ನಗರದಲ್ಲಿ ಹೆಚ್ಚುತ್ತಿವೆ ಸರ್ಕಲ್ !

<<<ವಾಹನ ಸಂಚಾರ ದಟ್ಟಣೆ, ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ>>>

ಉಡುಪಿ: ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಮಣಿಪಾಲ-ಮಲ್ಪೆ ಚತುಷ್ಪಥ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಜತೆಗೆ ನಗರದ ಪಾರ್ಶ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯೂ ಹಾದುಹೋಗುತ್ತಿದ್ದು, ರಸ್ತೆ ವಿಸ್ತರಣೆಯಾದರೂ ಸರ್ಕಲ್‌ಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಚಾರ ನಿಯಂತ್ರಣ ಸಾಹಸವಾಗಿ ಪರಿಣಮಿಸಿದೆ.

ಉದ್ಯಾವರ ಬಲಾಯಿಪಾದೆಯಿಂದ ಪ್ರಾರಂಭಿಸಿ, ಕಿನ್ನಿಮೂಲ್ಕಿ ಸ್ವಾಗತ ಗೋಪುರ, ಜೋಡುಕಟ್ಟೆ, ಲಯನ್ಸ್ ಸರ್ಕಲ್, ಡಯಾನಾ ಸರ್ಕಲ್, ಪೆಟ್ರೋಲ್ ಬಂಕ್ ಸರ್ಕಲ್, ತ್ರಿವೇಣಿ ಸರ್ಕಲ್, ಸಿಟಿ ಬಸ್‌ಸ್ಟ್ಯಾಂಡ್ ನಲ್ಲಿ ಎರಡು ಸರ್ಕಲ್, ಕಲ್ಸಂಕ ಸರ್ಕಲ್, ಕಡಿಯಾಳಿ ಸರ್ಕಲ್ ಹೀಗೆ 50 ಮೀಟರ್‌ಗೆ ಒಂದರಂತೆ ದೊರೆಯುವ ಹತ್ತಾರು ಸರ್ಕಲ್‌ಗಳಲ್ಲಿ ಬೆಳಗ್ಗೆ ಶಾಲಾ ಸಮಯ ಹಾಗೂ ಸಾಯಂಕಾಲ ವೇಳೆ ವಾಹನ ದಟ್ಟಣೆ ಹೆಚ್ಚುತ್ತಿದೆ. ಜತೆಗೆ ಈಗ ಬೇಸಿಗೆ ರಜಾ ಕಾಲವಾಗಿರುವುದರಿಂದ ಉಡುಪಿ ಮತ್ತು ಮಲ್ಪೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರ ಜವಾಬ್ದಾರಿಯೂ ಹೆಚ್ಚುತ್ತಿದೆ. ಆದರೆ ಸಿಬ್ಬಂದಿ ಕೊರತೆಯಿಂದ ಅನೇಕ ಸರ್ಕಲ್‌ಗಳಲ್ಲಿ ಪೊಲೀಸರ ನಿಯೋಜನೆ ಅಸಾಧ್ಯವಾಗಿದ್ದು, ವಾಹನ ಸವಾರರು ಯದ್ವಾ ತದ್ವಾ ಸಂಚರಿಸಿ ಸಣ್ಣಪುಟ್ಟ ಅಪಘಾತಕ್ಕೆ ಕಾರಣವಾಗುತ್ತಿದ್ದಾರೆ.

ಅಂಬಲಪಾಡಿ ಅಪಾಯ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಬಲಪಾಡಿ ಜಂಕ್ಷನ್ ಅಪಾಯಕಾರಿಯಾಗಿ ಪರಿಣಮಿಸಿದ್ದು, ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಯಾಗಿರುವ ಕಾರಣ ಸಿಗ್ನಲ್ ಅಳವಡಿಕೆ ಅಸಾಧ್ಯವಾಗಿದ್ದು, ಅಂಡರ್‌ಪಾಸ್ ನಿರ್ಮಿಸಬೇಕೆಂಬ ಜನರ ಬೇಡಿಕೆ ಇಂದಿನವರೆಗೆ ಈಡೇರಿಲ್ಲ.

