Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ನಾಗರಹಾವು ಹರಿದಾಡಿದ ಹಾದಿ

Friday, 20.07.2018, 3:05 AM       No Comments

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರವನ್ನು ಈಗಾಗಲೇ ಕೋಟ್ಯಂತರ ಮಂದಿ ಕಣ್ತುಂಬಿಕೊಂಡಿದ್ದಾರೆ. ಹಾಗಾಗಿ ಕಥೆ ಏನೆಂಬುದು ಎಲ್ಲರಿಗೂ ಗೊತ್ತು. ಆದರೆ ತೆರೆಹಿಂದಿನ ಅನೇಕ ಕಥೆಗಳು ಇನ್ನಷ್ಟು ಸ್ವಾರಸ್ಯಕರವಾಗಿವೆ. ಅದನ್ನು ಸಿನಿವಾಣಿ ಜತೆ ಹಂಚಿಕೊಂಡಿದ್ದಾರೆ ಹಿರಿಯ ನಟ ಶಿವರಾಮ್ ಹೊಸ ತಂತ್ರಜ್ಞಾನದ ಮೆರುಗು ಪಡೆದು ಶುಕ್ರವಾರ (ಜು.20) ನಾಗರಹಾವು ಮರು ಬಿಡುಗಡೆ ಆಗುತ್ತಿರುವುದರಿಂದ ಹೊಸ ಪೀಳಿಗೆಯ ಪ್ರೇಕ್ಷಕರನ್ನೂ ಈ ಚಿತ್ರ ಸೆಳೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹೀಗೊಂದು ವಿಶೇಷ ಲೇಖನ.

| ಶಿವರಾಂ ಹಿರಿಯ ನಟ

‘ಶರಪಂಜರ’ ಆದಮೇಲೆ ಪುಟ್ಟಣ್ಣ ಅವರಿಂದ ಒಂದು ಸಿನಿಮಾ ಮಾಡಿಸಬೇಕು ಎಂಬುದು ನಿರ್ವಪಕ ವೀರಾಸ್ವಾಮಿಯವರ ಆಸೆಯಾಗಿತ್ತು. ಈ ಕುರಿತು ಪುಟ್ಟಣ್ಣ ಜತೆ ಚರ್ಚೆಗಳು ನಡೆದವು. ತರಾಸು ಅವರ ಮೂರು ಕಾದಂಬರಿಗಳನ್ನಿಟ್ಟುಕೊಂಡು ಸಿನಿಮಾ ಮಾಡುವುದೆಂದು ನಿರ್ಧಾರ ಮಾಡಲಾಯಿತು. ಸಿನಿಮಾ ಮಾಡುವುದು ಪಕ್ಕಾ ಆದಮೇಲೆ ಕಲಾವಿದರ ಆಯ್ಕೆ ಶುರುವಾಯ್ತು. ರಾಮಾಚಾರಿ ಪಾತ್ರಕ್ಕೆ ಸೂಕ್ತ ಕಲಾವಿದ ಬೇಕು ಎಂದು ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಆಡಿಷನ್ ಕರೆದೆವು. ಸಾಕಷ್ಟು ಕಲಾವಿದರು ಬಂದಿದ್ದರು. ಅದರಲ್ಲಿ ಸಂಪತ್​ಕುಮಾರ್ (ವಿಷ್ಣುವರ್ಧನ್) ಕೂಡ ಒಬ್ಬರು. ಅವರ ಮ್ಯಾನರಿಸಂ, ಸ್ಟೈಲ್ ಎಲ್ಲವೂ ರಾಮಾಚಾರಿ ಪಾತ್ರಕ್ಕೆ ಒಪು್ಪತ್ತಿತ್ತು. ಎಲ್ಲದಕ್ಕೂ ಯೋಗ ಇರಬೇಕು. ಅದು ವಿಷ್ಣುಗೆ ಇತ್ತು. ಮೊದಲ ಚಿತ್ರದಲ್ಲೇ ಅಂಥ ದೊಡ್ಡ ಯಶಸ್ಸು ವಿಷ್ಣುಗೆ ಒಲಿದುಬಂತು.

