ಬೆಂಗಳೂರು: ಸಾಮಾನ್ಯವಾಗಿ ಪ್ರತಿ ಶುಕ್ರವಾರ ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ, ಈ ಬಾರಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಮತ್ತು ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವಿರುವ ಕಾರಣ ಹೆಚ್ಚುವರಿ ಎರಡು ದಿನ ರಜೆಗಳಿವೆ. ನಂತರ ವಾರಾಂತ್ಯವಿರುವ ಕಾರಣ, ಈ ಲಾಂಗ್ ವೀಕೆಂಡ್ ಅನ್ನು ಸದ್ಬಳಕೆ ಮಾಡಿಕೊಳ್ಳಲು ಸಿನಿಮಾಗಳು ನಾ ಮುಂದು, ತಾ ಮುಂದು ಅಂತ ಥಿಯೇಟರ್‌ಗಳತ್ತ ಮುಖ ಮಾಡಿವೆ. ಕನ್ನಡದಲ್ಲಿ ‘ಕೃಷ್ಣಂ ಪ್ರಣಯ ಸಖಿ’, ‘ಗೌರಿ’ ಚಿತ್ರಗಳು ತೆರೆಗೆ ಬರಲು ರೆಡಿಯಾಗಿವೆ. ಜತೆಗೆ ಪರಭಾಷೆಯ ಪ್ಯಾನ್ ಇಂಡಿಯಾ ಚಿತ್ರಗಳೂ ಸೇರಿ ಬಾಲಿವುಡ್ ಸ್ಟಾರ್‌ಗಳ ಸಿನಿಮಾಗಳೂ ಬಾಕ್ಸಾಫೀಸಿನಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಲ್ಲಿ ವಿಜಯಲಕ್ಷ್ಮೀ ಒಲಿಸಿಕೊಳ್ಳಲು ಮುಖಾಮುಖಿಯಾಗಲಿವೆ!
ಕೃಷ್ಣನ ಪ್ರಣಯ ಶುರು: ಕಳೆದ ವರ್ಷ ‘ಬಾನದಾರಿಯಲ್ಲಿ’ ಮಿಂಚಿದ್ದ ನಟ ಗಣೇಶ್ ಮತ್ತು ಮಲಯಾಳಿ ನಟಿ ಮಾಳವಿಕಾ ನಾಯರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’ ಈ ವಾರ ತೆರೆ ಕಾಣುತ್ತಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಸಾಂಗ್‌ಗಳು ಈಗಾಗಲೇ ಹಿಟ್ ಲಿಸ್ಟ್ ಸೇರಿವೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಚಿತ್ರವಾಗಿದ್ದು ಗಣೇಶ್, ಮಾಳವಿಕಾ ಜತೆ ಶರಣ್ಯಾ ಶೆಟ್ಟಿ, ಚಂದನಾ ಗೌಡ, ಶಶಿಕುಮಾರ್, ರಂಗಾಯಣ ರಘು, ಗಿರೀಶ್ ಶಿವಣ್ಣ ಪ್ರಮುಖ ತಾರಾಗಣದಲ್ಲಿದ್ದಾರೆ.
ವರಮಹಾಲಕ್ಷ್ಮೀಗೆ ‘ಗೌರಿ’ ಹಬ್ಬ: ಇಂದ್ರಜಿತ್ ಲಂಕೇಶ್ ನಿರ್ದೇಶನದ ಹಾಗೂ ಅವರ ಪುತ್ರ ಸಮರ್ಜಿತ್ ಲಂಕೇಶ್ ನಾಯಕನಾಗಿ ಡೆಬ್ಯೂ ಮಾಡುತ್ತಿರುವ ‘ಗೌರಿ’ ನಾಳೆ ಬಿಡುಗಡೆಯಾಗುತ್ತಿದೆ. ಸಮರ್ಜಿತ್‌ಗೆ ‘ಪುಟ್ಟಗೌರಿ ಮದುವೆ’ ಖ್ಯಾತಿಯ ಸಾನ್ಯಾ ಅಯ್ಯರ್ ಜೋಡಿಯಾಗಿದ್ದು, ಇಬ್ಬರೂ ಮೊದಲ ಬಾರಿಗೆ ಬೆಳ್ಳಿತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸಮರ್ಜಿತ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಸಂಪತ್ ಮೈತ್ರೇಯ, ಮಾನಸಿ ಸುಧೀರ್, ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ ನಟಿಸಿದ್ದಾರೆ.