ಬ್ರಹ್ಮಗಿರಿ ಜಂಕ್ಷನ್: ನಗರದ ಪ್ರಮುಖ 5 ರಸ್ತೆಗಳು ಒಂದುಗೂಡುವ ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಬ್ರಹ್ಮಗಿರಿ ನಾಯರ್‌ಕೆರೆ ಮಾರ್ಗ, ಸೇಂಟ್ ಸಿಸಿಲಿ ಆಂಗ್ಲ ಮಾಧ್ಯಮ ಶಾಲೆ ರಸ್ತೆ, ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಬೈಪಾಸ್‌ಗೆ ಸಂಪರ್ಕಿಸುವ ಅಜ್ಜರಕಾಡು ಮಾರ್ಗ, ಅಂಬಲಪಾಡಿ ಬೈಪಾಸ್‌ನಿಂದ ಉಡುಪಿಗೆ ಸಂಪರ್ಕಿಸುವ ರಸ್ತೆ ಹಾಗೂ ಉಡುಪಿ ತಾ.ಪಂ. ರಸ್ತೆ ಈ ಐದು ಮುಖ್ಯ ರಸ್ತೆಗಳು ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ಒಗ್ಗೂಡುತ್ತವೆ. ಪ್ರತಿನಿತ್ಯ ಈ ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬನ್ನಂಜೆ ಸಮೀಪವಿರುವ ತಾ.ಪಂ. ಕಚೇರಿ, ಪ್ರವಾಸಿ ಬಂಗಲೆ, ಎಸ್ಪಿ ಕಚೇರಿಗೂ ತೆರಳಲು ಈ ಮಾರ್ಗವನ್ನೇ ಜನರು ಬಳಸಿಕೊಳ್ಳುತ್ತಿದ್ದಾರೆ. ಬ್ರಹ್ಮಗಿರಿ ಜಂಕ್ಷನ್ ಸಮೀಪ ಲಯನ್ಸ್ ಭವನ ಹಾಗೂ ಕಾಂಗ್ರೆಸ್ ಭವನದಲ್ಲಿ ಆಗಾಗ ಕಾರ್ಯಕ್ರಮ ನಡೆಯುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರು ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ.

ಪಾರ್ಕಿಂಗ್ ಅವ್ಯವಸ್ಥೆ: ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ವಾಹನಗಳನ್ನು ರಸ್ತೆ ಬದಿಯಲ್ಲಿಯೇ ಪಾರ್ಕ್ ಮಾಡುತ್ತಿದ್ದಾರೆ. ಇಲ್ಲವಾದರೆ ವಾಹನ ಪಾರ್ಕಿಂಗ್‌ಗೆ ಒಳ ರಸ್ತೆಗಳಿಗೆ ತೆರಳಬೇಕಾಗುತ್ತದೆ. ಹಾಗಾಗಿ ವಾಹನ ಸವಾರರು ಅನಿವಾರ್ಯವಾಗಿ ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಬ್ರಹ್ಮಗಿರಿ ಜಂಕ್ಷನ್‌ನಿಂದ ಉಡುಪಿ ಕಡೆಗೆ ಹೋಗುವ ಪ್ರಯಾಣಿಕರಿಗೆ ಬಸ್‌ನಿಲ್ದಾಣ ವ್ಯವಸ್ಥೆ ಇಲ್ಲ. ಹೀಗಾಗಿ ಖಾಸಗಿ ಬಸ್ ಚಾಲಕರು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಾರೆ.

ಬ್ರಹ್ಮಗಿರಿ ಸರ್ಕಲ್ ಬಳಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸುವುದರಿಂದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ನಗರಸಭೆ, ಆರ್‌ಟಿಒ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಬ್ರಹ್ಮಗಿರಿ ಸರ್ಕಲ್ ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೆ ಕೆಲವು ಪ್ರದೇಶಗಳನ್ನು ನೋ ಪಾರ್ಕಿಂಗ್ ಏರಿಯಾವನ್ನಾಗಿ ಮಾಡಲು ಇಲಾಖೆಯಿಂದ ನಗರಸಭೆಗೆ ವರದಿ ಸಲ್ಲಿಸಲಾಗಿದೆ.
– ನಿತ್ಯಾನಂದ, ಪಿಎಸ್‌ಐ, ಸಂಚಾರಿ ಪೊಲೀಸ್ ಠಾಣೆ