ಅವರು ಹೇಳಿದ್ಮೇಲೆ ಮುಗೀತು…

ಸಾಮಾನ್ಯವಾಗಿ ಪುಟ್ಟಣ್ಣ ಮಾಡುತ್ತಿದ್ದುದು ನಾಯಕಿ ಪ್ರಧಾನ ಸಿನಿಮಾಗಳನ್ನು. ಅಂಥ ಸಮಯದಲ್ಲಿ ಒಬ್ಬ ಹೊಸ ಹುಡುಗನನ್ನಿಟ್ಟುಕೊಂಡು ಈ ಸಿನಿಮಾ ಶುರು ಮಾಡಿದ್ದರು ಪುಟ್ಟಣ್ಣ. ವಿಷ್ಣುಗೆ ಸಮಯ ಸಿಕ್ಕಾಗಲೆಲ್ಲ, ಪಾತ್ರದ ಕುರಿತು ತರಬೇತಿ ನೀಡುತ್ತಿದ್ದೆವು. ‘ನಿನಗೆ ಇದಾದ ಬಳಿಕ ಇನ್ನೊಂದು ಸಿನಿಮಾ ಸಿಗಬಹುದು. ಆದರೆ, ನನಗಿದು ಭವಿಷ್ಯ’ ಎಂದು ವಿಷ್ಣುಗೆ ಅವರು ಪದೇಪದೆ ಹೇಳುತ್ತಿದ್ದರು. ಮುಹೂರ್ತ ಚಿತ್ರದುರ್ಗದಲ್ಲೇ ನಡೆಯಿತು. ನಿರ್ವಪಕ ವೀರಾಸ್ವಾಮಿ ನನ್ನನ್ನು ಅವರ ಕಾರಿನಲ್ಲಿ ಕರೆದುಕೊಂಡು ಮುಹೂರ್ತಕ್ಕೆ ಹೋಗಿದ್ದರು.

ಅವರಿಗೆ ಪುಟ್ಟಣ್ಣನ ಕಾರ್ಯವೈಖರಿ ಬಗ್ಗೆ ತಿಳಿಯುವ ಕುತೂಹಲ. ‘45-50 ರೀಲ್​ಗಳಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟರಲ್ಲೇ ಮಾಡ್ತಾರಲ್ವಾ?’ ಎಂದು ನನಗೆ ಕೇಳಿದರು. ‘ಆ ರೀತಿ ಯಾರು ಹೇಳಿದ್ರು’ ಎಂದು ಮರುಪ್ರಶ್ನೆ ಎಸೆದೆ. ‘ಪುಟ್ಟಣ್ಣ ಹೇಳಿದ್ರು’ ಎಂದರು ವೀರಾಸ್ವಾಮಿ. ಅದಕ್ಕೆ ‘ಅವರು ಹೇಳಿದ್ಮೇಲೆ ಮುಗೀತು. ಮಾಡ್ತಾರೆ ಬಿಡಿ. ಆದರೂ, ಹೆಚ್ಚುವರಿಯಾಗಿ 10 ರೀಲು ಇಟ್ಟುಕೊಂಡಿರಿ’ ಎನ್ನುತ್ತಿದ್ದೆ. ಒಂದೇ ಶೆಡ್ಯೂಲ್​ನಲ್ಲಿ ಚಿತ್ರದುರ್ಗದಲ್ಲಿ ಶೂಟಿಂಗ್ ಮುಗಿಸಬೇಕು ಎಂಬ ಯೋಚನೆ ಇತ್ತು. ಆದರೆ, ಕೆಲವು ಕಾರಣಗಳಿಂದ 2 ಶೆಡ್ಯೂಲ್​ನಲ್ಲಿ ಶೂಟಿಂಗ್ ಮಾಡಬೇಕಾಯಿತು. ಸಿನಿಮಾದಲ್ಲಿ ನನಗೂ ಒಂದು ಪಾತ್ರ ಇತ್ತು. ಜತೆಗೆ ನಿರ್ಮಾಣ ಮತ್ತು ನಿರ್ದೇಶನದ ವಿಭಾಗದಲ್ಲೂ ಗಮನ ನೀಡಬೇಕಾಯಿತು. ಹೀಗಾಗಿ ನಾನು ಅಲ್ಲೇ ಇರಬೇಕಾಯಿತು.