‘ತಂಗಲಾನ್’ ಹೋರಾಟ: ಕನ್ನಡದ ಸಿನಿಮಾಗಳ ಜತೆಗೆ ಬೇರೆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳು ಕೂಡ ಸ್ವಾತಂತ್ರ್ಯ ದಿನಾಚರಣೆಗೆ ತೆರೆ ಕಾಣುತ್ತಿವೆ. ತಮಿಳಿನಲ್ಲಿ ಚಿಯಾನ್ ವಿಕ್ರಮ್ ಅಭಿನಯದ ‘ತಂಗಲಾನ್’ ನಾಳೆ ಬಿಡುಗಡೆಯಾಗಲಿದೆ. ಕೆಜಿಎ್ ಗಣಿ ಹಿನ್ನೆಲೆಯ ಕಥೆ ಇದಾಗಿದ್ದು, ರಾಜ್ಯದಲ್ಲಿ ಸದ್ದು ಮಾಡುವ ಅವಕಾಶವಿದೆ. ವಿಕ್ರಮ್ ಸೇರಿ ಪಾರ್ವತಿ, ಮಾಳವಿಕಾ ಮಾಧವನ್, ಡೇನಿಲ್ ಕಾಲ್ಟಗಿರೋನ್ ತಾರಾಗಣದಲ್ಲಿದ್ದಾರೆ. ಇನ್ನು, ಕೀರ್ತಿ ಸುರೇಶ್ ಅಭಿನಯದ ‘ರಘು ತಾತ’ ಕೂಡ ಈ ವಾರ ರಿಲೀಸ್ ಆಗಲಿದ್ದು, ಈ ಚಿತ್ರವನ್ನು ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಿಸಿದೆ. ತಮಿಳಿನ ಇನ್ನೊದು ಚಿತ್ರ ‘ಡೆಮೊಂಟೆ ಕಾಲೋನಿ-2’ ಹಾಗೂ ಮಲಯಾಳಂನ ‘ನುನಕ್ಕುಳಿ’, ‘ವಾಘಾ-ಬಯೋಪಿಕ್ ಆ್ ಬಿಲಿಯನ್ ಬಾಯ್ಸ’ ಇದೇ ವಾರ ಬಿಡುಗಡೆಯಾಗುತ್ತಿವೆ.
‘ಡಬಲ್ ಇಸ್ಮಾರ್ಟ್’ಗೆ ‘ಬಚ್ಚನ್’ ಸವಾಲು: ತೆಲುಗಿನ ಬಹುನಿರೀಕ್ಷಿತ ‘ಡಬಲ್ ಇಸ್ಮಾರ್ಟ್’ ಈ ವಾರ ರಿಲೀಸ್ ಆಗಲಿದೆ. ರಾಮ್ ಪೋತಿನೆನಿ- ಪೂರಿ ಜಗನ್ನಾಥ್ ಕಾಂಬಿನೇಷನ್‌ನ ಈ ಪ್ಯಾನ್ ಇಂಡಿಯಾ ಚಿತ್ರವು ಟ್ರೇಲರ್, ಸಾಂಗ್‌ನಿಂದ ಸದ್ದು ಮಾಡಿದೆ. ಚಿತ್ರದಲ್ಲಿ ರಾಮ್‌ಗೆ ಕಾವ್ಯಾ ಥಾಪರ್ ನಾಯಕಿಯಾಗಿದ್ದು, ಸಂಜಯ್ ದತ್, ಸಾಯಾಜಿ ಸಿಂಧೆ, ಮಕರಂದ ದೇಶಪಾಂಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ರಾಮ್‌ಗೆ ಈ ಬಾರಿ ‘ಮಿಸ್ಟರ್.ಬಚ್ಚನ್’ ಮೂಲಕ ರವಿತೇಜ ಸವಾಲು ಹಾಕಲಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ನಟಿಸಿದ್ದ ‘ರೇಡ್’ ಚಿತ್ರದ ರಿಮೇಕ್ ಇದಾಗಿದ್ದು, ಜಗಪತಿ ಬಾಬು, ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಜತೆಗೆ ಹೊಸಬರ ‘ಆಯ್’ ಕೂಡ ಇದೇ ವಾರ ಬಿಡುಗಡೆಯಾಗುತ್ತಿದೆ.
ಅಕ್ಷಯ್‌ಗೆ ಜಾನ್ ಅಬ್ರಹಾಂ ಸೆಡ್ಡು: ಈ ವಾರ ಬಾಲಿವುಡ್‌ನಲ್ಲಿ ಮೂರು ಪ್ರಮುಖ ಸಿನಿಮಾಗಳು ತೆರೆ ಕಾಣುತ್ತಿವೆ. ನಟ ಅಕ್ಷಯ್ ಕುಮಾರ್ ಅಭಿನಯದ ಕಾಮಿಡಿ ಸಿನಿಮಾ ‘ಖೇಲ್ ಖೇಲ್ ಮೇ’ ಹಾಗೂ ಜಾನ್ ಅಬ್ರಹಾಂ ಅಭಿನಯದ ಆ್ಯಕ್ಷನ್ ಡ್ರಾಮಾ ‘ವೇದ’, ರಾಜಕುಮಾರ್ ರಾವ್- ಶ್ರದ್ಧಾಕಪೂರ್ ನಟನೆಯ ಹಾರರ್ ಕಾಮಿಡಿ ‘ಸೀ 2’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಸತತ ಸೋಲಿನಿಂದ ಕಂಗೆಟ್ಟಿರುವ ಅಕ್ಷಯ್‌ಗೆ ‘ಖೇಲ್ ಖೇಲ್ ಮೇ’ ಬ್ರೇಕ್ ನೀಡುವ ನಿರೀಕ್ಷೆಯಿದೆ. ಈ ಮೂವರಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬುದು ಸದ್ಯದ ಕುತೂಹಲ.