ವಿಮಾನಯಾನ ಡೋಲಾಯಮಾನ

ದೇಶದ ನಾಗರಿಕ ವಿಮಾನಯಾನ ಕ್ಷೇತ್ರ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಪ್ರಯಾಣಿಕರ ಸಂಖ್ಯೆಯ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಉದ್ಯಮ ಎನ್ನುವ ಹೆಗ್ಗಳಿಕೆ ಹೊಂದಿದ್ದರೂ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಈ ಸಂಕಷ್ಟ ಎದುರಾಗಿದ್ದು ಹೇಗೆ? ವಿವಿಧ ಸಂಸ್ಥೆಗಳ ನಡುವೆ ಏರ್ಪಟ್ಟ ದರ ಸಮರವೇ ನಷ್ಟಕ್ಕೆ ಕಾರಣವಾಯಿತೇ?

|ರಾಜೀವ್ ಹೆಗಡೆ

ದೇಶದ ವಿಮಾನಯಾನಿಗಳ ಪಾಲಿಗೆ ಸಂತಸದ ದಿನಗಳು ಕಾಣುತ್ತಿದ್ದರೂ ವೈಮಾನಿಕ ಉದ್ಯಮ ಮಾತ್ರ ಡೋಲಾಯಮಾನ ಸ್ಥಿತಿಗೆ ತಲುಪಿದೆ. 2008ರ ಮಹಾ ಸಂಕಷ್ಟದ ದಿನಗಳತ್ತ ನಾಗರಿಕ ವಿಮಾನಯಾನ ಕ್ಷೇತ್ರ ವಾಲುತ್ತಿದೆ. ಡೆಕ್ಕನ್ ಏರ್​ವೇಸ್, ಕಿಂಗ್​ಫಿಶರ್​ನ ಕರಾಳ ದಿನಗಳು ಉದ್ಯಮಿಗಳ ಕಣ್ಣೆದುರಿಗೆ ಬರುತ್ತಿವೆ. ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ವಿಶ್ವದ ಮೂರನೇ ಅತಿ ದೊಡ್ಡ ವಿಮಾನಯಾನ ಉದ್ಯಮ ಎಂಬ ಹೆಗ್ಗಳಿಕೆ ದೇಶದ ವೈಮಾನಿಕ ಕ್ಷೇತ್ರಕ್ಕೆ ಇದೆ. ಜತೆಗೆ, 2025ರ ವೇಳೆಗೆ ಮಾರುಕಟ್ಟೆ ವ್ಯಾಪ್ತಿಯಲ್ಲಿ ಇನ್ನೂ ಉನ್ನತಿ ತಲುಪಲಿದೆ ಎಂಬ ನಿರೀಕ್ಷೆಯ ಮಧ್ಯೆಯೂ ದೇಶದ ಪ್ರಮುಖ ಮೂರು ಖಾಸಗಿ ವೈಮಾನಿಕ ಸಂಸ್ಥೆಗಳು ನಷ್ಟದ ಕೂಪಕ್ಕೆ ಸಿಲುಕಿವೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯು -ಠಿ;48 ಸಾವಿರ ಕೋಟಿಗೂ ಅಧಿಕ ಸಾಲದ ಹೊರೆಯಲ್ಲಿ ನರಳಾಡುತ್ತಿದ್ದರೆ, ಇದೇ ಮೊದಲ ಬಾರಿಗೆ ಇಂಡಿಗೋ ಹಾಗೂ ಸ್ಪೈಸ್ ಜೆಟ್ ಕೂಡ ನಷ್ಟದತ್ತ ಮುಖ ಮಾಡಿವೆ. ಜೆಟ್ ಏರ್​ವೇಸ್ ಕೂಡ ಲಾಭದತ್ತ ಹೊರಳುವ ಲಕ್ಷಣ ಕಾಣಿಸದೆ ಷೇರು ಮಾರಾಟ ಮಾಡುವ ಹಂತಕ್ಕೆ ತಲುಪಿದೆ.