ವಿಜೃಂಭಿಸಿದ ಪಾತ್ರಗಳು…

ಕಲ್ಪನಾ ಅವರಿಂದ ಈ ಸಿನಿಮಾದಲ್ಲಿ ಒಂದು ಪಾತ್ರ ಮಾಡಿಸಬೇಕು ಎಂಬುದು ಪುಟ್ಟಣ್ಣ ಅವರ ಆಸೆಯಾಗಿತ್ತು. ‘ಮಾಡಿದರೆ, ಮಾರ್ಗರೆಟ್ ಪಾತ್ರವನ್ನೇ ಮಾಡುತ್ತೇನೆ’ ಎಂಬುದು ಕಲ್ಪನಾ ಹಠ. ಆದರೆ, ಆ ಪಾತ್ರಕ್ಕೆ ಹೊಸ ನಟಿ ತರಬೇಕು ಎಂಬುದು ಪುಟ್ಟಣ್ಣನ ಇಚ್ಛೆಯಾಗಿತ್ತು. ‘ಇದರಲ್ಲಿ ಓಬವ್ವನ ಬಗ್ಗೆ ಒಂದು ಹಾಡಿದೆ. ನೀನು ಓಬವ್ವನ ಪಾತ್ರ ಮಾಡು, ದೊಡ್ಡ ಹೆಸರು ಸಿಗಲಿದೆ’ ಎಂದರು ಪುಟ್ಟಣ್ಣ. ‘ನನ್ನ ತಾಯಿ ಕೇಳಿ, ಹೇಳ್ತಿನಿ’ ಎಂದು ಕಲ್ಪನಾ ಹೇಳಿದ್ದರು. ಅಷ್ಟರ ಮೇಲೆ ಜಯಂತಿ ಅವರಿಂದ ಆ ಪಾತ್ರ ಮಾಡಿಸಿ, ಅವರನ್ನು ಸಾರ್ವಕಾಲಿಕ ಓಬವ್ವನನ್ನಾಗಿ ಮಾಡಿದರು ಪುಟ್ಟಣ್ಣ. ವಿಶೇಷವೆಂದರೆ, ಆ ಹಾಡಿನಲ್ಲಿ ಬರುವ ಜ್ಯೂನಿಯರ್ ಆರ್ಟಿಸ್ಟ್ ಗಳೆಲ್ಲ ಚಿತ್ರದುರ್ಗದ ಸುತ್ತಮುತ್ತಲಿನ ನಾಟಕ ತಂಡಗಳ ಕಲಾವಿದರು. ಕೆಲವೇ ನಿಮಿಷಗಳ ಅವಧಿಯಲ್ಲಿ ಆ ಹಾಡು ಇದ್ದರೂ, ಸಿನಿಮಾ ನೋಡಿ ಹೊರಬಂದ ಮೇಲೂ ಅದು ಮನಸಲ್ಲುಳಿಯುತ್ತದೆ. ಇವತ್ತು ‘ನಾಗರಹಾವು’ ಸಿನಿಮಾ ರಿ-ರಿಲೀಸ್ ಆಗುತ್ತಿರುವುದು ನನಗಂತೂ ಬಹಳ ಖುಷಿ ನೀಡಿದೆ. ಒಂದೊಂದು ಬಾರಿ ನೋಡಿದಾಗಲೂ ಹೊಸ ಹೊಸ ಅನುಭವವನ್ನು ಈ ಸಿನಿಮಾ ನನಗೆ ನೀಡಿದೆ. ಈ ಪೀಳಿಗೆಯ ಯುವಜನತೆ ಇದನ್ನು ಕಣ್ತುಂಬಿಕೊಳ್ಳಬೇಕು. 