ಮಂಡ್ಯ(ಜಿಲ್ಲಾಧಿಕಾರಿ ಕಚೇರಿ, ಮಂಡ್ಯದ ವಿಶ್ವೇಶ್ವರಯ್ಯ ಪಾರ್ಕ್): ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ನುಡಿ ಹಬ್ಬ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಮೆರವಣಿಗೆಗೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ವಿಶ್ವೇಶ್ವರಯ್ಯ ಪಾರ್ಕ್ ಬಳಿ ನಿರ್ಮಾಣ ಮಾಡಲಾಗಿದ್ದ ವೇದಿಕೆಯಲ್ಲಿ ಶುಕ್ರವಾರ ಮೊದಲಿಗೆ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಸೇರಿದಂತೆ ಇತರ ಗಣ್ಯರು ಅನಾವರಣಗೊಳಿಸಿದರು. ನಂತರ ವೇದಿಕೆಯಲ್ಲಿ ಶ್ರೀಗಳು ನಗಾರಿ ಬಾರಿಸಿ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ ನೆರೆದಿದ್ದ ನೂರಾರು ಜನರು ಕನ್ನಡ ಮಾತೆಗೆ ಜಯ ಘೊಷಗಳನ್ನು ಕೂಗುವ ಮೂಲಕ ಸಂಭ್ರಮಿಸಿದರು.
ನಂತರ ಗೊ.ರು.ಚ. ಅವರನ್ನು ಕಾವೇರಿ ಮಾತೆಯ ಕಲಾಕೃತಿಯೊಂದಿಗೆ ಸಿಂಗರಿಸಲಾಗಿದ್ದ ರಥದಲ್ಲಿ ಗಣ್ಯರು ಕೂರಿಸುವುದರೊಂದಿಗೆ ರಥಯಾನ ಆರಂಭಗೊಂಡಿತು.
ಸಂಭ್ರಮದ ಸ್ವಾಗತ: 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಮ್ಮೇಳನಾಧ್ಯಕ್ಷ ಮೆರವಣಿಗೆ ಆರಂಭಗೊಳ್ಳುತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿತು. ನಾಡಿನ ಜೀವನದಿ ಕಾವೇರಿ ಮಾತೆಯ ಕಲಾಕೃತಿಯ ಮುನ್ನೆಲೆಯಲ್ಲಿ ಹೊಂದಿದ್ದ ಸಮ್ಮೇಳನಾಧ್ಯಕ್ಷರನ್ನು ಹೊತ್ತ ರಥವು ಪೂರ್ಣಕುಂಭ, ಡೊಳ್ಳು, ವೀರಗಾಸೆ, ಕಂಸಾಳೆ, ಪೂಜಾ ಕುಣಿತ, ಪೊಲೀಸ್ ಬ್ಯಾಂಡ್ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸಾಗಿತು.
ಮಂಡ್ಯ ನಗರದ ಜಿಲ್ಲಾಧಿಕಾರಿ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಮುಖ್ಯರಸ್ತೆ ಮಾರ್ಗವಾಗಿ ಸಂಜಯ ವೃತ್ತ, ಮಹಾವೀರ ವೃತ್ತ, ನಂದ ವೃತ್ತ, ಮೈಷುಗರ್ ವೃತ್ತದ ಮೂಲಕ ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 6 ಕಿ.ಮೀ. ಸಾಗಿ ಸಮ್ಮೇಳನದ ವೇದಿಕೆಗೆ ಬೆಳಗ್ಗೆ 10.15 ರ ಸುಮಾರಿಗೆ ತಲುಪಿತು.
