Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಗಡಿಯಲ್ಲಿ ಶುರುವಾಗಿದೆ ಗದ್ದುಗೆ ಗುದ್ದಾಟ

Sunday, 11.02.2018, 3:04 AM       No Comments

| ಸ.ದಾ. ಜೋಶಿ

ಬೀದರ್: ಮಹಾರಾಷ್ಟ್ರ, ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮಬಲದಲ್ಲಿದ್ದು, ಒಟ್ಟು 6 ಕ್ಷೇತ್ರಗಳಲ್ಲಿ 3 ಕಾಂಗ್ರೆಸ್, 1 ಜೆಡಿಎಸ್, 1 ಕರ್ನಾಟಕ ಮಕ್ಕಳ ಪಕ್ಷ ಹಾಗೂ 1 ಬಿಜೆಪಿ ಹಿಡಿತದಲ್ಲಿವೆ. ಹಿಂದುಳಿದ ಜಿಲ್ಲೆಯಾಗಿದ್ದರೂ ಚುನಾವಣೆಯಲ್ಲಿ ಅಭಿವೃದ್ಧಿ ವಿಷಯ ಗೌಣವಾಗಿ ವ್ಯಕ್ತಿ ಹಾಗೂ ಜಾತಿಯೇ ಮುಖ್ಯವಾಗುವುದು ವಿಶೇಷ. ಕಾಂಗ್ರೆಸ್-ಬಿಜೆಪಿ ಮಿಷನ್-6 ಹಾಕಿದ್ದು ಜಬರ್​ದಸ್ತ್ ಕುಸ್ತಿಗೆ ಹಾದಿ ಮಾಡಿಕೊಟ್ಟಿದೆ. ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರು ಕ್ಷೇತ್ರ ಭಾಲ್ಕಿ ಜಿಲ್ಲಾ ರಾಜಕೀಯದ ಕೇಂದ್ರಬಿಂದುವಾಗಿದ್ದು, ರಾಜ್ಯದ ಕಿರೀಟಪ್ರಾಯವೆನಿಸಿದ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರೂ ಪಕ್ಷಗಳು ತಂತ್ರ-ಪ್ರತಿತಂತ್ರ ಹೆಣೆಯುತ್ತಿವೆ. ಬಿಜೆಪಿ ಸಂಖ್ಯೆ ವೃದ್ಧಿಸುವ ಲಕ್ಷಣಗಳಿವೆ.


ಭಾಲ್ಕಿಯಲ್ಲಿ ಈಶ್ವರ ಕ್ಷೇತ್ರ ಮಹಾತ್ಮೆ

ಪೌರಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸ್ವಕ್ಷೇತ್ರ ಭಾಲ್ಕಿಯು ಜಿಲ್ಲಾ ರಾಜಕಾರಣದ ಶಕ್ತಿ ಕೇಂದ್ರವಾಗಿದ್ದು, ಸದ್ಯಕ್ಕೆ ಇಲ್ಲಿ ಅವರ ಪ್ರಾಬಲ್ಯವಿದೆ. 2 ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದು, ಎದುರಾಳಿಗಳನ್ನು ಚಿತ್ ಮಾಡುವ ರಣತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಡಿ.ಕೆ. ಸಿದ್ರಾಮ ಪ್ರಬಲ ಆಕಾಂಕ್ಷಿಗಳು. ಇಬ್ಬರೂ ಒಂದಾಗಿ ಈಶ್ವರ ಅವರನ್ನು ಕಟ್ಟಿಹಾಕಲು ತೊಟ್ಟ ಪಣ ಆರಂಭದಲ್ಲೇ ಠುಸ್ ಎಂದಿದೆ. ಕಾಂಗ್ರೆಸ್​ಗೆ ಟಕ್ಕರ್ ನೀಡುವುದಕ್ಕಿಂತ ಜಾಸ್ತಿ ಇಬ್ಬರ ನಡುವೆ ಟಿಕೆಟ್ ಗುದ್ದಾಟವೇ ಹೆಚ್ಚಾಗಿದ್ದು, ಕೇಸರಿ ಪಡೆಯಲ್ಲಿ ಗೊಂದಲ ಸೃಷ್ಟಿಸಿದೆ. ಆಡಳಿತ ವಿರೋಧಿ ಜತೆಗೆ ಮೋದಿ ಅಲೆ ಕೆಲಸ ಮಾಡೀತೆಂಬ ಲೆಕ್ಕ ಬಿಜೆಪಿ ಪಾಳಯದಲ್ಲಿದೆ, ಜೆಡಿಎಸ್ ಲೆಕ್ಕಕ್ಕಿಲ್ಲದಂತಿದೆ.


