ಅಯೋಗ್ಯನಾಗಿ ಯೋಗ್ಯನಾಗುವ ಸತೀಶ್

ನಟ ಸತೀಶ್ ನೀನಾಸಂ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಕಾರಣ, ‘ಅಯೋಗ್ಯ’. ಹೌದು, ಈ ಶುಕ್ರವಾರ (ಆ.17) ದೊಡ್ಡಮಟ್ಟದಲ್ಲಿ ತೆರೆಕಾಣಲು ಸಜ್ಜಾಗಿರುವ ‘ಅಯೋಗ್ಯ’ ಚಿತ್ರದ ಬಗ್ಗೆ ತುಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಸತೀಶ್. ಈ ಸಿನಿಮಾದಲ್ಲಿ ಏನಿದೆ? ಪ್ರೇಕ್ಷಕನಿಗೆ ಏನೆಲ್ಲ ಸಿಗಲಿದೆ ಎಂಬ ಮಾಹಿತಿಯನ್ನು ನಮಸ್ತೆ ಬೆಂಗಳೂರು ಜತೆ ಹಂಚಿಕೊಡಿದ್ದಾರೆ.

| ಅವಿನಾಶ್ ಜಿ. ರಾಮ್ ಬೆಂಗಳೂರು

ನೀವು ‘ಅಯೋಗ್ಯ’ನಾದ ಬಗೆಯನ್ನು ಹೇಳಿ?

ಒಂದು ಸಿನಿಮಾ ಒಪ್ಪಿಕೊಳ್ಳಲು ಮುಖ್ಯವಾಗಿ ಕಥೆ ಚೆನ್ನಾಗಿರಬೇಕು. ಅದು ‘ಅಯೋಗ್ಯ’ದಲ್ಲಿತ್ತು. ಕಥೆ ಕೇಳಿದೊಡನೆ, ಖುಷಿಯಿಂದ ಒಪ್ಪಿಕೊಂಡೆ. ಆದರೆ, ಶುರುವಿನಲ್ಲೇ ವಿಘ್ನಗಳು ಎದುರಾದವು. ಮುಹೂರ್ತವಾಗಿ ಸಿನಿಮಾ ನಿಂತು ಹೋಗಿತು. ಒಂದಷ್ಟು ತೊಂದರೆಗಳು ಬಂದವು. ಆದಾದ ಮೇಲೆ ‘ಚಮಕ್’ ನಿರ್ವಪಕ ಟಿ.ಆರ್. ಚಂದ್ರಶೇಖರ್ ಸಿನಿಮಾಕ್ಕೆ ನಿರ್ವಪಕರಾಗಿ ಬಂದರು. ಅಲ್ಲಿಂದ ಎಲ್ಲವೂ ಸರಾಗ. ಕನ್ನಡದಲ್ಲಿ ಹಳ್ಳಿ ಸೊಗಡಿನ ಸಿನಿಮಾಗಳು ತುಂಬ ಕಡಿಮೆ. ನಮ್ಮ ಸಿನಿಮಾ ಅಂಥದ್ದೊಂದು ಕೊರತೆ ನೀಗಿಸಲಿದೆ.

ಬೈಗುಳದ ಶೀರ್ಷಿಕೆ ಸಿನಿಮಾಕ್ಕೆ ಎಷ್ಟು ಹೊಂದಿಕೆಯಾಗುತ್ತದೆ?

