ಡಾ. ಕಲಬುರ್ಗಿ ಹಂತಕರ ಜಾಡು ಪತ್ತೆ!

| ಕೀರ್ತಿನಾರಾಯಣ ಸಿ.

ಬೆಂಗಳೂರು: ಮೂರು ವರ್ಷದಿಂದ ರಹಸ್ಯವಾಗಿದ್ದ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಭೇದಿಸುವಲ್ಲಿ ಸಿಐಡಿ ತಂಡ ಬಹುತೇಕ ಯಶಸ್ವಿಯಾಗಿದೆ. ಮಹಾರಾಷ್ಟ್ರದ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಕೇಸಲ್ಲಿ ಬಂಧಿತನಾಗಿರುವ ಮೆಕಾನಿಕ್ ವಾಸುದೇವ ಸೂರ್ಯವಂಶಿಯೇ ಕಲಬುರ್ಗಿ ಹತ್ಯೆಗೂ ಕಳವು ಮಾಡಿ ಬೈಕ್ ತಂದುಕೊಟ್ಟಿದ್ದ ವಿಚಾರ ದೃಢಪಟ್ಟಿದೆ.

ಗೌರಿ ಹತ್ಯೆ ಕೇಸಲ್ಲಿ ಬಂಧಿತರಾಗಿರುವ ಆರೋಪಿಗಳಾದ ಗಣೇಶ್ ಮಿಸ್ಕಿನ್ ಅಲಿಯಾಸ್ ಮಿಥುನ್ ಮತ್ತು ಅಮಿತ್ ಬದ್ದಿ ಅಲಿಯಾಸ್ ಗೋವಿಂದ, ಎಂ.ಎಂ. ಕಲಬುರ್ಗಿ ಅವರ ಕೊಲೆ ಪ್ರಕರಣದಲ್ಲೂ ಎ1 ಮತ್ತು ಎ2 ಆರೋಪಿಗಳು ಎಂಬುದನ್ನು ವಾಸುದೇವ ಸೂರ್ಯವಂಶಿ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಪನ್ಸಾರೆ ಹತ್ಯೆ ಕೇಸಲ್ಲಿ ಮುಂಬೈ ಜೈಲಿನಲ್ಲಿದ್ದ ವಾಸುದೇವ ಸೂರ್ಯವಂಶಿಯನ್ನು ಸಿಐಡಿ ತಂಡ ಅಲ್ಲಿನ ಕೋರ್ಟ್ ಅನುಮತಿ ಮೇರೆಗೆ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿತ್ತು. 10 ದಿನಗಳ ಮ್ಯಾರಥಾನ್ ವಿಚಾರಣೆ ನಡೆಸಿ ಸೋಮವಾರ (ಫೆ.11) ಧಾರವಾಡ ಕೋರ್ಟ್​ಗೆ ಹಾಜರುಪಡಿಸಿದ ಸಿಐಡಿ ತಂಡ, ಸಂಜೆ ಹೊತ್ತಿಗೆ ವಾಪಸ್ ಮುಂಬೈಗೆ ಕರೆದೊಯ್ದಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳೀಲಿ ಕದ್ದ ಬೈಕ್​ನಲ್ಲಿ ಹೋಗಿ ಹತ್ಯೆ!: ಕಲಬುರ್ಗಿ ಹತ್ಯೆಗಾಗಿ ವಾಸುದೇವ ಸೂರ್ಯವಂಶಿ ಹುಬ್ಬಳ್ಳಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಬೈಕ್ ಕದ್ದು ಹಂತಕರಿಗೆ ಕೊಟ್ಟಿದ್ದ. ಹತ್ಯೆ ಬಳಿಕ ಅದೇ ಬೈಕ್​ನಲ್ಲಿ ಮಹಾರಾಷ್ಟ್ರಕ್ಕೆ ಹೋದ ಹಂತಕರು ಮತ್ತೊಬ್ಬ ಸದಸ್ಯನಿಗೆ ಬೈಕ್ ಕೊಟ್ಟು ಹೋಗಿದ್ದರು. ಆ ಸದಸ್ಯ ಸ್ಥಳೀಯರೊಬ್ಬರಿಗೆ ಬೈಕ್ ಮಾರಿದ್ದ. ದಾಖಲಾತಿ ಇಲ್ಲದ್ದರಿಂದ ತಪಾಸಣೆ ವೇಳೆ ಮಹಾರಾಷ್ಟ್ರ ಪೊಲೀಸರು ಬೈಕ್ ಜಪ್ತಿ ಮಾಡಿದ್ದರು. ಸಿಐಡಿ ತಂಡ ಬೆಂಗಳೂರಿಗೆ ಆ ಬೈಕ್ ತರಿಸಿ ವಾಸುದೇವ್​ಗೆ ತೋರಿಸಿದಾಗ ಆತ ಕದ್ದಿದ್ದು ಇದೇ ಬೈಕ್ ಎಂದು ಒಪ್ಪಿಕೊಂಡಿದ್ದಾನೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕೋಡ್​ವರ್ಡ್​ನಿಂದ ಬಯಲು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೊಲ್ ಕಾಳೆ ಬೈಕ್ ಬೇಕೆಂದು ಕೇಳಿದಾಗ ವಾಸುದೇವ್ ದಾವಣಗೆರೆಯಲ್ಲಿ ಪ್ಯಾಷನ್ ಪ್ರೊ ಬೈಕ್ ಕಳವು ಮಾಡಿ ತಂದುಕೊಟ್ಟಿದ್ದ. ಅಮೊಲ್ ಕಾಳೆ ಡೈರಿಯಲ್ಲಿ ಬರೆದಿದ್ದ ಮೆಕಾನಿಕ್ ಎಂಬ ಕೋಡ್​ವರ್ಡ್ ನಿಂದ ವಾಸುದೇವ್ ವಿಚಾರ ಬಯಲಾಗಿತ್ತು. ಮಹಾರಾಷ್ಟ್ರದ ಜಲಗಾಂವ್​ನಲ್ಲಿ ಮೆಕಾನಿಕ್ ಆಗಿದ್ದ ವಾಸುದೇವ್ ಗೋವಿಂದ ಪನ್ಸಾರೆ ಹತ್ಯೆಗೂ ಬೈಕ್ ಒದಗಿಸಿದ್ದ. ಮಹಾರಾಷ್ಟ್ರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈ ಸಂಗತಿ ಬಾಯ್ಬಿಟ್ಟಿದ್ದಾನೆ.

ಗಣೇಶ್ ಮಿಸ್ಕಿನ್ ಮತ್ತು ಅಮಿತ್ ಬದ್ದಿಯೇ ಕಲಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಎಂಬುದಕ್ಕೆ ಹಲವು ಸಾಕ್ಷ್ಯ ದೊರೆತಿದೆ. ಕೆಲವೊಂದು ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಸರಿಪಡಿಸುವ ಕೆಲಸ ನಡೆಯುತ್ತಿದೆ.

| ಸಿಐಡಿ ತನಿಖಾಧಿಕಾರಿ

One Reply to “ಡಾ. ಕಲಬುರ್ಗಿ ಹಂತಕರ ಜಾಡು ಪತ್ತೆ!”

  1. This investigation is definitely doctored. Definitely once the case goes to court all false evidence will fall aparet and CID will be pulled up by court for Fabricating the Evidence and finally case will be closed.

Comments are closed.