ಔರಾದ್​ನಲ್ಲಿ ಯಾರ ‘ಪ್ರಭು’ತ್ವ?

ಔರಾದ್ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಹ್ಯಾಟ್ರಿಕ್ ಹೊಸ್ತಿಲಲ್ಲಿ ನಿಂತಂತಿದೆೆ. ಚವ್ಹಾಣ್ ಗಾಡಿ ಓವರ್​ಟೇಕ್ ಮಾಡುವ ಹೈ ಸ್ಪೀಡ್ ಅಭ್ಯರ್ಥಿ ಕಾಂಗ್ರೆಸ್ ಪಾಳಯದಲ್ಲಿ ಕಾಣುತ್ತಿಲ್ಲ. ಸಿಎಂ ಹೆಚ್ಚುವರಿ ಕಾರ್ಯದರ್ಶಿ ಡಾ. ಭೀಮಸೇನರಾವ್ ಸಿಂಧೆ, ಬಕ್ಕಪ್ಪ ಕೋಟೆ, ವಿಜಯಕುಮಾರ ಕೌಡ್ಯಾಳ್ ಟಿಕೆಟ್ ಪೈಪೋಟಿ ನಡೆಸಿದ್ದಾರೆ. ಚುನಾವಣೆ ವೇಳೆಗಷ್ಟೇ ಕಾಣುವ ಕೈ ಪಡೆಯ ಕ್ರಿಯಾಶೀಲತೆ ಬಿಜೆಪಿ ಪಾಳಯದೆದುರು ವರ್ಕೌಟ್ ಆಗುತ್ತಿಲ್ಲ. ಇಲ್ಲಿ ಜೆಡಿಎಸ್ ನಾಮ್ೇವಾಸ್ತೆ ಎಂಬಂತಿದೆ. ಸೀದಾ ಸಾದಾ ವ್ಯಕ್ತಿತ್ವದ ಚವ್ಹಾಣ್, ಎರಡು ಅವಧಿಯಿಂದ ಜನಮನ ಗೆಲ್ಲುವಂತೆ ಕೆಲಸ ಮಾಡುವ ಜತೆಗೆ ಉತ್ತಮ ನೆಟ್​ವರ್ಕ್ ಹೊಂದಿದ್ದಾರೆ.


ನಾಗಮಾರಪಳ್ಳಿಗೆ ‘ಮಾಡು ಇಲ್ಲವೆ ಮಡಿ’!