ಮೆರುಗು ತಂದ ಕಲಾ ತಂಡಗಳು: ಸಮ್ಮೇಳನಾಧ್ಯಕ್ಷ ಮೆರವಣಿಗೆಗೆ ರಾಜ್ಯ-ಹೊರ ರಾಜ್ಯ ಕಲಾತಂಡಗಳು ಮೆರುಗು ತಂದವು. ನಮ್ಮ ನಾಡಿನ ಕಲಾ ಪ್ರಕಾರಗಳಾದ ನಂದಿಧ್ವಜ, ಚಕ್ಕಡಿಗಾಡಿ, ಕೊಂಬುಕಹಳೆ, ನಾದಸ್ವರ, ವೀರಗಾಸೆ, ತಮಟೆ, ಕಂಸಾಳೆ, ಮಹಿಳಾ ವೀರಗಾಸೆ, ಕೀಲುಕುದುರೆ, ಜಗ್ಗಲಿಗೆ ಮೇಳ, ನಗಾರಿ, ಛತ್ರಿಚಾಮರ, ಲಿಡಕರ್ ಸ್ತಬ್ಧಚಿತ್ರ, ಖಾಸಬೇಡರ ಪಡೆ, ಭಾಗವಂತಿಕೆ, ಹಗಲುವೇಷ, ಅರೆವಾದ್ಯ, ಪೆಟ್ಟಿಗೆ ಮಾರಮ್ಮ, ಕೋಲಾಟ, ಗಾರುಡಿಗೊಂಬೆ, ಕರಗ, ಚಿಲಿಪಿಲಿ ಗೊಂಬೆ, ದಾಸಪ್ಪ ಜೋಗಪ್ಪ, ಬೆಂಕಿಭರಾಟೆ, ದೊಣ್ಣೆ ವರಸೆ, ಚಿಟ್ಟಲಗಿ ಮೇಳ, ಷಹನಾಯ ವಾದನ, ಯಕ್ಷಗಾನ ಗೊಂಬೆ, ವಾನರಸೇನೆ, ಕರಡಿ ಮಜಲು, ದೇವಿ ವೇಷಧಾರಿ, ನೃತ್ಯ, ಮರಗಾಲು, ಮುಳ್ಳು ಕುಣಿತ, ಡೊಳ್ಳು ಕುಣಿತ, ಪೂಜಾಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಪಟಕುಣಿತ, ರಂಗದಕುಣಿತ, ಮಹಿಳಾ ಡೊಳ್ಳು ಕುಣಿತ, ಸೋಮನ ಕುಣಿತ, ಗೊರವರ ಕುಣಿತ, ಲಂಬಾಣಿ ನೃತ್ಯ, ಕೋಳಿ ನೃತ್ಯ, ಕೊಡವ ನೃತ್ಯ, ಜೋಗತಿ ನೃತ್ಯ, ವೀರಮಕ್ಕಳ ಕುಣಿತ, ಸತ್ತಿಗೆ ಕುಣಿತ, ದಟ್ಟಿ ಕುಣಿತ, ಹಲಗು ಕುಣಿತ, ಪಟಕುಣಿತ ತಂಡ, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪೇಗೌಡ, ವಿಶ್ವೇಶ್ವರಯ್ಯ ವೇಷಧಾರಿ, ಟಾಂಗಾ ಗಾಡಿ, ಎತ್ತಿನ ಗಾಡಿ, ಸಮ್ಮೇಳನಾಧ್ಯಕ್ಷರ ಭಾವಚಿತ್ರ ಒಳಗೊಂಡ 87 ಆಟೋ ರಿಕ್ಷಾಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಭಾರತ ಸೇವಾ ದಳ ತಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಹೊರರಾಜ್ಯದ ಕಲಾ ತಂಡಗಳು: ತಮಿಳುನಾಡಿನ ಕರಗಂ, ಒಡಿಶಾದ ಸಂಬಲ್ಪುರಿ ಮತ್ತು ಧಾಪ್ ಬುಡಕಟ್ಟು ನೃತ್ಯ, ಮಧ್ಯಪ್ರದೇಶದ ಬಧಾಯಿ ಮತ್ತು ನೋರಾ, ಪಂಜಾಬ್‌ನ ಕಲಾ ಪ್ರಕಾರಗಳು ನೋಡುಗರನ್ನು ಮಂತ್ರಮುಗ್ಧಗೊಳಿಸಿದವು.