ನೀವಿಲ್ಲಿ ಎರಡು ಶೇಡ್​ಗಳುಳ್ಳ ಅಯೋಗ್ಯನನ್ನು ನೋಡಬಹುದು. ಅಯೋಗ್ಯ ಅಂತ ಬೈಯಬಹುದು ಅಥವಾ ಪ್ರೀತಿಯಿಂದ ಅಯೋಗ್ಯ ಅಂತಾನೂ ಹೇಳಬಹುದು. ಕೆಟ್ಟದ್ದಕ್ಕೂ, ಒಳ್ಳೆಯದಕ್ಕೂ ಈ ಪದ ಬಳಕೆ ಆಗುತ್ತದೆ. ಅಂಬರೀಶ್ ಅವರು ಒಂದು ಮಾತು ಹೇಳಿದ್ರು; ‘ಅಯೋಗ್ಯ’ ಸಿನಿಮಾ ನೋಡಿಕೊಂಡು ಆಚೆ ಬರುವಾಗ ಖಂಡಿತ ನಿಮಗೊಬ್ಬ ಯೋಗ್ಯ ಕಾಣಿಸುತ್ತಾನೆ..- ಯೋಗ್ಯ ಆಗೋಕು ಮುಂಚೆ ಅಯೋಗ್ಯನಾಗಿರಬೇಕು ಎಂದು ಸಿನಿಮಾದ ಹಾಡಿನಲ್ಲೂ ಹೇಳಿದ್ದೇವೆ. ಇಲ್ಲಿ ಸತ್ಯ ಹರಿಶ್ಚಂದ್ರ ಯಾರಿದ್ದಾರೆ ಹೇಳಿ? ಎಲ್ಲರಲ್ಲೂ ತಪು್ಪಗಳಿವೆ. ಒಂದು ಯೋಗ್ಯ ಕೆಲಸ ಮಾಡಬೇಕು ಎಂದಾಗ ಸಾವಿರ ಬಾರಿ ಅಯೋಗ್ಯ ಎನಿಸಿಕೊಂಡರೂ ತಪ್ಪಿಲ್ಲ.

‘ಅಯೋಗ್ಯ’ ಜನರಿಗೆ ಏನೆಲ್ಲ ಮನರಂಜನೆ ನೀಡುತ್ತಾನೆ?

ಚಿತ್ರದಲ್ಲಿ ಸಾಧು ಕೋಕಿಲ, ರವಿಶಂಕರ್, ತಬಲಾ ನಾಣಿ, ಗಿರಿ, ಶಿವರಾಜ್ ಕೆ.ಆರ್. ಪೇಟೆ, ಸುಂದರ್​ರಾಜ್, ಕುರಿ ಪ್ರತಾಪ್ ಹೀಗೆ ಅನುಭವಿ ಹಾಸ್ಯ ಕಲಾವಿದರ ಬಳಗವೇ ಇದೆ. ನಾನ್ ಸ್ಟಾಪ್ ನಗು ಇದ್ದೇ ಇರುತ್ತದೆ. ಖಂಡಿತ ಒಮ್ಮೆ ನೋಡಿದವರು ಪದೇಪದೆ ನೋಡುತ್ತಾರೆ ಎಂಬ ಭರವಸೆ ನನಗೆ ಇದೆ. ಹಾಸ್ಯಕ್ಕೆ ಅಂತ ಬೇರೆ ಟ್ರಾ್ಯಕ್ ಇಲ್ಲ. ಕಥೆಯೊಳಗೆ ಅದು ಬೆರೆತು ಹೋಗಿದೆ. ಹಿನ್ನೆಲೆ ಸಂಗೀತದ ಜತೆಗೆ ಎಫೆಕ್ಟ್ ತುಂಬ ಚೆನ್ನಾಗಿದೆ. ಚುನಾವಣೆ ಜಿದ್ದಾಜಿದ್ದಿ ಜತೆಗೆ ಹಳ್ಳಿ ಲವ್ ಸ್ಟೋರಿ ಇದೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನಿಗೆ ಯಾಕೆ ಅಯೋಗ್ಯ ಅಂತಾರೆ ಎಂಬುದನ್ನೆಲ್ಲ ಮನರಂಜನೆಯ ಅಂಶಗಳನ್ನಿಟ್ಟುಕೊಂಡೇ ಹೇಳಿದ್ದೇವೆ.

ಈಗಾಗಲೇ ಮಂಡ್ಯ ಸೊಗಡಿನ ಸಿನಿಮಾಗಳನ್ನು ನೀವು ಮಾಡಿದ್ದೀರಿ. ನೀವು ಕೂಡ ಮಂಡ್ಯದವರೇ. ಅಂಥ ಸಿನಿಮಾಗಳ ಆಫರ್ ಸಿಕ್ಕಾಗ ನಿಮ್ಮ ಫೀಲ್ ಹೇಗಿರುತ್ತದೆ..?