ದಿಗ್ಗಜ ನೇತಾರ ದಿ. ಗುರುಪಾದಪ್ಪ ನಾಗಮಾರಪಳ್ಳಿ ಕುಟುಂಬಕ್ಕೆ ಈ ಚುನಾವಣೆ ‘ಮಾಡು ಇಲ್ಲವೆ ಮಡಿ’ ಎಂಬಂತಾಗಿರುವುದರಿಂದ ಜಿಲ್ಲಾ ಕೇಂದ್ರ ಸ್ಥಾನ ಹೊಂದಿರುವ ಬೀದರ್ ಉತ್ತರ ಕ್ಷೇತ್ರ ಕುತೂಹಲ ಹೆಚ್ಚಿಸಿದೆ. ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ ಬಿಜೆಪಿ ಟಿಕೆಟ್ ಗಿಟ್ಟಿಸುವ ಸಾಧ್ಯತೆ ಹೆಚ್ಚು. ಆದರೆ, ಇವರ ಟಿಕೆಟ್ ತಪ್ಪಿಸಲು ಇತರೆ ಆಕಾಂಕ್ಷಿಗಳು ಯತ್ನ ನಡೆಸುತ್ತಿದ್ದಾರೆ. ಎಂಎಲ್ಸಿ ರಘುನಾಥರಾವ್ ಮಲ್ಕಾಪುರೆ, ಈಶ್ವರಸಿಂಗ್ ಠಾಕೂರ್, ಗುರುನಾಥ ಕೊಳ್ಳುರ್ ರೇಸ್​ನಲ್ಲಿದ್ದಾರೆ. ಕಾಂಗ್ರೆಸ್​ನಿಂದ ಶಾಸಕ ರಹೀಮ್ ಖಾನ್ ಮತ್ತೊಮ್ಮೆ ಅದೃಷ್ಟ ಪರೀಕ್ಷಿಸಲಿದ್ದಾರೆ. 2 ಸಲ ಉಪ ಚುನಾವಣೆಗಳಲ್ಲೇ ಗೆದ್ದ ಖಾನ್, ಬೈ ಎಲೆಕ್ಷನ್ ಕಾ ಬಾದ್​ಶಾ ಎನಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಖಾನ್​ಗೆ ಜನಬೆಂಬಲ ಸಿಗದೆಂಬ ಮಾತು ಬಿಜೆಪಿ ಪಡೆಯ ಜೋಶ್ ಹೆಚ್ಚಿಸಿದೆ. ಜಾತಿ ಆಧಾರದಲ್ಲೇ ಇಲ್ಲಿ ಮತ ಬೀಳುವ ಕಾರಣ ಎರಡೂ ಪಕ್ಷದವರು ಜಾತಿವಾರು ಜಪದಲ್ಲಿ ತೊಡಗಿ, ನಾನಾ ಕಸರತ್ತು ಆರಂಭಿಸಿದ್ದಾರೆ. ಜೆಡಿಎಸ್ ಇಲ್ಲಿ ಬರೀ ಸ್ಪರ್ಧೆಗುಂಟು.


ಖೇಣಿಗೆ ಗೆಲುವು ‘ನೈಸ್’ ಆಗಿಲ್ಲ

ಕರ್ನಾಟಕ ಮಕ್ಕಳ ಪಕ್ಷದ ಸಂಸ್ಥಾಪಕ ಅಶೋಕ ಖೇಣಿಯನ್ನು ಗೆಲ್ಲಿಸಿ ಕಳೆದ ಸಲ ಶಾಕಿಂಗ್ ಫಲಿತಾಂಶ ಕೊಟ್ಟ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಮತದಾರರು ಈಗ ಯಾರ ಪರ ಎಂಬ ಕುತೂಹಲವಿದೆ. ಖೇಣಿ ಚಾಮ್ರ್ ಮೊದಲಿನಂತಿಲ್ಲ. ಅವರು ಸ್ಥಳೀಯವಾಗಿ ಲಭ್ಯವಿರಲ್ಲ, ಕೊಟ್ಟ ಮಾತಿನಂತೆ ಕೆಲಸ ಮಾಡಿಲ್ಲ ಎಂಬ ದೂರಿದೆ. ರಾಜಕೀಯ ಅಷ್ಟೊಂದು ‘ನೈಸ್’ ಅಲ್ಲ ಎಂಬ ಅಂಶ ಖೇಣಿಗೆ ಗೊತ್ತಾದಂತಿದೆ. ಖೇಣಿಗೆ ಮತ್ತೆ ಗೆಲುವು ಬಿಗ್ ಚಾಲೆಂಜ್. ಜೆಡಿಎಸ್​ನಿಂದ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ನಿಲ್ಲುತ್ತಿದ್ದು, ಜನಾಶೀರ್ವಾದ ಪಡೆವ ತವಕದಲ್ಲಿದ್ದಾರೆ. ಬಿಜೆಪಿಯಿಂದ ಜಿಲ್ಲಾ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆಗೆ ಟಿಕೆಟ್ ಸಿಗುವ ಸಾಧ್ಯತೆಗಳಿವೆ. ನಿವೃತ್ತ ಕೆಎಎಸ್ ಅಧಿಕಾರಿ ಶಂಕರ ಪಾಟೀಲ್ ಸಹ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್​ನಿಂದ ದಿ. ಧರ್ಮಸಿಂಗ್ ಅಳಿಯ ಚಂದ್ರಾಸಿಂಗ್ ಸೇರಿ 8ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.


ಹುಮನಾ‘ಬಾದ್’ಶಾ ಗೆ ಕಾದಾಟ!

