85ರ ಹರೆಯದಲ್ಲೂ 35ರ ಉತ್ಸಾಹಿ ಭಗವಾನ್

| ಗಣೇಶ್ ಕಾಸರಗೋಡು

ಅವರು ನಿರ್ದೇಶಿಸಿದ ಮೂರು ಕನ್ನಡ ಚಿತ್ರಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿವೆ. ಅವರು ನಿರ್ದೇಶಿಸಿದ ಹನ್ನೊಂದು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಬಂದಿವೆ. ಅವರು ನಿರ್ದೇಶಿಸಿದ ಇಪ್ಪತ್ಮೂರು ಚಿತ್ರಗಳು ಕಾದಂಬರಿ ಆಧಾರಿತವಾಗಿವೆ. ಅವರು ಬೆಳ್ಳಿತೆರೆಗೆ ಪರಿಚಯಿಸಿದ ತಾರೆಯರಾದ ಜಯಂತಿ, ಲಕ್ಷ್ಮೀ, ಆರತಿ, ಮಂಜುಳಾ, ಜಯಲಕ್ಷ್ಮೀ, ಅನಂತನಾಗ್, ಉದಯಕುಮಾರ್, ಅಶೋಕ್, ಪ್ರಭಾಕರ್, ಶ್ರೀನಿವಾಸಮೂರ್ತಿ, ಸುಂದರರಾಜ್, ವಿಜಯರಾಘವೇಂದ್ರ… ಮೊದಲಾದವರೆಲ್ಲ ಕನ್ನಡ ಬೆಳ್ಳಿತೆರೆಯನ್ನು ಬೆಳಗಿದ್ದಾರೆ. 1956ರಿಂದ 1995ರ ತನಕ ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಬರೋಬ್ಬರಿ ಐವತ್ತು. ಇವುಗಳಲ್ಲಿ ಕನ್ನಡದ ವರನಟ ಡಾ. ರಾಜ್​ಕುಮಾರ್ ನಟಿಸಿದ ಚಿತ್ರಗಳ ಸಂಖ್ಯೆ ಮೂವತ್ತು! ಯಾರಿವರು ಪುಣ್ಯಾತ್ಮರು? ಅವರೇ ಆ ಕಾಲದಿಂದಲೂ ಈ ಕಾಲದ ತನಕ ಸತತ ಸಿನಿಮಾಗಳನ್ನು ನಿರ್ದೇಶಿಸುತ್ತ ಕನ್ನಡ ಚಿತ್ರರಂಗಕ್ಕೊಂದು ಭದ್ರ ಬುನಾದಿ ಹಾಕಿಕೊಟ್ಟ ಎಸ್.ಕೆ. ಭಗವಾನ್.

ಇಷ್ಟೆಲ್ಲ ಸಾಹಸ ಮಾಡಿದ ಸಾಕ್ಷಾತ್ ಭಗವಾನ್​ರಿಗೂ ಹಸಿವಿನ ಕಾಟ ತಪ್ಪಲಿಲ್ಲ! ಅದು ಅವರ ವೃತ್ತಿ ಬದುಕಿನ ಆರಂಭದ ದಿನಗಳು. ಊರು ಮದರಾಸು. ಆಕಾಶವೇ ಚಪ್ಪರ, ಭೂಮಿಯೇ ಹಾಸಿಗೆಯಾಗಿದ್ದ ಕಾಲವದು. ಹೊಟ್ಟೆಗೆ ಹಿಟ್ಟಿಲ್ಲದೆ ಮೂರು ದಿನಗಳಾಗಿದ್ದವು. ಏನು ಮಾಡುವುದೆಂದು ತೋಚದೆ ಮದರಾಸಿನ ಹೋಟೆಲೊಂದರ ಎದುರು ನಿಂತು ಕೈ ಚಾಚುವಂಥ ದುಃಸ್ಥಿತಿ!

