ಜಾನ್ವಿ ರಂಗಪ್ರವೇಶ

ನಟ ಸಂಜಯ್ ದತ್ ವೃತ್ತಿಬದುಕಿನ ಮೊದಲ ಚಿತ್ರ ‘ರಾಕಿ’ ತೆರೆಕಾಣುವ ಕೆಲವೇ ದಿನಗಳ ಮುನ್ನ ಅವರ ತಾಯಿ ನರ್ಗೀಸ್ ದತ್ ಅಸುನೀಗಿದ್ದರು. ಮಗನನ್ನು ಬೆಳ್ಳಿತೆರೆ ಮೇಲೆ ನೋಡುವ ಅವರ ಕನಸು ಕನಸಾಗಿಯೇ ಉಳಿಯಿತು. ಈಗ ಅಂಥದ್ದೇ ಘಟನೆ ಬಾಲಿವುಡ್​ನಲ್ಲಿ ಮರುಕಳಿಸುತ್ತಿದೆ. ‘ಲೇಡಿ ಸೂಪರ್ ಸ್ಟಾರ್’ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈ ಶುಕ್ರವಾರ (ಜು. 20) ‘ಧಡಕ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಅದನ್ನು ಕಣ್ತುಂಬಿಕೊಳ್ಳಲು ಶ್ರೀದೇವಿಯೇ ಇಲ್ಲ. ಅಮ್ಮನಿಲ್ಲ ಎಂಬ ಕೊರಗಿನ ನಡುವೆಯೇ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ ಜಾನ್ವಿ.

ಹಿಂದಿ ಚಿತ್ರರಂಗಕ್ಕೆ ಕಪೂರ್ ಕುಟುಂಬದ ಕೊಡುಗೆ ಬಹಳ ದೊಡ್ಡದು. ಪೃಥ್ವಿ ರಾಜ್ ಕಪೂರ್ ಅವರಿಂದ ಶುರುವಾದ ಸಿನಿಕೃಷಿ ಇಂದಿಗೂ ಸಾಗಿಬಂದಿದೆ. ಪೃಥ್ವಿರಾಜ್​ರ ದೂರದ ಸಂಬಂಧಿ ಸುರಿಂದರ್ ಕಪೂರ್ ಪುತ್ರನೇ ಬೋನಿ ಕಪೂರ್. ಅವರು ನಿರ್ವಪಕನಾಗಿ ಹೆಸರು ಮಾಡಿದರೆ, ಅವರ ಸಹೋದರರಾದ ಅನಿಲ್ ಕಪೂರ್, ಸಂಜಯ್ ಕಪೂರ್ ಹೀರೋ ಆಗಿ ಮೆರೆದರು. ಅನಿಲ್ ಮಕ್ಕಳಾದ ಸೋನಮ್ ಮತ್ತು ಹರ್ಷವರ್ಧನ್ ಕೂಡ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಬೋನಿ ಕಪೂರ್ ಮೊದಲ ಪತ್ನಿ ಮೋನಾ ಶೌರಿ ಪುತ್ರ ಅರ್ಜುನ್ ಕಪೂರ್ ಕೆಲ ವರ್ಷಗಳ ಹಿಂದೆಯೇ ಬಾಲಿವುಡ್ ಪ್ರವೇಶಿಸಿದ್ದಾರೆ. ಈಗಿನದ್ದು ಬೋನಿ ಎರಡನೇ ಪತ್ನಿ ಶ್ರೀದೇವಿ ಅವರ ಮಗಳು ಜಾನ್ವಿ ಸರದಿ. ಹೀಗೆ ಒಂದು ಪ್ರತಿಷ್ಠಿತ ಕುಟುಂಬದಿಂದ ಬರುತ್ತಿರುವ ನಟಿಯಾದ್ದರಿಂದ ಸಹಜವಾಗಿಯೇ ಜಾನ್ವಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಅದನ್ನು ಈಡೇರಿಸುವ ಎಲ್ಲ ಸಾಮರ್ಥ್ಯ ‘ಧಡಕ್’ ಚಿತ್ರಕ್ಕಿದೆ ಎಂಬುದಕ್ಕೆ ಈಗಾಗಲೇ ಸಾಕ್ಷಿ ಸಿಕ್ಕಿದೆ. ಟ್ರೇಲರ್ ಮತ್ತು ಹಾಡುಗಳು ಸೂಪರ್ ಹಿಟ್ ಆಗಿವೆ. ‘ಹಮ್ಟಿ ಶರ್ಮಾ ಕಿ ದುಲ್ಹನಿಯಾ’ ಮತ್ತು ‘ಬದ್ರಿನಾಥ್ ಕಿ ದುಲ್ಹನಿಯಾ’ ಚಿತ್ರಗಳ ಮೂಲಕ ಯಶಸ್ಸು ಕಂಡಿರುವ ನಿರ್ದೇಶಕ ಶಶಾಂಕ್ ಕೈತಾನ್ ಅವರೇ ‘ಧಡಕ್’ಗೆ ಆಕ್ಷನ್-ಕಟ್ ಹೇಳಿರುವುದರಿಂದ ಅಭಿಮಾನಿಗಳಲ್ಲಿ ಹೆಚ್ಚು ಭರವಸೆ ಮೂಡಿದೆ. ತಯಾರಿಯೊಂದಿಗೆ ಬಂದ ಕುವರಿ..: ಸ್ಟಾರ್ ಕುಟುಂಬದ ಕುಡಿಗಳು ಎಂದಾಗ ಸುಲಭವಾಗಿ ಅವಕಾಶ ಸಿಗುವುದು ಸಹಜ. ಆದರೆ ಸಿನಿಮಾರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲಬೇಕೆಂದರೆ ಪೂರ್ವತಯಾರಿ ಮಾಡಿಕೊಳ್ಳಬೇಕಿರುವುದು ಅತ್ಯಗತ್ಯ. ಶ್ರೀದೇವಿ ಪುತ್ರಿ ಎಂಬ ಕಾರಣಕ್ಕೆ ಜಾನ್ವಿಗೆ ‘ಧಡಕ್’ನಲ್ಲಿ ನಾಯಕಿಯಾಗುವ ಅವಕಾಶ ಸಿಕ್ಕಿರಬಹುದು. ಆದರೆ ಅದಕ್ಕೂ ಮುನ್ನ ಸೂಕ್ತ ತರಬೇತಿ ಪಡೆದುಕೊಂಡೇ ಅವರು ಕ್ಯಾಮರಾ ಮುಂದೆ ನಿಂತಿದ್ದು. ಅಪ್ಪ ನಿರ್ವಪಕ, ಅಮ್ಮ ಸೂಪರ್ ಸ್ಟಾರ್ ಎಂದಾಗ ಸಹಜವಾಗಿಯೇ ಜಾನ್ವಿಗೆ ನಟನೆಯ ವ್ಯಾಕರಣ ಅರ್ಥವಾಗಿರುತ್ತದೆ. ಶಾಲಾ ದಿನಗಳಿಂದಲೂ ನೃತ್ಯ, ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವೂ ಇತ್ತು. ಸಾಲದೆಂಬಂತೆ ಕ್ಯಾಲಿಫೋರ್ನಿಯಾದ ‘ಲೀ ಸ್ಟ್ರಾಬರ್ಗ್ ಥಿಯೇಟರ್ ಆಂಡ್ ಫಿಲ್ಮ್ ಇನ್​ಸ್ಟಿಟ್ಯೂಷನ್’ನಲ್ಲಿ ನಟನೆಯ ಪಾಠ ಕಲಿತು ಬಂದಿದ್ದಾರೆ. ರಣಬೀರ್ ಕಪೂರ್ ತರಬೇತಿ ಪಡೆದಿದ್ದು ಕೂಡ ಇದೇ ಸಂಸ್ಥೆಯಲ್ಲಿ ಎಂಬುದು ವಿಶೇಷ. ಅಂದ-ಚಂದದಲ್ಲೂ ಜಾನ್ವಿ ಫುಲ್ ಮಾರ್ಕ್ಸ್ ಗಿಟ್ಟಿಸುತ್ತಾರೆ. ರೂಪದರ್ಶಿಯಾಗಿ ಈಗಾಗಲೇ ಕೆಲವು ಪ್ರತಿಷ್ಠಿತ ಮ್ಯಾಗಜಿನ್​ಗಳ ಮುಖಪುಟದಲ್ಲಿ ಮಿಂಚಿದ ಖ್ಯಾತಿ ಅವರಿಗಿದೆ. ಇಷ್ಟೆಲ್ಲ ತಯಾರಿಯೊಂದಿಗೆ ವೃತ್ತಿಬದುಕು ಆರಂಭಿಸುತ್ತಿರುವ ಅವರನ್ನು ಸಿನಿಪ್ರಿಯರು ಹೇಗೆ ಸ್ವೀಕರಿಸುತ್ತಾರೆ ಎಂಬುದಷ್ಟೇ ಸದ್ಯದ ಕುತೂಹಲ.