ಹೆಚ್ಚಿನ ಕಡೆ ಅಹಿಂದ ವರ್ಗ ಕಾಂಗ್ರೆಸ್ ಬೆನ್ನಿಗಿದ್ದರೆ ಹುಮನಾಬಾದ್ ಕ್ಷೇತ್ರದಲ್ಲಿ ಸ್ಥಿತಿ ತದ್ವಿರುದ್ಧವಿದ್ದಂತೆ ಕಾಣುತ್ತಿದೆ. ಪಕ್ಷದ ಶಾಸಕ ರಾಜಶೇಖರ ಪಾಟೀಲ್ (ಗೌಡರು) ಅವರಿಗೆ ಅಹಿಂದ ಭಯ ಕಾಡ್ತಿದೆ ಎನ್ನಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಗೌಡರಿಗೆ ಮತ್ತೆ ಗೆಲುವು ಸವಾಲಾಗಿದ್ದು, ಜೆಡಿಎಸ್​ನಿಂದ ದಿ. ಮೆರಾಜುದ್ದೀನ್ ಪಟೇಲ್ ತಮ್ಮ ನಸೀಮ್ ಪಟೇಲ್ ನಿಲ್ಲಲಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಸುಭಾಷ ಕಲ್ಲೂರ್, ಶಿವಾನಂದ ಮಂಠಾಳಕರ ಸೇರಿ ಹಲವರು ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ ಜಾತಿವಾರು ಮತ ವಿಭಜನೆ ಆಗಲಿರುವುದರಿಂದ ಅಹಿಂದ ವರ್ಗ ನಿರ್ಣಾಯಕ ಪಾತ್ರ ವಹಿಸಬಹುದು. ಹೀಗಾಗಿ ಕಾಂಗ್ರೆಸ್ ಈ ವರ್ಗದವರನ್ನು ಸೆಳೆಯದಿದ್ದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.


ಶರಣರ ನಾಡಿಗೆ ಸಾರಥಿ ಯಾರು?

ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ರಾಜಕೀಯ ಅಸ್ಪಷ್ಟತೆಗೆ ಸಿಲುಕಿದೆ. ಹಾಲಿ ಶಾಸಕ ಜೆಡಿಎಸ್​ನ ಮಲ್ಲಿಕಾರ್ಜುನ ಖೂಬಾ ಮತ್ತೆ ಕಣಕ್ಕಿಳಿಯಲಿದ್ದಾರೆ. ಪ್ರಬಲ ಲಿಂಗಾಯತ ಸಮಾಜದವರು ಎಂಬ ಏಕೈಕ ಕಾರಣಕ್ಕೆ ಕಳೆದ ಸಲ ಕಡಿಮೆ ಮತ ಪಡೆದರೂ ಗೆಲುವಿನ ನಗೆ ಬೀರಿದ್ದರು. ಆದರೀಗ ಸ್ಥಿತಿ ಏನಾಗುತ್ತದೋ ಎಂಬ ಭಯ ಇವರನ್ನೂ ಕಾಡುತ್ತಿದೆ. ಬಿಜೆಪಿಯಿಂದ ಮಾಜಿ ಶಾಸಕ ಎಂ.ಜಿ. ಮುಳೆ, ಸಂಜಯ್ ಪಟವಾರಿ, ಸುನೀಲ್ ಪಾಟೀಲ್, ಲಿಂಗರಾಜ ಅಟ್ಟೂರ್, ಸುಭಾಷ ಹೊಳಕುಂದೆ, ಶಕುಂತಲಾ ಹೊಳಕುಂದೆ, ಸುಧೀರ ಕಾಡಾದಿ, ರವಿ ಚಂದನಕೇರೆ ಸೇರಿ ಡಜನ್​ಗೂ ಅಧಿಕ ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್​ನಲ್ಲಿ ಬಿ. ನಾರಾಯಣರಾವ್, ಶಿವಶರಣ ಬಿರಾದಾರ, ಬಸವರಾಜ ಸ್ವಾಮಿ, ಶಿವರಾಜ ನರಶೆಟ್ಟಿ ಸೇರಿ ಹತ್ತಕ್ಕೂ ಅಧಿಕ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮಬಲ ಸಂಘರ್ಷ ನಡೆಸುತ್ತಿರುವುದರಿಂದ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗಿದೆ.

Leave a Reply

Your email address will not be published. Required fields are marked *

Back To Top