ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಹಾಡುವಾಗ ಎದ್ದುನಿಲ್ಲಲು ಇಷ್ಟವಿಲ್ಲ: ನಟ ಪವನ್​ ಕಲ್ಯಾಣ್​

ಹೈದರಾಬಾದ್​: ಸಿನಿಮಾ ಥಿಯೇಟರ್​ಗಳಲ್ಲಿ ರಾಷ್ಟ್ರಗೀತೆ ಹಾಕಿದಾಗ ಪ್ರತಿಯೊಬ್ಬರೂ ಎದ್ದುನಿಲ್ಲಬೇಕು ಎಂದು 2016ರಲ್ಲಿ ಸುಪ್ರೀಂಕೋರ್ಟ್​ ಸೂಚನೆ ನೀಡಿದ್ದಾಗಿನಿಂದಲೂ ಅದನ್ನು ವಿರೋಧಿಸುತ್ತ ಬಂದಿದ್ದ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ ಮತ್ತೆ ಅದೇ ವಿಚಾರ ಮಾತನಾಡಿದ್ದು, ಥಿಯೇಟರ್​ಗಳಲ್ಲಿ ರಾಷ್ಟ್ರಗೀತೆ ಹಾಡುವಾಗ ನನಗೆ ಎದ್ದುನಿಲ್ಲಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಸಿನಿಮಾ ಥಿಯೇಟರ್​ಗಳಲ್ಲಿ ನಮ್ಮ ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸುತ್ತೇವೆ. ನನ್ನ ದೇಶಭಕ್ತಿ ಪರೀಕ್ಷೆ ಮಾಡಿಕೊಳ್ಳಲು ಅದು ಸ್ಥಳವಲ್ಲ. ಗಡಿಯಲ್ಲಿ ಯುದ್ಧ ಸನ್ನಿವೇಶವಿದೆ. ಅಲ್ಲಿ ತೋರಬೇಕು ನಮ್ಮ ದೇಶಪ್ರೇಮವನ್ನು ಎಂದಿದ್ದಾರೆ.
ಅಲ್ಲದೆ, ರಾಜಕೀಯ ಪಕ್ಷಗಳು ತಮ್ಮ ಸಭೆ ನಡೆಯುವ ಮೊದಲು ರಾಷ್ಟ್ರಗೀತೆ ಹಾಡಬಹುದಲ್ಲ. ಸಿನಿಮಾ ಮಂದಿರಗಳಲ್ಲಿ ಮಾತ್ರವೇಕೆ? ದೇಶದ ಅತ್ಯುನ್ನತ ಕಚೇರಿಗಳಲ್ಲೂ ರಾಷ್ಟ್ರಗೀತೆ ಹಾಡಬೇಕು ಎಂದಿದ್ದಾರೆ.
ಸಮಾಜದಲ್ಲಿ ಇನ್ನೂ ರೌಡಿಯಿಸಂ, ಭ್ರಷ್ಟಾಚಾರಗಳು ಅಸ್ತಿತ್ವದಲ್ಲಿ ಇವೆ. ಅವುಗಳನ್ನು ನಿರ್ಮೂಲನ ಮಾಡಬೇಕು. ಆ ಮೂಲಕ ನಮ್ಮ ದೇಶಭಕ್ತಿ ತೋರಿಸಬೇಕು ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟ್​ ಸೂಚನೆಗೆ ತಗಾದೆ ತೆಗೆದಿದ್ದ ಪವನ್​ ಕಲ್ಯಾಣ್​ ವಿರುದ್ಧ 2016ರ ಡಿಸೆಂಬರ್​ನಲ್ಲಿ ಹೈದರಾಬಾದ್​ ಮೂಲದ ವಕೀಲರೋರ್ವರು ದೂರು ದಾಖಲಿಸಿ, ರಾಷ್ಟ್ರಗೀತೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ನಂತರ 2017ರ ಅಕ್ಟೋಬರ್​ನಲ್ಲಿ ತೀರ್ಪಿನ ಮರುಪರಿಶೀಲನೆ ಮಾಡಿದ್ದ ಸುಪ್ರೀಂಕೋರ್ಟ್​ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕಿದಾಗ ಎದ್ದುನಿಲ್ಲುವುದು ಕಡ್ಡಾಯವಲ್ಲ ಎಂದಿತ್ತು. ಮತ್ತೆ 2018ರಲ್ಲಿ ಕೊನೇ ತೀರ್ಪು ನೀಡಿ, ಸಿನಿಮಾ ಹಾಲ್​ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದಿದೆ.