Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸಂಬಂಧಗಳ ಸೌಧ ಕಟ್ಟಿದ ಕಾಮಿಡಿಯನ್ ಗುಗ್ಗು

Friday, 06.07.2018, 3:04 AM       No Comments

| ಗಣೇಶ್ ಕಾಸರಗೋಡು

ನಟ ವೆಂಕಟ್, ತಮ್ಮನ್ನು ತಾವೇ ‘ಹುಚ್ಚ’ ಎಂದು ಕರೆದುಕೊಂಡರು. ಇದೇ ರೀತಿ ಮತ್ತೊಬ್ಬ ಹಿರಿಯ ನಟ ಮಾಕಂ ಅಶ್ವತ್ಥ ನಾರಾಯಣ್, ತಮ್ಮನ್ನು ತಾವೇ ‘ಗುಗ್ಗು’ ಎಂದು ಕರೆದುಕೊಂಡರು! ಇಲ್ಲಿ ನಾನು ಹೇಳಲು ಹೊರಟಿರುವುದು ‘ಹುಚ್ಚ’ನ ಕಥೆಯನ್ನಲ್ಲ; ‘ಗುಗ್ಗು’ ಕಥೆಯನ್ನು!

285 ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈ ‘ಗುಗ್ಗು’ ಅವರ ಬದುಕಿನ ಕಥೆ ರೋಚಕ, ರೋಮಾಂಚಕ. ಕನ್ನಡ ಚಿತ್ರರಂಗ ಮದರಾಸಿನಲ್ಲಿ ಬೇರು ಬಿಟ್ಟಿದ್ದ ಕಾಲದಲ್ಲಿ ಅಲ್ಲಿಯೇ ಇದ್ದುಕೊಂಡು ಕನ್ನಡ ಸಿನಿಮಾ ಕಲಾವಿದರ ಪಾಲಿನ ‘ಕಾಮಧೇನು’ವಾಗಿದ್ದ ‘ಗುಗ್ಗು’, ರಾಜ್​ಕುಮಾರ್ ಅವರಿಗೆ ಪರಮಾಪ್ತರಾಗಿದ್ದರು. ಇದೀಗ ಇಡಿಯಾಗಿ ಕನ್ನಡ ಚಿತ್ರರಂಗವೇ ಮರೆತು ಹೋಗಿರುವ ಈ ಅಜಾತಶತ್ರುವಿನ ಬಗ್ಗೆ ಈಗಿನ ಪೀಳಿಗೆಗೆ ಗೊತ್ತಿರುವುದಾದರೂ ಹೇಗೆ ಸಾಧ್ಯ? ಬದುಕು ಕಟ್ಟಿಕೊಳ್ಳಲೆಂದು ಮಾಗಡಿ ತಾಲೂಕಿನ ಗುಡೆಮಾರನಹಳ್ಳಿಯಿಂದ ಮದರಾಸಿಗೆ ವಲಸೆ ಹೋದ ಕಾಮಿಡಿಯನ್ ಗುಗ್ಗು, 285 ಚಿತ್ರಗಳಲ್ಲಿ ನಟಿಸಿದ್ದರೂ ಹಣ ಸಂಪಾದಿಸಲಿಲ್ಲ. ಆಸ್ತಿಪಾಸ್ತಿ ಮಾಡಿಡಲಿಲ್ಲ. ನಿಷ್ಠುರ ಸ್ವಾಭಿಮಾನದ ಬದುಕನ್ನು ನಡೆಸಿ, 1984ರ ಜೂನ್ 22 ರಂದು ವಿಧಿವಶರಾದ ನಮ್ಮ ನಡುವಿನ ಈ ಅಪರೂಪದ ಕಲಾವಿದ ಗುಗ್ಗು ಬಗ್ಗೆ ಪುಟ್ಟದೊಂದು ನೆನಪಿನ ಬರಹ ಈ ವಾರದ ಅಂಕಣ.

ನಟ ಗುಗ್ಗು ಎಂಥ ಎತ್ತರದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಎನ್ನುವುದಕ್ಕೆ ಸಾಕ್ಷಿಯಾಗಿ ಈ ಕೆಲವು ಘಟನೆಗಳು ನಿಮ್ಮ ಮುಂದಿವೆ.

  • ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರಿಗೆ ಗುಗ್ಗು ಅಂದರೆ ಪ್ರಾಣ. ಮದರಾಸಿನ ಜೆಮಿನಿ ಸ್ಟುಡಿಯೋ ಕಡೆ ಹೋಗುವಾಗಲೆಲ್ಲ ಕೋಡಂಬಾಕಮ್ ಬಳಿ ಕಾರು ನಿಲ್ಲಿಸಿ ಅಲ್ಲಿನ ಪುಟ್ಟ ಗುಡಿಸಿಲಿನಂಥ ಮನೆಯಲ್ಲಿ ವಾಸವಾಗಿದ್ದ ಗುಗ್ಗು ಅವರನ್ನು ಕರೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಸ್ಟುಡಿಯೋ ಪಕ್ಕದ ಪಾರ್ಕ್ ಹೋಟೆಲಿನಲ್ಲಿ ಮಸಾಲೆ ದೋಸೆ ಕೊಡಿಸುತ್ತಿದ್ದರಂತೆ!
  • ಕಡು ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಗುಗ್ಗು ಅವರು ತಂಗಿಯ ಮದುವೆಗೆ ಆರ್ಥಿಕವಾಗಿ ಕಷ್ಟಪಡುತ್ತಿದ್ದರು. ಅವರ ಕಷ್ಟವನ್ನು ನೋಡಲಾಗದೆ ಕಲಾವಿದರ ಸಂಘದ ಮಂದಿ ನಾಟಕ ಮಾಡಿ ಸಂಗ್ರಹಿಸಿದ್ದ ಹಣವನ್ನು ಕೊಡಲು ಮುಂದೆ ಬಂದಾಗ ಗುಗ್ಗು ಅವರು ಅದನ್ನು ನಯವಾಗಿ ನಿರಾಕರಿಸಿದರಂತೆ!
  • ‘ಬೇವು ಬೆಲ್ಲ’ ಚಿತ್ರಕ್ಕೆ ಸಂಭಾಷಣೆ ಬರೆದ ಸಾಹಿತಿ, ಕವಿ ಕರೀಂಖಾನ್ ಅವರು ತಮಗೆ ಸಂದಾಯವಾದ ಸಂಭಾವನೆಯನ್ನು ಗುಗ್ಗು ಅವರಿಗೆ ಕೊಡಲು ಹೋದಾಗ ಅದನ್ನು ಸ್ವೀಕರಿಸದೆ ಕರೀಂ ಸಾಹೇಬರನ್ನು ಹಾಗೆಯೇ ಕಳಿಸಿ ನಿರಾಶೆ ಮಾಡಿದ್ದೂ ಇದೆಯಂತೆ!
  • ತೆಲುಗು ಚಿತ್ರರಂಗದ ಮಹಾನ್ ಖಳನಾಯಕರಾಗಿದ್ದ ರಾಜನಾಲಾ ಅವರು ವಾರಕ್ಕೆರಡು ಬಾರಿ ಮದರಾಸಿನ ಕೋಡಂಬಾಕಮ್ೆ ಬಂದು ಗುಗ್ಗು ಅವರನ್ನು ಮಾತಾಡಿಸಿಕೊಂಡು ಹೋಗುತ್ತಿದ್ದರಂತೆ. ಇದನ್ನು ಕಂಡ ತಮಿಳು ಚಿತ್ರರಂಗದ ಅತಿರಥ ಮಹಾರಥರೆಲ್ಲ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುತ್ತಿದ್ದರಂತೆ!
  • ಒಮ್ಮೆ ಸಿನಿಮಾ ಸೆಟ್​ವೊಂದರಲ್ಲಿ ತಮಿಳು ಚಿತ್ರರಂಗದ ಶಿವಾಜಿ ಗಣೇಶನ್ ಅವರನ್ನು ಗುಗ್ಗು ಭೇಟಿಯಾಗಿದ್ದರು. ಆಗ ಸ್ವತಃ ಶಿವಾಜಿ ಗಣೇಶನ್ ಅವರೇ ದೊಡ್ಡದೊಂದು ಹೂವಿನ ಹಾರ ತರಿಸಿ ಗುಗ್ಗು ಅವರಿಗೆ ಹಾಕುತ್ತ ಹೇಳಿದ ಮಾತು, ‘ನಿಜವಾದ ಮನುಷ್ಯತ್ವವಿರುವ ಮಹಾನ್ ಮಾನವನಿಗೆ ನನ್ನದೊಂದು ಸಲಾಂ…’
  • ಬರೀ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಗುಗ್ಗು ನಿಧನರಾದಾಗ ಅವರ ಶವಸಂಸ್ಕಾರಕ್ಕೆ ರಾಜಕುಮಾರ್, ಭಾರತಿ, ಅಂಬರೀಷ್, ರವಿಚಂದ್ರನ್, ಶಿವರಾಮ್ ಭಗವಾನ್, ಚಿನ್ನೇಗೌಡ, ಲೀಲಾವತಿ ಮೊದಲಾದವರೆಲ್ಲ ಬಂದು ಶ್ರದ್ಧಾಂಜಲಿ ಅರ್ಪಿಸಿದ್ದರಂತೆ!
  • ಮಹಾ ಸ್ವಾಭಿಮಾನಿಯಾಗಿದ್ದ ಗುಗ್ಗು, ತಮ್ಮ ಸಾವಿನ ನಂತರದ ಶವಸಂಸ್ಕಾರಕ್ಕಾಗಿ ತಮ್ಮ ಅಕೌಂಟ್​ನಲ್ಲಿ ಒಂದಷ್ಟು ಹಣವನ್ನು ಹಾಕಿಟ್ಟಿದ್ದರು!- ಇಂಥ ಗುಗ್ಗು ವಿಧಿವಶರಾಗಿ ಆಗಲೇ 34 ವರ್ಷಗಳೇ ಕಳೆದುಹೋಗಿವೆ. ಬದುಕಿದ್ದಾಗಲೇ ನೆನಪಿಸಿಕೊಳ್ಳಲಾಗದ ಮಂದಿ ಸತ್ತ ಮೇಲೆ ನೆನಪಿಸಿಕೊಳ್ಳುತ್ತಾರಾ ನೀವೇ ಹೇಳಿ?

ಅಂದಹಾಗೆ, ಅಶ್ವತ್ಥ ನಾರಾಯಣ ಎಂಬ ಸುಂದರ ಹೆಸರು ಬಿಟ್ಟು ಈ ಕಲಾವಿದ ‘ಗುಗ್ಗು’ ಎಂಬ ಹೆಸರಿನಲ್ಲೇ ಪರಿಚಿತರಾದದ್ದು ಏಕೆ? ಕಾರಣ ಇಲ್ಲಿದೆ, ಅವರಿಗೆ ‘ಗುಗ್ಗು’ ಎಂಬ ಹೆಸರನ್ನಿಟ್ಟು ಆಶೀರ್ವಾದ ಮಾಡಿದವರು ರಂಗಭೂಮಿಯ ದಿಗ್ಗಜ ಕೆ. ಹಿರಣ್ಣಯ್ಯನವರು! ತಮ್ಮ ಕಂಪನಿ ನಾಟಕಕ್ಕೆ ಆಹ್ವಾನಿಸಿದ ಹಿರಣ್ಣಯ್ಯನವರು, ಪೆದ್ದು ಪೆದ್ದಾದ ಗುಗ್ಗು ಪಾತ್ರವನ್ನು ಅಶ್ವತ್ಥ ನಾರಾಯಣಗೆ ಕೊಡಿಸಿದರು! ನಾಟಕದ ರಿಹರ್ಸಲ್ ಸಮಯದಲ್ಲಿ ಹಿರಣ್ಣಯ್ಯನವರು ಪದೇಪದೆ ‘ನೀನು ಗುಗ್ಗು ಬಡ್ಡಿ ಮಗ ಕಣೋ’ ಎಂದು ರೇಗಿಸುತ್ತಿದ್ದರಂತೆ! ಕೊನೆಗೆ ‘ಗುಗ್ಗು’ ಹೆಸರೇ ಅಶ್ವತ್ಥ ನಾರಾಯಣ ಅವರಿಗೆ ಪ್ರಿಯವಾಗಿ 285 ಚಿತ್ರಗಳ ತನಕವೂ ಕಾಮಿಡಿಯನ್ ಗುಗ್ಗು ಆಗಿಯೇ ಅವರು ಖ್ಯಾತಿ ಪಡೆದರು!