1972ರಲ್ಲಿ ‘ನಾಗರಹಾವು’ ತೆರೆಕಂಡಾಗ ಜನ ಮುಗಿಬಿದ್ದು ನೋಡಿದರು. ವಿಷ್ಣು ಮೊದಲ ಚಿತ್ರದಲ್ಲೇ ಹೀರೋ ಆಗಿ ನೆಲೆಯೂರಿಬಿಟ್ಟಿದ್ದ. ಅಶ್ವತ್ಥ್ ಅವರು ರಸ್ತೆಯಲ್ಲಿ ಹೋಗುವಾಗ ‘ಚಾಮಯ್ಯ ಮೇಷ್ಟ್ರು..’ ಎಂದು ಜನ ಕೂಗುತ್ತಿದ್ದರು. ಅಷ್ಟರಮಟ್ಟಿಗೆ ಪಾತ್ರಗಳು ವಿಜೃಂಭಿಸಿದ್ದವು. ಒಂದು ಸೀನ್​ನಲ್ಲಿ ಚಾಮಯ್ಯ ಮೇಷ್ಟ್ರು, ‘ಏನೋ ರಾಮಾಚಾರಿ, ಅಲಮೇಲುನ ನೀನು ಕೆಡಿಸಿಬಿಟ್ಟಂತೆ. ನಿಜವೇನು’ ಎನ್ನುತ್ತಾರೆ. ಆಗ ರಾಮಾಚಾರಿ ದಪ್ಪನೆಯ ಕಲ್ಲನ್ನು ಎತ್ತಿ ಮೇಷ್ಟ್ರ ಮೇಲೆ ಹಾಕೋಕೆ ಹೋಗುತ್ತಾನೆ. ಆ ಸೀನ್ ಚಿತ್ರೀಕರಣ ಮಾಡುವಾಗ ಮೈ ಜುಂ ಎನ್ನುತ್ತಿತ್ತು. ವಿಷ್ಣು ಕಣ್ಣಲ್ಲಿದ್ದ ಆ ಕೋಪ ಎದುರಿಗಿದ್ದವರಿಗೆ ಭಯ ಹುಟ್ಟಿಸುವಂತಿತ್ತು. ಇನ್ನೇನು ಅಶ್ವತ್ಥ್ ಅವರ ಮೇಲೆ ಕಲ್ಲನ್ನು ಎತ್ತಿ ಹಾಕಿಯೇ ಬಿಟ್ಟ ಎಂದುಕೊಂಡಿದ್ದೆವು. ಪುಟ್ಟಣ್ಣ, ‘ನೋಡೋಣ.. ಏನ್ ಮಾಡ್ತಾರೆ ಅಂತ..’ ಎಂದು ಹಾಗೆಯೇ ನೋಡುತ್ತಿದ್ದರು.