ಕಪೂರ್ ಕುಡಿಗಿದೆ ಕರಣ್ ಅಭಯ

ಹಲವಾರು ವರ್ಷಗಳಿಂದ ಬಾಲಿವುಡ್ ಸಿನಿಮಾಗಳ ವ್ಯವಹಾರ ಬಲ್ಲಂತಹ ನಿರ್ವಪಕ ಕರಣ್ ಜೋಹರ್ ಅವರು ‘ಧಡಕ್’ಗೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಆಲಿಯಾ ಭಟ್, ವರುಣ್ ಧವನ್ ಮುಂತಾದ ಸ್ಟಾರ್ ಕುಡಿಗಳನ್ನು ಲಾಂಚ್ ಮಾಡಿದ ಖ್ಯಾತಿ ಕರಣ್​ಗೆ ಸಲ್ಲುತ್ತದೆ. ಇನ್ನು, ‘ಧಡಕ್’ ಕಥೆ ಬಗ್ಗೆ ಹೊಸತಾಗಿ ಹೇಳುವಂಥದ್ದೇನಿಲ್ಲ. 2016ರಲ್ಲಿ ತೆರೆಕಂಡ ಮರಾಠಿಯ ‘ಸೈರಾಠ್’ ಚಿತ್ರದ ರಿಮೇಕ್ ಇದು. ಸೀಮಿತ ಮಾರುಕಟ್ಟೆಯುಳ್ಳ ಮರಾಠಿ ಚಿತ್ರರಂಗದಲ್ಲೇ ಅಂದಾಜು 100 ಕೋಟಿ ರೂ. ಬಾಚಿಕೊಂಡಿದ್ದ ‘ಸೈರಾಠ್’ ಮೋಡಿ ಮಾಡಿತ್ತು. ಅದೇ ಈಗ ಹಿಂದಿ ಅವತರಣಿಕೆಯಲ್ಲಿ ಮೂಡಿಬಂದಿರುವುದರಿಂದ ಚಿತ್ರದ ವ್ಯಾಪ್ತಿ ದೊಡ್ಡದಾಗಿದೆ. ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ‘ಧಡಕ್’ ಬಿಡುಗಡೆ ಆಗುತ್ತಿದೆ. ಜಾನ್ವಿಗೆ ಜೋಡಿಯಾಗಿ ಶಾಹಿದ್ ಕಪೂರ್ ಸಹೋದರ ಇಶಾನ್ ಕಟ್ಟರ್ ನಟಿಸಿದ್ದಾರೆ. ಈ ಮೊದಲೇ ‘ಬಿಯಾಂಡ್ ದಿ ಕ್ಲೌಡ್ಸ್’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದ್ದರಾದರೂ ಅವರ ಪಾಲಿನ ಮೊದಲ ಕಮರ್ಷಿಯಲ್ ಚಿತ್ರ ‘ಧಡಕ್’. ಇತ್ತೀಚೆಗಷ್ಟೇ ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ‘ಧಡಕ್’ ಪ್ರೀಮಿಯರ್ ಪ್ರದರ್ಶನ ಏರ್ಪಡಿಸಲಾಗಿತ್ತು. ಸಿನಿಮಾ ಕಣ್ತುಂಬಿಕೊಂಡ ಅನಿಲ್ ಕಪೂರ್, ಸೋನಮ್ ಕಪೂರ್, ಸಂಜಯ್ ಕಪೂರ್, ವರುಣ್ ಧವನ್ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.