ಅಂತೂ ಬಂತು ವಿಶ್ವರೂಪಂ 2

ಮಲ್ ಹಾಸನ್ ನಿರ್ದೇಶಿಸಿ, ನಟಿಸಿರುವ, ‘ವಿಶ್ವರೂಪಂ 2’ ಚಿತ್ರ ಕೊನೆಗೂ ಈ ವಾರ (ಆ.10) ತೆರೆಗೆ ಬರುತ್ತಿದೆ. 2013ರಲ್ಲಿ ‘ವಿಶ್ವರೂಪಂ’ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಕೂಡಲೇ ಸೀಕ್ವೆಲ್ ಘೋಷಣೆ ಮಾಡಿದ್ದರು ಕಮಲ್. ಆದರೆ ಪಾರ್ಟ್ 2 ರಿಲೀಸ್ ಆಗಲು ಬರೋಬ್ಬರಿ 5 ವರ್ಷಗಳು ಬೇಕಾಯಿತು. ನಿಧಾನ ಗತಿಯಲ್ಲಿ ಸಾಗಿದ ಶೂಟಿಂಗ್, ಎದುರಾದ ಹತ್ತಾರು ಅಡ್ಡಿ ಆತಂಕಗಳ ಕಾರಣಕ್ಕಾಗಿ ‘ವಿಶ್ವರೂಪಂ 2’ ಬಿಡುಗಡೆ ಮರೀಚಿಕೆಯಾಗಿಯೇ ಉಳಿಯಿತು. ಈಗ ಎಲ್ಲ ವಿಘ್ನಗಳನ್ನು ದಾಟಿಕೊಂಡು ಚಿತ್ರವನ್ನು ಪ್ರೇಕ್ಷಕರೆದುರು ಇಡುತ್ತಿದ್ದಾರೆ ಕಮಲ್.

ಅಂದಹಾಗೆ, ಅವರ ವೃತ್ತಿಬದುಕಿನಲ್ಲಿ ಇದು ಮಹತ್ವದ ಸಿನಿಮಾ ಆಗಲಿದೆ. ಯಾಕೆಂದರೆ ಅವರು ನಟನೆಯ ಜತೆಜತೆಗೆ ಈಗ ರಾಜಕೀಯದತ್ತಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಅಷ್ಟರೊಳಗೆ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಸಿನಿಮಾಗಳನ್ನು ಮಾಡಬೇಕೆಂಬ ಆಲೋಚನೆ ಅವರಿಗಿದ್ದಂತಿದೆ. ಈಗಾಗಲೇ ಅವರು ಒಪ್ಪಿಕೊಂಡಿರುವ ‘ಸಬಾಸ್ ನಾಯ್ಡು’, ‘ಇಂಡಿಯನ್ 2’ ಬಗ್ಗೆಯೂ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಇದೆ. ಆ ಬಳಿಕ ರಾಜಕೀಯದ ಸಲುವಾಗಿ ಚಿತ್ರರಂಗಕ್ಕೆ ಕಮಲ್ ಗುಡ್​ಬೈ ಹೇಳಿದರೂ ಅಚ್ಚರಿ ಏನಲ್ಲ. ಹಾಗಾಗಿ ಸಂಪೂರ್ಣ ರಾಜಕೀಯಕ್ಕೆ ಧುಮುಕುವ ಮುನ್ನ ಅವರ ಖಾತೆಯಲ್ಲಿನ ಕೊನೆಯ ಕೆಲ ಸಿನಿಮಾಗಳು ಜನರ ಮನಸ್ಸಿನಲ್ಲಿ ಅಚ್ಚೊತ್ತಬೇಕಿರುವುದು ಅನಿವಾರ್ಯ. 95 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧಗೊಂಡಿದ್ದ ‘ವಿಶ್ವರೂಪಂ’ ಗಲ್ಲಾಪೆಟ್ಟಿಗೆಯಲ್ಲಿ 220 ಕೋಟಿ ಕಮಾಯಿ ಮಾಡಿತ್ತು. ಹಾಗಾದರೆ, ಈಗ ಪಾರ್ಟ್ 2 ಹಣೆಬರಹ ಏನಾಗಬಹುದು? ಈ ಬಗ್ಗೆ ಎಲ್ಲರಲ್ಲೂ ಕುತೂಹಲ ಮನೆ ಮಾಡಿದೆ. ತಮಿಳು ಮಾತ್ರವಲ್ಲದೆ ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ‘ವಿಶ್ವರೂಪಂ 2’ ತೆರೆಕಾಣುತ್ತಿದೆ. ಎದುರಾಳಿಯಾಗಿ ಯಾವ ದೊಡ್ಡ ಚಿತ್ರವೂ ಆ.10ರಂದು ಅಖಾಡಕ್ಕೆ ಇಳಿಯುತ್ತಿಲ್ಲವಾದ್ದರಿಂದ ಮೊದಲ ದಿನವೇ ಭಾರಿ ಮೊತ್ತದ ಕಲೆಕ್ಷನ್ ಆಗಲಿದೆ ಎಂದು ಸಿನಿಪಂಡಿತರು ಅಂದಾಜಿಸಿದ್ದಾರೆ.

Leave a Reply

Your email address will not be published. Required fields are marked *