ಕೋಟೆಯನ್ನೂ ಸ್ಟಾರ್ ಮಾಡಿದವರು…

ಸೆಟ್​ನಲ್ಲಿ ಕಲಾವಿದರ ಮೇಲೆ ಪುಟ್ಟಣ್ಣ ಸದಾ ಕಣ್ಣು ಇಟ್ಟಿರುತ್ತಿದ್ದರು. ಯಾರೇನೇ ಮಾಡುತ್ತಿದ್ದರೂ, ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು, ಇನ್ಯಾವತ್ತೋ ಒಂದು ದಿನ ಅದನ್ನು ಹೇಳುತ್ತಿದ್ದರು. ‘ಫ್ರೀ ಇದ್ದಾಗ ಹುಡುಗಿಯರ ಜತೆ ಲಲ್ಲೆ ಹೋಡೆಯೋಕೆ ಆಗುತ್ತೆ, ಡೈಲಾಗ್ ಹೇಳೋಕೆ ಆಗಲ್ವಾ?’ ಎಂದು ಕಿಚಾಯಿಸುತ್ತಿದ್ದರು. ಪುಟ್ಟಣ್ಣ ಸೆಟ್​ನಲ್ಲಿ ಹೊಡೆಯುತ್ತಾರೆ ಅಂತೆಲ್ಲ ವದಂತಿ ಹಬ್ಬಿತ್ತು. ಎಷ್ಟು ಜನಕ್ಕೆ ಹೊಡೆದಿದ್ದಾರೆ? ಯಾರಿಗೆ ಹೊಡೆದಿದ್ದಾರೆ? ಸುಮ್ ಸುಮ್ನೆ ಹೇಳಬಾರದು. ಕೆಲಸ ಮಾಡದೆ ಇರುವಾಗ ಅದಕ್ಕೆ ಏನು ಹೇಳಬೇಕೋ ಅದನ್ನು ಪುಟ್ಟಣ್ಣ ಹೇಳೋರು. ಒಬ್ಬ ಕಲಾವಿದನೊಳಗಿನ ಪ್ರತಿಭೆಯನ್ನು ಜಡ್ಜ್ ಮಾಡುತ್ತಿದ್ದರು. ಈಗಿನವರು ಒಂಚೂರು ಹಣ ಜಾಸ್ತಿ ಕೇಳಿದರೆ ಸಿನಿಮಾದಿಂದ ಅವನನ್ನೇ ಕಟ್ ಮಾಡುತ್ತಾರೆ. ವೀರಾಸ್ವಾಮಿ ದೊಡ್ಡ ನಿರ್ವಪಕರು. ಸೆಟ್​ನಲ್ಲಿ ಸದಾ ಇರುತ್ತಿರಲಿಲ್ಲ. ಅವರ ಆಪ್ತರಾದ ಗಂಗಪ್ಪ ಮತ್ತು ಪುಣ್ಯಕೋಟಿ ಜತೆಗೆ ನಾನು ಕೂಡ ನಿರ್ವಣದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದೆ. ಸಿನಿಮಾಗೆ ಯಾವುದೇ ರೀತಿ ತೊಂದರೆ ಆಗಬಾರದು ಎಂಬ ಉದ್ದೇಶ ವೀರಾಸ್ವಾಮಿ ಅವರದ್ದು. ಸಿನಿಮಾದ ಕೆಲಸಗಳು ಸರಾಗವಾಗಿ ಸಾಗಲು ಏನು ಬೇಕೋ ಅದನ್ನು ಅವರು ಮಾಡೋರು. ಪುಟ್ಟಣ್ಣ ಮಾಡಿದ ಎಲ್ಲ ಸಿನಿಮಾಗಳು ಒಂದಕ್ಕಿಂತ ಒಂದು ಭಿನ್ನ. ಕರ್ನಾಟಕದ ಪ್ರಕೃತಿಯನ್ನು ಅತ್ಯದ್ಭುತವಾಗಿ ತೋರಿಸಿದ ನಿರ್ದೇಶಕ. ಹೊಸ ಕಲಾವಿದರು ಮತ್ತು ಹೊಸ ಬರಹಗಾರರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ‘ನಾಗರಹಾವು’ ಚಿತ್ರದಲ್ಲಿ ಕಲಾವಿದರನ್ನು ಸ್ಟಾರ್ ಮಾಡಿದಂತೆ ದುರ್ಗದ ಕೋಟೆಯನ್ನು ಸ್ಟಾರ್ ಮಾಡಿದರು ಪುಟ್ಟಣ್ಣ. ಈಗಲೂ ಅಲ್ಲಿ ಗೈಡ್​ಗಳು ಕೋಟೆ ಬಗ್ಗೆ ಹೇಳುತ್ತ ಈ ಸಿನಿಮಾದ ಬಗ್ಗೆಯೂ ಹೇಳುತ್ತಾರೆ. ಅಂದರೆ, ಕೋಟೆಯೊಳಗೆ ‘ನಾಗರಹಾವು’ ಅಷ್ಟರಮಟ್ಟಿಗೆ ಬೆರೆತುಹೋಗಿದೆ. ಈಗ ಸಿನಿಮಾವನ್ನು ಜನ ಅದ್ಭುತವಾಗಿ ಸ್ವೀಕರಿಸಲಿದ್ದಾರೆ ಎಂಬ ನಂಬಿಕೆ ಇದೆ. ಅಂದು ಆ ಕಾದಂಬರಿ ಬರೆದವರೇ ಆ ಸಿನಿಮಾವನ್ನು, ‘ಅದು ನಾಗರಹಾವಲ್ಲ, ಕೇರೆ ಹಾವು’ ಎಂದು ಜರಿದುಬಿಟ್ಟಿದ್ದರು. ಆದರೆ, ಸಿನಿಮಾವನ್ನು ಜನ ಸ್ವೀಕರಿಸಿದ ರೀತಿ ಅಮೋಘವಾಗಿತ್ತು. ಯಶಸ್ವಿಯಾಗಿ 25 ವಾರ ಪೂರೈಸಿತ್ತು. ಕಥೆ ಮತ್ತು ನಿರೂಪಣೆಯೇ ಆ ಸಿನಿಮಾದ ದೊಡ್ಡ ಶಕ್ತಿ.

