ಮತ್ತೆ ರಫೇಲ್ ಸಮರ ಶುರು

ಚಳಿಗಾಲದ ಅಧಿವೇಶನದಲ್ಲಿ ಭಾರಿ ಗದ್ದಲ ಎಬ್ಬಿಸಿದ್ದ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣ ಈಗ ಮತ್ತೆ ಚರ್ಚೆಗೆ ಬಂದಿದೆ. ಎನ್​ಡಿಎ ಅವಧಿಯಲ್ಲಿ ರಫೇಲ್ ಖರೀದಿ ಮೊತ್ತದಲ್ಲಿ ಶೇ.41.42 ಏರಿಕೆಯಾಗಿದೆ ಎಂದು ‘ದಿ ಹಿಂದು’ ಪತ್ರಿಕೆ ವರದಿ ಮಾಡಿದೆ. ಆದರೆ ಇದನ್ನು ನಿರಾಕರಿಸಿರುವ ರಕ್ಷಣಾ ಸಚಿವಾಲಯ, ಸುಳ್ಳು ಮಾಹಿತಿ ನೀಡಲಾಗುತ್ತಿದೆ ಎಂದು ಕಿಡಿಕಾರಿದೆ. ಪ್ರತಿಪಕ್ಷ ಕಾಂಗ್ರೆಸ್ ಇದನ್ನೇ ಅಸ್ತ್ರವಾಗಿಸಿಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

‘ದಿ ಹಿಂದು’ ವರದಿ ಏನು?

ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ 126ರ ಬದಲಿಗೆ ಕೇವಲ 36 ರಫೇಲ್ ಯುದ್ಧ ವಿಮಾನ ಖರೀದಿಗೆ ಸಮ್ಮತಿಸಿದರು. ಇದರಿಂದ ಪ್ರತಿ ಯುದ್ಧ ವಿಮಾನದ ದರ ಶೇ.41.42 ಏರಿಕೆಯಾಯಿತು. ಭಾರತೀಯ ವಾಯು ಸೇನೆಯ ನಿರ್ದಿಷ್ಟ ಬೇಡಿಕೆ ಆಧರಿಸಿ 13 ಅಂಶಗಳ ವಿನ್ಯಾಸ ಹಾಗೂ ಅಭಿವೃದ್ಧಿಗೆ ಡಸಾಲ್ಟ್ ನಿರ್ಧರಿಸಿತು. ಈ ಅಂಶ ದರ ಹೆಚ್ಚಳಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ. 2007ರಲ್ಲಿ ಒಪ್ಪಂದಕ್ಕೆ ಬಿಡ್ ಕರೆದಿದ್ದಾಗ ಸಾಮಾನ್ಯ ಯುದ್ಧ ವಿಮಾನದ ಬೆಲೆ 79.3 ಮಿಲಿಯನ್ ಯೂರೋ (642.82 ಕೋಟಿ ರೂ.)ಗಳಾಗಿತ್ತು. ಆಗ ಭಾರತದ ಬೇಡಿಕೆಗೆ ತಕ್ಕಂತೆ ವಿನ್ಯಾಸ ಹಾಗೂ ಅಭಿವೃದ್ಧಿಗೆ 11.11 ಮಿಲಿಯನ್ ಯೂರೋ(90 ಕೋಟಿ ರೂ.) ಮೀಸಲಿಡಲಾಗಿತ್ತು. ಆದರೆ 2011ರಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಾಗ ಸಾಮಾನ್ಯ ಯುದ್ಧ ವಿಮಾನದ ಬೆಲೆ 100.85 ಮಿಲಿಯನ್ ಯೂರೋ(817.51 ಕೋಟಿ ರೂ.)ಗೆ ತಲುಪಿತು. ಆದರೆ ವಿನ್ಯಾಸ ಹಾಗೂ ಅಭಿವೃದ್ಧಿ ಶುಲ್ಕದಲ್ಲಿ ಬದಲಾವಣೆ ಆಗಲಿಲ್ಲ. ಆದರೆ ಎನ್​ಡಿಎ ಸರ್ಕಾರ 2016ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದಾಗ ಈ ಮೊತ್ತ ಕ್ರಮವಾಗಿ 91.75 ಮಿಲಿಯನ್ ಯೂರೋ(743.75 ಕೋಟಿ ರೂ.) ಹಾಗೂ 36.11 ಯೂರೋ(292.71)ಗೆ ತಲುಪಿತು. ಇದರಿಂದ 2007ರ ಬಿಡ್​ಗೆ ಹೋಲಿಸಿದಾಗ ಶೇ.41.42 ಮೊತ್ತ ಹೆಚ್ಚಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಸಾಮಾನ್ಯ ಯುದ್ಧ ವಿಮಾನದ ದರದಲ್ಲಿ ಶೇ.9 ಇಳಿಕೆ ಆಗಿರುವುದು ನಿಜ, ಹಾಗೆಯೇ ಎನ್​ಡಿಎ ಸರ್ಕಾರಕ್ಕೆ ಆರಂಭದಲ್ಲಿ ಸಲ್ಲಿಸಿದ್ದ ಬಿಡ್​ಗಿಂತ ಕೊನೆಗೆ ವಿನ್ಯಾಸ ಹಾಗೂ ಅಭಿವೃದ್ಧಿ ದರದಲ್ಲಿಯೂ ಇಳಿಕೆ ಮಾಡಲಾಗಿದೆ. ಆದರೆ ಅದು ಯುಪಿಎ ಅವಧಿಗಿಂತ ಹೆಚ್ಚು ಎಂದು ವರದಿ ಹೇಳಿದೆ.