ಅದು1958ರ ಸಮಯ. ಭರ್ತಿ ಅರವತ್ತು ವರ್ಷಗಳ ಹಿಂದೆ ನಡೆದ ಘಟನೆಯಿದು. ಆ ಹೋಟೆಲ್​ನ ಹೆಸರು; ‘ನಾರಾಯಣ ಕೆಫೆ’. ಮದರಾಸು ಸೇರಿಕೊಂಡ ಕನ್ನಡಿಗರೆಲ್ಲ ಊಟಕ್ಕೆ, ತಿಂಡಿಗೆ ಬರುತ್ತಿದ್ದ ಹೋಟೆಲ್ ಅದು. ಪಾಂಡಿಬಜಾರ್​ನ ಈ ಹೋಟೆಲ್​ನ ಮುಂದೆ ಭಗವಾನ್ ಹಸಿದು ನಿಂತಿದ್ದಾಗ ಬಂದವರೇ ದೊರೈರಾಜ್! ಬೇರೆ ದಾರಿ ಇರಲಿಲ್ಲ. ದೊರೈರಾಜ್ ಪರಿಚಯವಿಲ್ಲವಾದರೂ, ಹಸಿವಿನಿಂದ ಕಂಗೆಟ್ಟಿದ್ದ ಭಗವಾನ್ ತಮಗರಿಯದಂತೆಯೇ ಅವರ ಮುಂದೆ ಕೈ ಚಾಚಿದ್ದರು!

ಕನ್ನಡಿಗರಾಗಿರುವುದರಿಂದ ಯಾವ ಮುಜುಗರವೂ ಅಡ್ಡ ಬರಲಿಲ್ಲ. ಚಾಚಿದ ಕೈಗೆ ಎಂಟಾಣೆ ಹಾಕಿದರು ದೊರೈರಾಜ್. ಅದರಲ್ಲೇ ಇಡ್ಲಿ ತಿಂದು ಹೊಟ್ಟೆ ತುಂಬ ನೀರು ಕುಡಿದು ಸ್ವಲ್ಪ ದೂರದ ಆ ಪುಟ್ಟ ಗುಡಿಸಲಿನಂಥ ಮನೆಯಲ್ಲಿ ಮಲಗಿದ್ದೊಂದೇ ಗೊತ್ತು. ಬೆಳಗ್ಗೆ ಎದ್ದಾಗ ಜಿ.ವಿ. ಅಯ್ಯರ್ ಎದುರು ನಿಂತಿದ್ದರು. ಕೋಪದಿಂದ ಕೆಂಡಾಮಂಡಲರಾಗಿದ್ದ ಅಯ್ಯರ್, ‘ಯಾಕಯ್ಯಾ, ಆ ದೊರೈರಾಜ್​ನಿಂದ ಎಂಟಾಣೆ ಪಡೆದೆ? ಹಸಿವಿನಿಂದ ಕಂಗಾಲಾಗಿದ್ದ ಆತನಿಗೆ ನಾನೇ ಎಂಟಾಣೆ ಕೊಟ್ಟಿದ್ದೆ. ಅದನ್ನು ನಿಂಗೆ ಕೊಟ್ಟು ಆತ ಉಪವಾಸ ಕೂತಿದ್ದಾನೆ…’ – ಎಂದಾಗ ಭಗವಾನ್ ಕಣ್ಣಲ್ಲಿ ನೀರು!

ಸ್ವತಃ ತಾವೇ ಹಸಿವಿನಲ್ಲಿದ್ದರೂ ತಮ್ಮ ಹಸಿವು ನೀಗಿಸಲು ಎಂಟಾಣೆ ಕೊಟ್ಟ ದೊರೈರಾಜ್ ಅವರ ಹೃದಯವಂತಿಕೆಯನ್ನು ಕಂಡು ಭಗವಾನ್ ಅಕ್ಷರಶಃ ಮೂಕರಾದರು. ಈ ಇಬ್ಬರನ್ನು ಜತೆ ಸೇರಿಸಿದ ಆ ಅಮೂಲ್ಯ ಎಂಟಾಣೆಯ ಸವಿನೆನಪಿಗಾಗಿ ಈ ಜೋಡಿ ಮತ್ತೆಂದೂ ಬೇರೆಯಾಗಲಿಲ್ಲ!