ಚಿತ್ರೀಕರಣದ ನಡುವೆ ಕಾಮಿಡಿ ಟ್ರ್ಯಾಕ್

ತುಂಬ ತಮಾಷೆ ಎಂದರೆ, ‘ನಾಗರಹಾವು’ ಶೂಟಿಂಗ್ ಮಾಡುವ ಸಮಯದಲ್ಲೇ ಮಾ. ಹಿರಣ್ಣಯ್ಯ ಅವರ ನಾಟಕ ಪ್ರದರ್ಶನ ಅಲ್ಲಿ ಆಗುತ್ತಿತ್ತು. ಹಗಲು ಹೊತ್ತಿನಲ್ಲಿ ಶೂಟಿಂಗ್ ಇದ್ದಿದ್ದರಿಂದ ನಾವು ‘ಹಗಲೊತ್ತಲ್ಲಿ ಮಳೆ ಬರಬಾರದಪ್ಪ’ ಎನ್ನುತ್ತಿದ್ದೆವು. ಸಂಜೆ ನಾಟಕ ಇರುತ್ತಿದ್ದ ಕಾರಣ ಆ ತಂಡದವರು, ‘ಸಂಜೆ ಮಳೆ ಬಾರದೆ ಇರ್ಲಪ್ಪ’ ಎಂದು ಬೇಡಿಕೊಳ್ಳುತ್ತಿದ್ದರು. ಅದಕ್ಕೆ ಆ ಊರಿನವರು, ‘ಈ ಸಿನ್ಮಾ-ನಾಟ್ಕದವರು ಬಂದ್ಮೇಲೆ ನಮ್ಮೂರಲ್ಲಿ ಮಳೆನೇ ಬರದೆ ಇರೋ ಥರ ಮಾಡ್ತಿದ್ದಾರೆ’ ಎನ್ನುತ್ತಿದ್ದರು. ಇನ್ನೊಂದು ತಮಾಷೆ ಸಂಗತಿ ಎಂದರೆ, ದುರ್ಗದಲ್ಲಿ ಒಂದು ಮನೆಯ ಗೃಹಪ್ರವೇಶವಿತ್ತು. ಆ ಮನೆಯ ಮಾಲೀಕರು ನಮ್ಮ ತಂಡವನ್ನೆಲ್ಲ ಊಟಕ್ಕೆ ಆಹ್ವಾನಿಸಿದ್ದರು. ಅಲ್ಲಿ, ಹೋದಾಗ ಸಾಕಷ್ಟು ಜನ ನಮ್ಮ ಆಟೋಗ್ರಾಫ್, ಫೋಟೋಗ್ರಾಫ್ ಅಂತೇಳಿ ಮುಗಿಬೀಳುತ್ತಿದ್ದರು. ಇದರಿಂದ ನಮಗೆ ತೊಂದರೆ ಆಗುತ್ತಿದೆ ಎಂದುಕೊಂಡ ಆ ಮನೆ ಯಜಮಾನರು, ನಮ್ಮನ್ನೆಲ್ಲ ಒಂದು ರೂಮ್ೊಳಗೆ ಕೂರಿಸಿ, ಆ ರೂಮ್ೆ ಬೀಗ ಹಾಕಿಕೊಂಡು ಹೋಗಿಬಿಟ್ಟರು. ಅಲ್ಲೊಂದು ದೊಡ್ಡ ಕಿಟಕಿಯಿತ್ತು. ಜನ ನಮ್ಮನ್ನ ಅಲ್ಲಿಂದ ನೋಡುತ್ತ, ‘ನೋಡ್ನೋಡು, ಅವರೇ ಪುಟ್ಟಣ್ಣ. ಭಾರಿ ದೊಡ್ ಡೈರೆಕ್ಟು›. ಅಲ್ನೋಡು ಆರ್ತಿ, ಇವರೇ ಇವರೇ ಶಿವರಾಮ್.. ಅವ್ರೇ ಹೊಸ ಹೀರೋ..’ ಅಂತ ಹೇಳೋಕೆ ಶುರುಮಾಡಿದರು. ಆ ಕ್ಷಣ ಮೃಗಾಲಯದಲ್ಲಿರುವ ಪ್ರಾಣಿಗಳ ಥರ ಆಗಿತ್ತು ಪರಿಸ್ಥಿತಿ.