ತುಂಬ ಖುಷಿಯಾಗುತ್ತದೆ. ಮಂಡ್ಯ ಸೊಗಡಿನ ಭಾಷೆ ಬಳಸುವಾಗ ಒಂದು ಪೋರ್ಸ್ ಸಿಗುತ್ತದೆ. ಅದು ನನಗೆ ಇಷ್ಟ. ಮಂಡ್ಯ ಸೊಗಡಿನ ಭಾಷೆ, ಉತ್ತರ ಕರ್ನಾಟಕದ ಭಾಷೆ, ಮಂಗಳೂರು ಭಾಷೆಗಳು ತುಂಬ ವಿಶೇಷವಾಗಿವೆ. ಈ ಗಂಡು ಭಾಷೆಗಳನ್ನು ಸಿನಿಮಾಗಳಲ್ಲಿ ಉತ್ತಮವಾಗಿ ಬಳಸಿಕೊಂಡರೆ, ಅದ್ಭುತವಾದ ಫಲಿತಾಂಶ ಸಿಗುತ್ತದೆ. ವಿಶೇಷವಾಗಿ ನನ್ನ ಸಿನಿಮಾಗಳು ಮಂಡ್ಯದ ಕಡೆ ಹಿಟ್ ಆದಂತೆ, ಉತ್ತರ ಕರ್ನಾಟಕದಲ್ಲೂ ಯಶಸ್ಸು ಕಂಡಿವೆ. ಇನ್ನೊಂದು ಹೊಸ ವಿಷಯ ಎಂದರೆ, ನನ್ನ ಮುಂದಿನ ಸಿನಿಮಾವೊಂದು ಸಂಪೂರ್ಣ ಉತ್ತರ ಕರ್ನಾಟಕದ ಭಾಷೆಯಲ್ಲೇ ಮೂಡಿಬರಲಿದೆ. ಅಲ್ಲಿಯೇ ಶೂಟಿಂಗ್ ಆಗಲಿದೆ.

ನಿಮ್ಮ ಮತ್ತು ರಚಿತಾ ರಾಮ್ ಕಾಂಬಿನೇಷನ್ ಬಗ್ಗೆ ಹೇಳಿ?

ಅವರು ತುಂಬ ಎನರ್ಜಿ ಇರುವಂತಹ ಮುದ್ದಾದ ಹುಡುಗಿ. ಈಗಾಗಲೇ ಸಾಕಷ್ಟು ಹಿಟ್ ಸಿನಿಮಾ ನೀಡಿರುವಂತಹ ನಟಿ. ಈ ಸಿನಿಮಾದಲ್ಲಿ ನಮ್ಮಿಬ್ಬರ ಕಾಂಬಿನೇಷನ್ ಅದ್ಭುತವಾಗಿ ಮೂಡಿಬಂದಿದೆ. ಎಷ್ಟರಮಟ್ಟಿಗೆ ಈ ಜೋಡಿ ನಿಮಗೆ ಇಷ್ಟವಾಗಲಿದೆ ಎಂದರೆ, ಮಂಡ್ಯದ ಯಾವುದೋ ಹಳ್ಳಿಯ ಪ್ರೇಮಿಗಳಿವರು ಎನಿಸುತ್ತಿದೆ.

ಹಾಡುಗಳು ಈಗಾಗಲೇ ಹಿಟ್ ಆಗಿವೆ. ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯ..