ಈ ಘಟನೆಯನ್ನು ನನ್ನ ಬಳಿ ಹೇಳಿಕೊಂಡು ಭಗವಾನ್ ಗೋಳೋ ಎಂದು ಅತ್ತದ್ದನ್ನು ಮರೆಯೋದುಂಟ? ನಿರ್ವ್ಯಾಜ್ಯ ಸ್ನೇಹವೆಂದರೆ ಇದಲ್ಲವೇ? ಈ ಇಬ್ಬರ ಸ್ನೇಹ ಸಂಬಂಧದಿಂದಾಗಿ ಕನ್ನಡ ಚಿತ್ರರಂಗ ಪಡೆದುಕೊಂಡ ಅರ್ನ್ಯಘ ಚಿತ್ರರತ್ನಗಳ ಪಟ್ಟಿ ದೊಡ್ಡದಿದೆ. ಇಂಥ ದೊರೈರಾಜ್ 2000ನೇ ಇಸವಿಯಲ್ಲಿ ತೀರಿಕೊಂಡಾಗ ಭಗವಾನ್ ಅವರಿಗೆ ಅನಾಥ ಭಾವ…

ಹೈಸ್ಕೂಲ್​ನಲ್ಲಿರುವಾಗಲೇ ನಾಟಕಗಳಲ್ಲಿ ನಟಿಸುವುದು, ಹಿಂದಿ ಹಾಡುಗಳನ್ನು ಗುನುಗುವುದು ಭಗವಾನ್ ಅವರಿಗೆ ಪ್ರೀತಿಯ ಹವ್ಯಾಸವಾಗಿತ್ತು. ಆ ಕಾಲದಲ್ಲಿ ನಾಟಕಗಳಲ್ಲಿ ಹೆಣ್ಣಿನ ಪಾತ್ರ ನಿರ್ವಹಿಸುತ್ತಿದ್ದ ಭಗವಾನ್ 1956ರಲ್ಲಿ ಚಿತ್ರೀಕರಣಗೊಂಡ ‘ಭಾಗ್ಯೋದಯ’ ಚಿತ್ರದ ಮೂಲಕ ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ಸಹಾಯಕರಾಗಿ ಕೆಲಸ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ರಾಜ್​ಕುಮಾರ್ ನಟಿಸಿದ ಐದು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಅನುಭವ ಪಡೆದ ಮೇಲೆ 1961ರಲ್ಲಿ ‘ವಿಧಿವಿಲಾಸ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದರು. ಆನಂತರ ಹಿಂದಿರುಗಿ ನೋಡದ ಭಗವಾನ್ 1996ರವರೆಗೆ ಒಟ್ಟು ಐವತ್ತು ಚಿತ್ರಗಳನ್ನು ದೊರೈರಾಜ್ ಜತೆ ಸೇರಿ ನಿರ್ದೇಶಿಸಿದರು. ಈ ಜೋಡಿ ನಿರ್ದೇಶನದ ಕೊನೆಯ ಚಿತ್ರ ‘ಬಾಳೊಂದು ಚದುರಂಗ’.