ವಿವಾದದ ಹೆಡೆ ಎತ್ತಲಿಲ್ಲ

‘ಹಾವಿನ ದ್ವೇಷ..’ ಗೀತೆಯ ಚಿತ್ರೀಕರಣದ ವೇಳೆ ನೂರಡಿ ಉದ್ದದ ಟ್ರಾಲಿ ಹಾಕಿದ್ದರು. ನಾನು ಅದನ್ನು ತಳ್ಳಬೇಕಿತ್ತು. ನನ್ನ ಮೇಲೆ ಪುಟ್ಟಣ್ಣಗೆ ಅದೇನೋ ನಂಬಿಕೆ. ಕೆಲವು ಮುಖ್ಯವಾದ ಕೆಲಸಗಳನ್ನು ನನಗೆ ನೀಡುತ್ತಿದ್ದರು. ಕಲಾವಿದರಿಗೆ ರಿಹರ್ಸಲ್ ಮಾಡಿಸುವ ಹೊಣೆಯನ್ನೂ ನೀಡಿದ್ದರು. ಅವರ ಎಲ್ಲ ಸಿನಿಮಾಗಳ ಕೆಲಸಗಳು ಪಕ್ಕಾ ಪ್ಲಾ್ಯನಿಂಗ್​ನಿಂದಲೇ ಆರಂಭವಾಗುತ್ತಿದ್ದವು. ಅವರ ಅಷ್ಟು ಸಿನಿಮಾಗಳಲ್ಲಿ ‘ಗೆಜ್ಜೆಪೂಜೆ’ ಒಂದೇ ಶೆಡ್ಯೂಲ್​ನಲ್ಲಿ ಚಿತ್ರೀಕರಣ ಮುಗಿಸಿದ ಸಿನಿಮಾ. ‘ಶರಪಂಜರ’ಕ್ಕೆ ಸಂಭಾಷಣೆಯ ಸ್ಕ್ರಿಪ್ಟ್ ಇರಲಿಲ್ಲ. ಬರೀ ಟ್ರೀಟ್​ವೆುಂಟ್ ಇಟ್ಟುಕೊಂಡು ಮಾಡಿದ ಸಿನಿಮಾ ಅದು. ‘ನಾಗರಹಾವು’ ತಾಂತ್ರಿಕವಾಗಿ ಎಷ್ಟು ಶ್ರೀಮಂತವಾಗಿತ್ತು ಎಂದರೆ, ಇಂದಿಗೂ ಅದರ ಒಂದೊಂದು ಫ್ರೇಮ್ ಕಣ್ಣಿಗೆ ಕಟ್ಟಿದಂತೆ ಇದೆ. ಧರ್ಮ, ತ್ರಿಮತ ಎಲ್ಲವೂ ಆ ಸಿನಿಮಾದಲ್ಲಿತ್ತು. ಆದರೆ, ಯಾವುದೂ ವಿವಾದಕ್ಕೆ ಎಡೆಮಾಡಿ ಕೊಡಲಿಲ್ಲ.