ದರ ಸಮರ: 2004ರಲ್ಲಿ ಡೆಕ್ಕನ್ ಏರ್​ವೇಸ್ ಮೂಲಕ ಭಾರತೀಯ ವಿಮಾನಯಾನದಲ್ಲಿ ದರ ಸಮರ ಶುರುವಾಯಿತು. ಈ ಹಿಂದೆ, ಐಷಾರಾಮಿ ಸವಲತ್ತುಗಳು ಪ್ರಯಾಣಿಕರ ಆಕರ್ಷಣೆಗೆ ವಸ್ತುವಾಗಿದ್ದರೆ, ಡೆಕ್ಕನ್ ಏರ್​ವೇಸ್ ಬಳಿಕ ದರವೇ ಪ್ರಮುಖ ವಿಚಾರವಾಯಿತು. ವಿಮಾನಯಾನ ಉದ್ಯಮವನ್ನು ದರ ಸಮರದಿಂದಲೇ ಆರಂಭಿಸಬೇಕು ಎನ್ನುವ ಸ್ಪರ್ಧೆ ಶುರುವಾಯಿತು. ಕಳೆದ 4 ವರ್ಷಗಳಿಂದ ದೇಶದ ಯಾವುದೇ ಮೂಲೆಗೆ 2-5 ಸಾವಿರ ರೂ.ಗಳೊಳಗೆ ಪ್ರಯಾಣಿಸುವ ಅವಕಾಶ ದೊರೆಯಿತು. ಈಗ ದರ ಏರಿಕೆ ಮಾಡಿದರೆ ಪ್ರಯಾಣಿಕರನ್ನು ಕಳೆದುಕೊಳ್ಳುವ ಭಯದಿಂದ ನಷ್ಟದ ನಡುವೆಯೂ ಸಮರ ಮುಂದುವರಿದಿದೆ. ಕಳೆದ 4 ವರ್ಷಗಳಲ್ಲಿ ಪ್ರಾದೇಶಿಕ ವಿಮಾನ ಯಾನದ ದರದಲ್ಲಿ ಶೇ.40 ಇಳಿಕೆಯಾಗಿದೆ.

ಇಂಧನ ದರ: ಕಳೆದ 4 ವರ್ಷಗಳಲ್ಲಿ ಬ್ರೆಂಟ್ ಕಚ್ಚಾತೈಲ ಬೆಲೆಯು ಪ್ರತಿ ಬ್ಯಾರಲ್​ಗೆ 35-130 ಡಾಲರ್​ವರೆಗೂ ಏರಿಕೆಯಾಗುತ್ತ, ಇಳಿಕೆಯಾಗುತ್ತ ಕಣ್ಣಾಮುಚ್ಚಾಲೆ ಆಡುತ್ತಿದೆ. 2014ರ ಬಳಿಕ ಪ್ರತಿ ಬ್ಯಾರಲ್​ಗೆ 130 ಡಾಲರ್​ನಿಂದ ಇಳಿಕೆಯಾಗುತ್ತಿದ್ದಂತೆ ದರದಲ್ಲಿ ಶೇ.40 ಇಳಿಕೆಯಾಯಿತು. ಆದರೆ ಈಗ ದರ ಏರಿಕೆ ಮಾಡಲು ಸಾಧ್ಯವಿಲ್ಲ. ಸದ್ಯ 80 ಡಾಲರ್ ಆಸುಪಾಸಿಗೆ ಕಚ್ಚಾತೈಲ ಸಿಗುತ್ತಿದ್ದರೂ ನಿರ್ವಹಣೆ ಕಷ್ಟವಾಗುತ್ತಿದೆ. ಸದ್ಯದ ತೈಲ ದರದಂತೆ ವಿಮಾನಯಾನ ಉದ್ಯಮಕ್ಕೆ ಪ್ರತಿ ಸೀಟಿನ ಮೇಲಿನ ನಿರ್ವಹಣಾ ವೆಚ್ಚಕ್ಕಿಂತ ಆದಾಯ ಕಡಿಮೆಯಾಗುತ್ತಿದೆ. ಈ ಕಾರಣಕ್ಕಾಗಿ ಇಂಡಿಗೋ ಸಂಸ್ಥೆಯು ಮೊದಲ ಬಾರಿಗೆ 652 ಕೋಟಿ ರೂ. ನಷ್ಟ ತೋರಿಸಿದೆ. ಸ್ಪೈಸ್​ಜೆಟ್ ಕಂಪನಿ ಕೂಡ 389 ಕೋಟಿ ರೂ.ಗಳ ತ್ರೖೆಮಾಸಿಕ ನಷ್ಟದ ವರದಿ ನೀಡಿದೆ.