ಯುಟ್ಯೂಬ್​ನಲ್ಲಿ ಹಾಡುಗಳು ಹಬ್ಬ ಮಾಡಿವೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿವೆೆ. ‘ಏನಮ್ಮಿ ಏನಮ್ಮಿ…’ ಹಾಡಂತೂ ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಈಗಾಗಲೇ 60 ಲಕ್ಷಕ್ಕೂ ಅಧಿಕ ಬಾರಿ ಈ ಹಾಡನ್ನು ಜನ ನೋಡಿದ್ದಾರೆ. ಆ ಹಾಡಿಗೆ ಡಬ್​ಸ್ಮಾಶ್ ಮಾಡಿರುವ ವಿಡಿಯೋಗಳು ಲೆಕ್ಕವಿಲ್ಲದಷ್ಟು ಬರುತ್ತಿವೆ. ಇದೆಲ್ಲ ಜನರು ಸಿನಿಮಾಗೆ, ಆ ಹಾಡಿಗೆ ತೋರಿಸುತ್ತಿರುವ ಪ್ರೀತಿ. ಅರ್ಜುನ್ ಜನ್ಯ ಅವರ ಸಂಗೀತ ಅಂಥದ್ದೊಂದು ಮೋಡಿ ಮಾಡಿದೆ.

ನಿಮ್ಮ ಕರಿಯರ್​ನಲ್ಲಿ ಈ ಸಿನಿಮಾ ದೊಡ್ಡಮಟ್ಟದಲ್ಲಿ ತೆರೆಕಾಣುತ್ತಿದೆ.. ಆ ಬಗ್ಗೆ ಹೇಳಿ?

ಈ ಸಿನಿಮಾಕ್ಕೆ ಸಿಕ್ಕಿರುವ ಹೈಪ್ ನನ್ನ ಹಿಂದಿನ ಯಾವ ಸಿನಿಮಾಗಳಿಗೂ ಸಿಕ್ಕಿಲ್ಲ. ಈ ಸಿನಿಮಾಕ್ಕೆ ಏನು ಬೇಕೋ ಅದೆಲ್ಲವನ್ನು ಅದೇ ತೆಗೆದುಕೊಳ್ಳುತ್ತಿದೆ. ನಾವು ಬಯಸಿದ್ದು ಹಾಲು ಅನ್ನ. ಆದರೆ, ಜನ ಕೊಟ್ಟಿರುವುದು ಬಿರಿಯಾನಿ! ರಾಜ್ಯಾದ್ಯಂತ 289 ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ನಮ್ಮ ಸಿನಿಮಾ ತೆರೆಕಾಣಲಿದೆ. ಕರ್ನಾಟಕ ಮಾತ್ರವಲ್ಲದೆ, 16 ಹೊರರಾಜ್ಯಗಳಲ್ಲಿ, 66 ದೇಶಗಳಲ್ಲಿ ‘ಅಯೋಗ್ಯ’ ಪ್ರದರ್ಶನ ಕಾಣಲಿದೆ. ಶೇ.70 ಭಾಗ ಹಣ ಈಗಾಗಲೇ ಈ ನಿರ್ವಪಕರಿಗೆ ಮರಳಿದೆ.

ಚೊಚ್ಚಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿರುವ ಮಹೇಶ್​ಕುಮಾರ್ ಬಗ್ಗೆ ಹೇಳಿ?

ನನ್ನ ಮತ್ತು ಮಹೇಶ್ ಅವರ ಒಡನಾಟ ಇಂದು ನಿನ್ನೆಯದಲ್ಲ. ‘ಮನಸಾರೆ’ ಸಿನಿಮಾ ಮಾಡುವಾಗಲೇ ನಾವಿಬ್ಬರು ಪರಿಚಿತರು. ಅವರ ವೃತ್ತಿ ಜೀವನದ ಪ್ರತಿ ಹಂತಗಳನ್ನು ನಾನು ನೋಡಿದ್ದೇನೆ. ಪಾತ್ರಗಳನ್ನು ಅದ್ಭುತವಾಗಿ ಸೃಷ್ಟಿಸುವ ಕಲೆ ಮಹೇಶ್​ಗೆ ಇದೆ. ತುಂಬ ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಈ ಸಿನಿಮಾದಿಂದ ಮಹೇಶ್​ಗೆ ದೊಡ್ಡ ಹೆಸರು ಸಿಗಲಿದೆ.