಬೇಸರದ ಸಂಗತಿ ಎಂದರೆ, ಈ ವಿದ್ಯಾರ್ಥಿಗಳೆಲ್ಲ ಇಂದು ರಾಣಿ ಚೆನ್ನಮ್ಮ ವಿವಿಯಲ್ಲಿ ಇಂದು ನಡೆಯುತ್ತಿದ್ದ ಪದವಿ ಪರೀಕ್ಷೆ ಬಿಟ್ಟು ಪೊಲೀಸ್ ಆಗುವ ಕನಸು ಹೊತ್ತು ಬೆಂಗಳೂರಿನತ್ತ ಹೊರಟಿದ್ದರು.