ಮಾನಿಟರ್ ಇಲ್ಲದೆಯೂ ಮ್ಯಾಜಿಕ್

ನಾಗರಹಾವು ಚಿತ್ರದ ಚಿತ್ರೀಕರಣದ ಬಗ್ಗೆ ಹೇಳುವುದಾದರೆ, ಬೆಟ್ಟದ ಮೇಲೆ ಶೂಟಿಂಗ್ ಮಾಡುವುದು ತಮಾಷೆ ಮಾತಲ್ಲ. 60 ಕೆ.ವಿ. ಜನರೇಟರ್​ಗಳನ್ನು ಕೆಳಗಿನಿಂದ ಮೇಲಕ್ಕೆ ಒಯ್ಯಬೇಕಿತ್ತು. ಭಾರಿ ತೂಕದ ಅದನ್ನು ಬಂಬುಗಳ ಸಹಾಯದಿಂದ ‘ಐಸಾ..ಐಸಾ..’ ಎಂದು ಹೇಳುತ್ತ ಮೇಲಕ್ಕೆ ತೆಗೆದುಕೊಂಡು ಹೋಗುತ್ತಿದ್ದವು. ‘ಬಾರೇ ಬಾರೇ..’ ಹಾಡನ್ನು ಸ್ಲೋ ಮೋಷನ್​ನಲ್ಲಿ ಶೂಟ್ ಮಾಡಿದ್ದರು ಪುಟ್ಟಣ್ಣ. ರಾಮಾಚಾರಿ ಬದುಕಿನಿಂದ ಅಲಮೇಲು ನಿಧಾನಕ್ಕೆ ಹೊರಗೆ ಹೋಗುತ್ತಾಳೆ ಎಂಬುದನ್ನು ಆ ರೀತಿ ಸಿಂಬಾಲಿಕ್ ಆಗಿ ತೋರಿಸಿದ್ದರು. ಅಲ್ಲದೆ, ಕ್ಲೈಮ್ಯಾಕ್ಸ್​ನಲ್ಲಿ ಚಾಮಯ್ಯ ಮೇಷ್ಟ್ರು ಬೆಟ್ಟದಿಂದ ಜಾರುವುದನ್ನು ವಾಕಿಂಗ್ ಸ್ಟಿಕ್ ಮತ್ತು ಚಪ್ಪಲಿ ಮೂಲಕ ತೋರಿಸಿದ್ದರು. ಆವಾಗ ಮಾನಿಟರ್ ಇರಲಿಲ್ಲ. ಇವತ್ತು ಶೂಟ್ ಮಾಡಿದ್ದು ನಾಳೆ ಹೇಗೆ ಬರಬಹುದು ಎಂಬ ಅಂದಾಜು ಪುಟ್ಟಣ್ಣಗೆ ಇತ್ತು. ಕಲಾವಿದರು ಮತ್ತು ತಂತ್ರಜ್ಞರ ಒಳಗಿರುವ ಪ್ರತಿಭೆಯನ್ನು ಅವರಿಗೆ ತಿಳಿಯದಂತೆಯೇ ಹೊರತೆಗೆಯುವ ಕಲೆ ಪುಟ್ಟಣ್ಣಗೆ ಸಿದ್ಧಿಸಿತ್ತು. ಬೇರೆ ಯಾವ ಸಿನಿಮಾಗಳಲ್ಲೂ ಪ್ರಶಸ್ತಿ ಪಡೆಯದ ತಂತ್ರಜ್ಞರು ಪುಟ್ಟಣ್ಣನ ಸಿನಿಮಾದಲ್ಲಿ ಕೆಲಸ ಮಾಡಿದಾಗ ಪ್ರಶಸ್ತಿಗಳನ್ನು ಪಡೆದ ಉದಾಹರಣೆಗಳು ಇವೆ.

ನಿರೂಪಣೆ: ಅವಿನಾಶ್ ಜಿ. ರಾಮ್ ಬೆಂಗಳೂರು

Leave a Reply

Your email address will not be published. Required fields are marked *

Back To Top