ಕಲ್ಯಾಣಕುಮಾರ್ ನಾಯಕ ನಟರಾಗಿ ನಟಿಸಿದ ಮೊಟ್ಟಮೊದಲ ‘ನಟಶೇಖರ’ ಚಿತ್ರವೇ ಗುಗ್ಗು ಅವರ ಮೊದಲ ಚಿತ್ರ! ಕನ್ನಡ ಚಿತ್ರರಂಗ ಬಾಲ್ಯಾವಸ್ಥೆಯಲ್ಲಿದ್ದಾಗ ಮದರಾಸಿಗೆ ಹೋದ ಕನ್ನಡ ಕಲಾವಿದರಿಗೆ ಆಶ್ರಯದಾತರಾಗಿದ್ದದ್ದೂ ಇದೇ ಗುಗ್ಗು! ಕೋಡಂಬಾಕಮ್ಲ್ಲಿ ಪುಟ್ಟ ಗುಡಿಸಲಿನಂಥ ಮನೆ ಮಾಡಿಕೊಂಡಿದ್ದರು ಗುಗ್ಗು. ಉದ್ದಕ್ಕೆ ಮಲಗಿದರೆ ಕಾಲು ಚಾಚಲು ಸಾಧ್ಯವಾಗದಂಥ ಹರಕಲು ಗುಡಿಸಲದು! ನಂಬಿದ್ರೆ ನಂಬಿ, ಬಿಟ್ರೆ ಬಿಡಿ, ಇಂಥ ಗುಡಿಸಲಿನಲ್ಲೇ ರಾಜಕುಮಾರ್ ಅವರಿಂದ ಹಿಡಿದು ನೂರಾರು ಕಲಾವಿದರು ಒಂದು ಹಂತದ ವರೆಗಿನ ತಮ್ಮ ಕಲಾಜೀವನವನ್ನು ರೂಪಿಸಿಕೊಂಡಿದ್ದು! ಮನೆಯ ವ್ಯವಸ್ಥೆ ಇದ್ದ ಕಲಾವಿದರು ಕೂಡ ಸಂಜೆ ಹೊತ್ತು ಬಂದು ಸೇರಿ ಹರಟೆ ಹೊಡೆಯುತ್ತಿದ್ದ ಮಹಾನ್ ಸೌಧವದು. ಹೀಗಾಗಿಯೇ ಈ ಸೌಧಕ್ಕೆ ‘ಗುಗ್ಗು ಮಹಲ್’ ಎಂಬ ಹೆಸರನ್ನಿಟ್ಟಿದ್ದರು ಅಶ್ವತ್ಥ ನಾರಾಯಣ! ತಾವೇ ಸ್ವತಃ ಕಡುಬಡವರಾಗಿದ್ದರೂ ಕನ್ನಡ ಕಲಾವಿದರ ಆಶ್ರಯದಾತರಾಗಿದ್ದರು ಗುಗ್ಗು! ಮಧ್ಯಾಹ್ನದ ಊಟವೂ ಸೇರಿ ಸಂಜೆಯ ತಿಂಡಿ-ಕಾಫಿಯ ಸೇವನೆಯೂ ಗುಗ್ಗು ಸಂಪಾದನೆಯಿಂದಲೇ ನಡೆಯಬೇಕಾಗಿದ್ದ ದಿನಗಳವು.

ನರಪೇತಲ ಆಸಾಮಿಯಾಗಿದ್ದ ಗುಗ್ಗು ಅವರ ಮನಸ್ಸು ಮತ್ತು ಹೃದಯ ಮಾತ್ರ ಸುರಸುಂದರ! ‘ನಟಶೇಖರ’ ಚಿತ್ರದ ನಂತರ ಗುಗ್ಗು ನಟಿಸಿದ ಚಿತ್ರಗಳೆಂದರೆ, ಬಂಗಾರಿ, ಮುತೆôದೆ ಭಾಗ್ಯ, ತಾಯಿಯ ಮಡಿಲಲ್ಲಿ, ಅಣ್ಣ ತಂಗಿ, ಸಿಂಹ ಸ್ವಪ್ನ, ಬೇವು ಬೆಲ್ಲ, ಮಾಂಗಲ್ಯ ಯೋಗ, ಭಾಗ್ಯ ಚಕ್ರ, ದೇವ ಸುಂದರಿ, ದೂರದ ಬೆಟ್ಟ, ಹೃದಯ ಸಂಗಮ, ಹೇಮಾವತಿ…ಇತ್ಯಾದಿ ಇತ್ಯಾದಿ.

1984ರಲ್ಲಿ ಗುಗ್ಗು ನಿಧಾನರಾದಾಗ ಅವರ ಶವಸಂಸ್ಕಾರಕ್ಕೆ ನೆರವಾದವರು ಶಿವರಾಮ್ ಕನ್ನಡ ಕಲಾವಿದರ ಆಶ್ರಯಧಾತರಾಗಿದ್ದ ಗುಗ್ಗು ಮರಣದ ನಂತರ ಕೋಡಂಬಾಕ್ಕಮ್ ಆ ‘ಗುಗ್ಗು ಮಹಲ್’ ಅನಾಥವಾಯಿತು. ಕನ್ನಡ ಚಿತ್ರರಂಗ ಇಡಿಯಾಗಿ ಬೆಂಗಳೂರಿಗೆ ವಲಸೆ ಬಂದ ನಂತರ ಎಲ್ಲರ ಪ್ರೀತಿಯ ‘ಗುಗ್ಗು’ ಮತ್ತು ‘ಗುಗ್ಗು ಮಹಲ್’ ಬರೀ ನೆನಪಾಗಿ ಉಳಿಯಿತು.

(ಲೇಖಕರು ಹಿರಿಯ ಸಿನಿಮಾ ಪತ್ರಕರ್ತರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top