ಚಿದಂಬರಂ ವಾಗ್ದಾಳಿ

ಯುಪಿಎ ಸರ್ಕಾರದಲ್ಲಿ ಅಂತಿಮ ಹಂತದಲ್ಲಿ ನಿರ್ಧರಿಸಲಾಗಿದ್ದಕ್ಕಿಂತ ಪ್ರತಿ ರಫೇಲ್ ವಿಮಾನಕ್ಕೆ 186 ಕೋಟಿ ರೂ. ಹೆಚ್ಚು ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ನಾಯಕರು ಸತ್ಯ ಮುಚ್ಚಿಡಲು ಸಾಧ್ಯವಿಲ್ಲ. ವಿಮಾನದ ದರ ಬಹಿರಂಗವಾಗಿದೆ. ಇನ್ನೊಂದು ವಾರದಲ್ಲಿ ಭ್ರಷ್ಟಾಚಾರ ಹಣದ ಮಾಹಿತಿ ಕೂಡ ಬಹಿರಂಗವಾಗಲಿದೆ. ಹೀಗಾಗಿ ಈ ಪ್ರಕರಣ ಕುರಿತು ಜಂಟಿ ಸದನ ಸಮಿತಿ ರಚನೆ ಅನಿವಾರ್ಯ ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.

ಭ್ರಷ್ಟಾಚಾರ ಅಲ್ಲ

ಕೆಲವರು ಬೊಫೋರ್ಸ್ ಹಾಗೂ ರಫೇಲ್ ಹಗರಣವನ್ನು ಹೋಲಿಕೆ ಮಾಡುತ್ತಿದ್ದಾರೆ. ಆದರೆ ಬೊಫೋರ್ಸ್ ಹಗರಣದಲ್ಲಿ ಸ್ವಿಸ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವುದು ತನಿಖಾ ವರದಿಯಲ್ಲಿ ಬಹಿರಂಗವಾಗಿತ್ತು. ಆದರೆ ರಫೇಲ್​ನಲ್ಲಿ ಇಂತಹ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ವರದಿಯ ಕೊನೆಯಲ್ಲಿ ಹೇಳಲಾಗಿದೆ.