ಸದಾ ಲೋ ಪೊ›ಫೈಲ್​ನಲ್ಲೇ ಬದುಕು ನಡೆಸಿದ ಭಗವಾನ್ ದೊಡ್ಡ ಹೆಸರಿನ ಮೋಹಕ್ಕೆ ಒಳಗಾಗಲಿಲ್ಲ. ದುಡ್ಡು ಮಾಡಲಿಲ್ಲ. ಗೆಲುವು ಬಂದಾಗ ಹಿಗ್ಗಲಿಲ್ಲ, ಸೋಲು ಬಂದಾಗ ಕುಗ್ಗಲಿಲ್ಲ. ಏಕಪ್ರಕಾರವಾದ ಖ್ಯಾತಿಯಿಂದ ಅಹಂಕಾರಿಯಾಗಲಿಲ್ಲ. ಚಿತ್ರರಂಗದ ರಾಜಕೀಯದಲ್ಲಿ ಸೋತು ಸುಣ್ಣವಾಗಲೂ ಇಲ್ಲ! ಮೊದಲೇ ಹೇಳಿದ ಹಾಗೆ ಭಗವಾನ್ ಅವರಿಗೀಗ 85ರ ಪ್ರಾಯ. ಈ ವಯಸ್ಸಲ್ಲೂ ಫಿಲಂ ಇನ್ಸಿಟಿಟ್ಯೂಟ್​ವೊಂದರಲ್ಲಿ ಪ್ರಿನ್ಸಿಪಾಲ್ ಆಗಿ ದುಡಿಯುತ್ತಿದ್ದಾರೆ! ತೆಳ್ಳಗೆ ಬೆಳ್ಳಗಿರುವ ಅವರು ಪ್ರತಿಶತ ಆರೋಗ್ಯವಂತರಾಗಿದ್ದಾರೆ. ನೋ ಶುಗರ್, ನೋ ಬಿಪಿ. ಈಗಲೂ ಕರೆದಲ್ಲಿಗೆ ಹೋಗಿ ಸಭೆ-ಸಮಾರಂಭಗಳಲ್ಲಿ ಭಾಗಿಯಾಗಿ ಭಾಷಣ ಮಾಡುತ್ತಾರೆ. ಸ್ವತಃ ಡ್ರೖೆವ್ ಮಾಡುತ್ತಾರೆ!

ರಾಜ್​ಕುಮಾರ್ ಅವರೆಂದರೆ ಭಗವಾನ್ ಅವರಿಗೆ ಪ್ರಾಣ. ಹಾಗೆಯೇ, ರಾಜ್​ಕುಮಾರ್ ಅವರಿಗೂ ಭಗವಾನ್ ಅಂದರೆ ಪ್ರಾಣ. ಡಾ. ರಾಜ್ ಅವರನ್ನು ಜೇಮ್ಸ್ ಬಾಂಡ್ ಗೆಟಪ್​ನಲ್ಲಿ ತೋರಿಸಿದ ಖ್ಯಾತಿ ಭಗವಾನ್ ಅವರಿಗೇ ಸಲ್ಲಬೇಕು.

ಭಗವಾನ್ ಅವರ ಸಾಂಸಾರಿಕ ಬದುಕಿನ ಬಗ್ಗೆ ಹೇಳುವುದಿದ್ದರೆ, ಅವರಿಗೆ ಮೂರು ಗಂಡು ಮಕ್ಕಳು. ಒಬ್ಬಾಕೆ ಮಗಳು. ವಿಶೇಷವೆಂದರೆ, ಈ ಮೂರೂ ಗಂಡು ಮಕ್ಕಳು ಅಪ್ಪನಂತೆ ಚಿತ್ರರಂಗದಲ್ಲಿ ದುಡಿದೂ ಏಳಿಗೆಯಾಗದೆ ಬೇರೆ ಬೇರೆ ಉದ್ಯೋಗಕ್ಕೆ ಶರಣಾದವರು! 1933ರ ಜುಲೈ 5ರಂದು ಹುಟ್ಟಿದ ಭಗವಾನ್ 1995ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ತಶಸ್ತಿಯನ್ನು ದೊರೈರಾಜ್ ಜತೆ ಹಂಚಿಕೊಂಡಿದ್ದಾರೆ. ಕೊನೆಯಲ್ಲಿ ’ಅರವತ್ತು ವರ್ಷಗಳ ವೃತ್ತಿ ಬದುಕಿನಲ್ಲಿ ನಿಮಗೆ ತೃಪ್ತಿ ತಂದು ಕೊಟ್ಟ ಚಿತ್ರ ಯಾವುದು?’ ಎಂದು ಕೇಳಿದರೆ. ಭಗವಾನ್ ಉತ್ತರಿಸುತ್ತಾರೆ; ‘ಸಂಧ್ಯಾರಾಗ’. ಹೌದು, ಬದುಕಿನ ಸಂಧ್ಯಾಕಾಲದಲ್ಲಿರುವ ನಮ್ಮ ಹೆಮ್ಮೆಯ ನಿರ್ದೇಶಕ ಭಗವಾನ್ ಅವರಿಗೆ ದೀರ್ಘಾಯುಷ್ಯ ಕೋರಿ ಶುಭಾಶಯ ಹೇಳೋಣ..

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])