ಪಾಲಿಕೆ ಎದುರು ಪೌರಕಾರ್ಮಿಕರ ಹಠಾತ್ ಪ್ರತಿಭಟನೆ

ಬೆಳಗಾವಿ: ಬಾಕಿ ಇರುವ ವೇತನ ಪಾವತಿಸುವಂತೆ ಪಾಲಿಕೆಯ ಪೌರಕಾರ್ಮಿಕರು ಸೋಮವಾರ ಹಠಾತ್ ಆಗಿ ಸ್ವಚ್ಛತೆ ಕಾರ್ಯ ಸ್ಥಗಿತಗೊಳಿಸಿ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿದರು. ಪೌರಕಾರ್ಮಿಕರ ಖಾತೆಗೆ ನೇರವಾಗಿ ವೇತನ ಪಾವತಿಸಬೇಕು. ತಡೆ ಹಿಡಿದ ವೇತನವನ್ನು ಬಿಡುಗಡೆಗೊಳಿಸಬೇಕು.

ಸೆಪ್ಟೆಂಬರ್ ತಿಂಗಳ ವೇತನ ಗುತ್ತಿಗೆದಾರರು ನೀಡುವುದು ಬಾಕಿ ಇದೆ. ಅಕ್ಟೋಬರ್, ನವೆಂಬರ್ ತಿಂಗಳ ಸಂಬಳ ಪಾಲಿಕೆಯಿಂದ ನೇರವಾಗಿ ಪೌರಕಾರ್ಮಿಕರಿಗೆ ಖಾತೆಗೆ ಜಮಾ ಮಾಡಬೇಕಿತ್ತು. ಇನ್ನೂ ಮಾಡಿಲ್ಲ. ಈ ಬಗ್ಗೆ ಕೇಳಿದರೆ, ಪೌರಕಾರ್ಮಿಕರ ವೇತನ ಪಾವತಿ ಮಾಡಲು ಪಾಲಿಕೆಯಲ್ಲಿ ಅನುದಾನವಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯರಿಗೆ ಶಿಮ್ಲಾ ಪ್ರವಾಸ ಹೋಗಲು ಹಣವಿದೆೆ, ಆದರೆ ನಗರದ ಸ್ವಚ್ಛತೆಯಲ್ಲಿ ಕಾರ್ಯನಿರ್ವಸುತ್ತಿರುವ ಪೌರಕಾರ್ಮಿಕರ ವೇತನ ನೀಡಲು ಹಣವಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಕಾರ್ಮಿಕರ ವೇತನವನ್ನು ತಕ್ಷಣವೇ ನೇರವಾಗಿ ಖಾತೆಗಳಿಗೆ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಾಲಿಕೆಯ ಆಯುಕ್ತ ಶಶಿಧರ ಕುರೇರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಎರಡು ತಿಂಗಳ ವೇತನವನ್ನು ಕಾರ್ಮಿಕರ ಖಾತೆಗಳಿಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರಿಂದ ಬರಬೇಕಿರುವ ಒಂದು ತಿಂಗಳ ಸಂಬಳವನ್ನು ನೀಡಲು ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ತಮ್ಮ ಪ್ರತಿಭಟನೆ ಹಿಂಪಡೆದುಕೊಂಡರು.

ಪೌರ ಕಾರ್ಮಿಕರು ಮುಷ್ಕರ ನಡೆಸಿದ ಪರಿಣಾಮ ನಗರದಲ್ಲಿ ಸ್ವಚ್ಛತೆ ಕಾರ್ಯ ಮಾಡುವವರಿಲ್ಲದೆ ತ್ಯಾಜ್ಯ ಹಾಗೂ ಕಸ ರಸ್ತೆಗಳಲ್ಲಿ ಚೆಲ್ಲಾಪಿಲ್ಲಿ ಆಗಿ ಬಿದ್ದಿತ್ತು. ಗಣಪತಿ ಗಲ್ಲಿ ಮುಂತಾದ ಕಡೆಗಳಲ್ಲಿ ಕಸ ವಿಲೇವಾರಿ ಆಗದೇ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗಿತ್ತು.