ರಕ್ಷಣಾ ಸಚಿವಾಲಯದ ಸ್ಪಷ್ಟನೆ

‘ದಿ ಹಿಂದು’ ವರದಿ ಕುರಿತು ಚರ್ಚೆ ಆರಂಭವಾಗುತ್ತಿ ದ್ದಂತೆ ಈ ಕುರಿತು ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ಅದರ ಪ್ರಮುಖಾಂಶ ಇಲ್ಲಿದೆ.
# ವರದಿಯಲ್ಲಿ ಯಾವುದೇ ಹೊಸ ದಾಖಲೆಗಳನ್ನು ಉಲ್ಲೇಖಿಸದೇ, ಸುಳ್ಳು ಮಾಹಿತಿ ನೀಡಲಾಗಿದೆ.
# ದರ ವಿವರಗಳನ್ನು ಸುಪ್ರೀಂ ಕೋರ್ಟ್​ಗೆ ನೀಡಲಾಗಿದ್ದು, ತೃಪ್ತಿ ವ್ಯಕ್ತಪಡಿಸಿದೆ.
# ಸಾಮಾನ್ಯ ಯುದ್ಧ ವಿಮಾನದ ದರ ಕಡಿಮೆ ಆಗಿರುವುದನ್ನು ಲೇಖನದಲ್ಲಿಯೇ ಉಲ್ಲೇಖಿಸಲಾಗಿದೆ.
# ಯುಪಿಎ ಸರ್ಕಾರದ ಅವಧಿಯಲ್ಲಿ ಒಪ್ಪಂದವೇ ಅಂತಿಮ ವಾಗಿರಲಿಲ್ಲ, ಹೀಗಾಗಿ 126 ಯುದ್ಧ ವಿಮಾನಗಳ ದರ ತಾಳೆ ಹಾಕುವುದು ಸರಿಯಲ್ಲ.
# ಶೀರ್ಷಿಕೆಯಲ್ಲಿ ಶೇ.41.42 ಎಂದು ಹೇಳಿದ್ದರೂ ಕೊನೆಗೆ 2011ರ ಬಿಡ್​ಗೆ ಹೋಲಿಸಿದರೆ ಶೇ.14.2 ಹೆಚ್ಚಳ ಎಂದು ಉಲ್ಲೇಖಿಸಿ ವರದಿಯಲ್ಲಿ ದ್ವಂದ್ವ ಪ್ರದರ್ಶಿಸಲಾಗಿದೆ.

ಗೊಂದಲದ ಗೂಡಾದ ಪ್ರಕರಣ

ಪತ್ರಿಕೆ ವರದಿ ಪ್ರಕಾರ ಪ್ರತಿ ವಿಮಾನದ ನಡುವಿನ ದರ ವ್ಯತ್ಯಾಸ 128.95 ಕೋಟಿ ರೂ. ಆಗುತ್ತದೆ. ಚಿದಂಬರಂ ಅವರು 186 ಕೋಟಿ ರೂ. ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಸಾಮಾನ್ಯ ವಿಮಾನದಲ್ಲಿ ಶೇ.9 ಹಾಗೂ ಶಸ್ತ್ರ ಸಜ್ಜಿತ ವಿಮಾನದ ದರವು ಶೇ.20 ಕಡಿಮೆ ಆಗಿದೆ ಎಂದು ಹೇಳಿಕೊಳ್ಳುತ್ತಿದೆ. ಕಾಂಗ್ರೆಸ್ ನಾಯಕರು 126 ಹಾಗೂ 36 ವಿಮಾನಗಳ ಬೆಲೆ ತಾಳೆ ಮಾಡಿ ಹೇಳುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಅದನ್ನು 18 ಹಾಗೂ 36ಕ್ಕೆ ಹೋಲಿಸುತ್ತಿದೆ. ಯುಪಿಎ ಅವಧಿಯಲ್ಲಿ ಡಸಾಲ್ಟ್​ನಿಂದ ಬರುತ್ತಿರುವುದು ಕೇವಲ 18 ವಿಮಾನಗಳಾಗಿತ್ತು. ಆದರೆ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸಿ ಹಗರಣ ತೋರಿಸಲು ಈ ಸಂಖ್ಯೆ ತೋರಿಸುತ್ತಿದೆ ಎಂದು ಲೋಕಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.