ಪೌರ ಕಾರ್ಮಿಕರ ಗೃಹ ಭಾಗ್ಯಕ್ಕೆ ವಿಶೇಷ ಆದ್ಯತೆ

ಚಿತ್ರದುರ್ಗ: ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಿಶೇಷ ಆದ್ಯತೆ ನೀಡಿ ನೇರವಾಗಿ ಮನೆ ಮಂಜೂರು ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ಪೌರ ಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪೌರ ಕಾರ್ಮಿಕರಿಗೆ ಮೆದೇಹಳ್ಳಿ ಸಮೀಪ ನಗರಸಭೆಯ 15 ಎಕರೆ ಜಮೀನಲ್ಲಿ ಜಿ ಪ್ಲಸ್ ಟು ಮಾದರಿಯಲ್ಲಿ ಅಂದಾಜು 1800 ಮನೆಗಳನ್ನು ನಿರ್ಮಿಸಲಾಗುವುದು. ಲಾಟರಿ ಮೂಲಕ ಅರ್ಹರಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ಜಗತ್ತಿನಲ್ಲಿ ಪೌರ ಕಾರ್ಮಿಕರ ಕೆಲಸಕ್ಕೆ ಬೆಲೆ ಕಟ್ಟಲಾಗದು. ತಮ್ಮ ಶ್ರಮ ಸರ್ಕಾರದ ಗಮನಕ್ಕೆ ಬಂದಿದೆ. ಹಲವು ಪೌರ ಕಾರ್ಮಿಕರು ಐದಾರು ತಿಂಗಳಿಂದ ಸಂಬಳವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿರುವುದು ನೋವಿನ ಸಂಗತಿ ಎಂದರು.

ಕೇವಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಮಾತ್ರ ಪೌರ ಕಾರ್ಮಿಕರು ಎಂಬ ಭಾವನೆ ತಪ್ಪು. ಅವರನ್ನು ಕೀಳಾಗಿ ನೋಡುವುದೂ ಸರಿಯಲ್ಲ. ಯಾರು ಬೇಕಾದರೂ ಈ ವೃತ್ತಿ ಮಾಡಬಹುದು. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವುದರಿಂದ ಪೌರ ಕಾರ್ಮಿಕರ ಕೆಲಸಕ್ಕೂ ಹೆಚ್ಚಿನ ಬೇಡಿಕೆ ಬಂದಿದೆ ಎಂದರು.

ಹಿಂದೆ ಸಚಿವರಾಗಿದ್ದ ಬಸವಲಿಂಗಪ್ಪ ಮಲ ಹೊರುವ ಪದ್ಧತಿ ರದ್ದುಪಡಿಸಿದರು. ಇದಕ್ಕಾಗಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಬಸವಲಿಂಗಪ್ಪ ಅವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಮಲ ಹೊರುವವರು ಮತ್ತು ಹೊರಿಸುವ ಇಬ್ಬರನ್ನೂ ಜೈಲಿಗೆ ಕಳಿಸುವ ಕಠಿಣ ಕಾನೂನಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಯಾವುದೇ ಕಾರಣಕ್ಕೂ ನಿಮ್ಮ ಕೆಲಸಕ್ಕೆ ಕರೆತರಬೇಡಿ ಎಂದು ಸಲಹೆ ನೀಡಿದರು.

ನಗರಸಭೆ ಪೌರಾಯುಕ್ತ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಕಾಲ ಕಾಲಕ್ಕೆ ವೇತನ, ಇನ್ನಿತರೆ ಸೌಲಭ್ಯಗಳೊಂದಿಗೆ ದಿನಕ್ಕೆ 8 ತಾಸು ಕೆಲಸ ನಿಗದಿಪಡಿಸಿದೆ. ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡುತ್ತಿದೆ ಎಂದರು.

ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಡಿ. ದುರುಗೇಶ್, ಸ್ಲಂ ಜನಾಂದೋಲನ ತಾಲೂಕು ಅಧ್ಯಕ್ಷ ರಾಜಣ್ಣ, ಇಂಜಿನಿಯರ್ ರವಿಕುಮಾರ್, ರಾಮಚಂದ್ರಪ್ಪ, ಪೌರ ಕಾರ್ಮಿಕರಾದ ಮಹಂತೇಶ್, ಪಾರ್ವತಮ್ಮ, ತಿಮ್ಮಕ್ಕ, ಮೈಲಾರಪ್ಪ ಇದ್ದರು.

ಶೇ. 24 ನಿಧಿಯಡಿ 120 ಹೊರಗುತ್ತಿಗೆ ಪೌರಕಾರ್ಮಿಕರಿಗೆ ಮಂಚ ಹಾಗೂ ವಾಟರ್ ಫಿಲ್ಟರ್, 63 ಕಾಯಂ ನೌಕರರಿಗೆ ಒಟ್ಟು 2.20 ಲಕ್ಷ ರೂ. ವಿಶೇಷ ವೇತನ ವಿತರಿಸಲಾಯಿತು.