ಮೂಲಸೌಕರ್ಯ ಅಭಿವೃದ್ಧಿ

ಲೋಕಸಭೆಗೆ ಕೇಂದ್ರ ಸರ್ಕಾರವೇ ನೀಡಿದ ವರದಿ ಪ್ರಕಾರ, ಭಾರತದಲ್ಲಿ ವಿಮಾನಯಾನಕ್ಕೆ ಸಂಬಂಧಿಸಿ ಪ್ರಯಾಣಿಕರು ನೀಡುತ್ತಿರುವ ಬಹುತೇಕ ದೂರುಗಳು ವಿಮಾನದ ವಿಳಂಬಕ್ಕೆ ಸಂಬಂಧಿಸಿವೆ. ವಿಮಾನನಿಲ್ದಾಣಗಳಲ್ಲಿ ಸಂಚಾರ ವ್ಯತ್ಯಯವು ಈ ವಿಳಂಬಕ್ಕೆ ಕಾರಣವಾಗಿದೆ. ಹೀಗಾಗಿ ಸಂಸ್ಥೆಗಳು ನೇರ ಕಾರಣವಲ್ಲ. ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಸಂಗ್ರಹಿಸಿರುವ 4086 ಕೋಟಿ ರೂ.ಗಳಲ್ಲಿ ಕೇವಲ 345 ಕೋಟಿ ರೂ. ವ್ಯಯಿಸಲಾಗಿದೆ. ಜಾಗತಿಕ ಸಂಸ್ಥೆಗಳ ಭವಿಷ್ಯದ ವರದಿ ಆಧರಿಸಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡದಿದ್ದರೆ ಉದ್ಯಮಗಳು ನಷ್ಟದ ಜತೆಗೆ ಇನ್ನಷ್ಟು ನಿರ್ವಹಣಾ ಒತ್ತಡ ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ಭಾರತ ಸರ್ಕಾರ ನೀಡಿರುವ ಭರವಸೆಗಳಂತೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ 15 ಹೊಸ ವಿಮಾನ ನಿಲ್ದಾಣ ಹಾಗೂ ಹಾಲಿ ನಿಲ್ದಾಣಗಳ ಅಭಿವೃದ್ಧಿಗೆ 15 ಸಾವಿರ ಕೋಟಿ ರೂ. ಮೀಸಲಿಡಲಾಗುತ್ತಿದೆ. ಇದಲ್ಲದೆ, ಹಾಲಿ ವಿಮಾನನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ 2026ರವರೆಗೆ 13,173 ಕೋಟಿ ರೂ. ಇರಿಸಲಾಗಿದೆ.

ಡಾಲರ್ ವಹಿವಾಟು: ಪ್ರಾದೇಶಿಕ ವಿಮಾನಯಾನದಲ್ಲಿ ಲಾಭವಿಲ್ಲದಿದ್ದರೂ ಅಸ್ತಿತ್ವಕ್ಕಾಗಿ ವಿಮಾನ ಹಾರಾಟ ನಡೆಸಲಾಗುತ್ತದೆ. ಆದರೆ, ರೂಪಾಯಿ ಎದುರು ಡಾಲರ್ ಮೌಲ್ಯ ಹೆಚ್ಚುತ್ತಿರುವುದು ಅಂತಾರಾಷ್ಟ್ರೀಯ ಸೇವೆಗಳನ್ನೂ ದುಬಾರಿಯನ್ನಾಗಿಸಿದೆ. ವಿದೇಶಗಳಲ್ಲಿ ಇಂಧನ ಭರ್ತಿ ಹಾಗೂ ರ್ಪಾಂಗ್ ಶುಲ್ಕವನ್ನು ಡಾಲರ್​ನಲ್ಲಿ ನೀಡಬೇಕಾಗುತ್ತದೆ. 2018ರಲ್ಲಿ ಡಾಲರ್ ಏರುಮುಖದಲ್ಲಿ ಸಾಗುತ್ತಿರುವುದೂ ಈ ಆರ್ಥಿಕ ಸಂಕಷ್ಟಕ್ಕೆ ಪ್ರಮುಖ ಕಾರಣ.

ಜಿಎಸ್​ಟಿ ವಿಳಂಬ: ವಿಮಾನದ ಇಂಧನದ ಮೇಲೆ ಶೇ.43-50ರವರೆಗೆ ತೆರಿಗೆ ಹಾಕಲಾಗುತ್ತಿದೆ. ಪ್ರತಿ ರಾಜ್ಯದಲ್ಲಿಯೂ ವಿಭಿನ್ನ ಸ್ತರದ ತೆರಿಗೆಗಳಿವೆ. ಇದನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕು ಎನ್ನುವುದು ಉದ್ಯಮದ ಆಗ್ರಹ. ಇದಕ್ಕೆ ರಾಜ್ಯ ಸರ್ಕಾರಗಳು ಒಪು್ಪತ್ತಿಲ್ಲ. ಅಸೋಚಾಮ್ ವರದಿ ಪ್ರಕಾರ ಜಿಎಸ್​ಟಿ ವ್ಯಾಪ್ತಿಗೆ ಬಂದರೆ ವೈಮಾನಿಕ ಸಂಸ್ಥೆಗಳಿಗೆ ವಾರ್ಷಿಕ 1100 ಕೋಟಿ ರೂ. ಉಳಿಯಲಿದೆ.

ಆಗಸದೆತ್ತರದ ನಿರೀಕ್ಷೆ: ಜಾಗತಿಕ ವಿಮಾನಯಾನ ಒಕ್ಕೂಟದ ವರದಿ ಪ್ರಕಾರ ಇನ್ನೆರಡು ದಶಕಗಳಲ್ಲಿ ಭಾರತವು ವಿಶ್ವದ ಅತಿ ದೊಡ್ಡ ವಿಮಾನಯಾನ ಮಾರುಕಟ್ಟೆಯಾಗಲಿದೆ. ವಾರ್ಷಿಕ 11 ಲಕ್ಷ ಕೋಟಿ ರೂ.ಗಳಿಗೂ ಅಧಿಕ ವಹಿವಾಟಿನ ಜತೆ 60 ಲಕ್ಷ ಉದ್ಯೋಗ ನೀಡಲಿದೆ. ಕಳೆದ 18 ವರ್ಷಗಳಲ್ಲಿ ಪ್ರಯಾಣಿಕರ ಸಂಖ್ಯೆ 1.4 ಕೋಟಿಯಿಂದ 14 ಕೋಟಿಗೆ ಏರಿದೆ. ಇದು 100 ಕೋಟಿ ದಾಟಲಿದೆ ಎನ್ನುವುದು ಕೇಂದ್ರ ಸರ್ಕಾರದ ನಿರೀಕ್ಷೆ. ಇದಕ್ಕಾಗಿ ಮುಂದಿನ ದಶಕಗಳಲ್ಲಿ ಭಾರತಕ್ಕೆ 1700 ಬೃಹತ್ ವಿಮಾನಗಳು ಬರುತ್ತಿವೆ. ಸದ್ಯಕ್ಕೆ ಭಾರತದಲ್ಲಿ 558 ವಾಣಿಜ್ಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಷೇತ್ರದಲ್ಲಿ ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಹೂಡಿಕೆಯಾಗುತ್ತಿದೆ. ಉಡಾನ್ ಸೇರಿ ಇತರ ಯೋಜನೆಗಳ ಮೂಲಕ ಭಾರತ ಸರ್ಕಾರವೂ ವಿಮಾನಯಾನ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಹೀಗಾಗಿ ನಷ್ಟದ ನಡುವೆಯೂ ಉದ್ಯಮಗಳು ಭಾರಿ ನಿರೀಕ್ಷೆ ಹೊಂದಿವೆ. ಜಾಗತಿಕ ಸಂಸ್ಥೆಗಳ ಈ ಅಂಕಿ ಸಂಖ್ಯೆಗಳು ಉದ್ಯಮವನ್ನು ಜೀವಂತವಾಗಿರಿಸಿವೆ.

(ಪ್ರತಿಕ್ರಿಯಿಸಿ: [email protected])