Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ, ರಾಯಚೂರು ಯಾರಿಗೆ?

Monday, 05.02.2018, 3:04 AM       No Comments

ರಾಯಚೂರು ರಾಜಕೀಯ ಕುರಿತು ಸರಳವಾಗಿ ಹೇಳಬೇಕೆಂದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಒಳಗೆ ನಾಯಕರ ನಡುವಿನ ಭಿನ್ನಮತ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಗಳಿವೆ. ಬಿಜೆಪಿಗೆ ಜೆಡಿಎಸ್​ನ ಇಬ್ಬರು ಶಾಸಕರ ಸೇರ್ಪಡೆ ಹಾಗೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ತಳಮಳ ಮೂಡಿಸಿದರೆ, ಜೆಡಿಎಸ್​ಗೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.

 | ಶಿವಮೂರ್ತಿ ಹಿರೇಮಠ

ರಾಯಚೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಸಿಲನಾಡು ರಾಯಚೂರು ಜಿಲ್ಲೆಯಲ್ಲಿ ರಾಜಕೀಯ ಬಿಸಿ ಹೆಚ್ಚಾಗಿದೆ. ಪಕ್ಷಾಂತರ ಪರ್ವವೂ ಶುರುವಾಗಿದ್ದು, ಟಿಕೆಟ್ ಆಕಾಂಕ್ಷಿಗಳಲ್ಲಿ ಬೇಗುದಿ ಶುರುವಾಗಿದೆ. ಏಳರಲ್ಲಿ ನಾಲ್ಕು ಕ್ಷೇತ್ರಗಳು ಪ.ಪಂಗಡಕ್ಕೆ, ಒಂದು ಪ.ಜಾತಿಗೆ, ಎರಡು ಸಾಮಾನ್ಯ ವರ್ಗಕ್ಕೆ ಸೇರಿವೆ. ಈ ಸಾಮಾನ್ಯ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಟಿಕೆಟ್​ಗಾಗೇ ಪಕ್ಷಾಂತರ ಪರ್ವ ನಡೆಸಿದೆ. ಜೆಡಿಎಸ್​ನ ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮತ್ತು ಲಿಂಗಸುಗೂರಿನ ಶಾಸಕ ಮಾನಪ್ಪ ವಜ್ಜಲ್ ರಾಜೀನಾಮೆ ನೀಡಿ ಬಿಜೆಪಿ ಸೇರಿರುವುದು ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗಿದೆ. 2013ರ ಚುನಾವಣೆಯಲ್ಲಿ ನಾಲ್ಕು ಕಾಂಗ್ರೆಸ್, ಎರಡು ಜೆಡಿಎಸ್ ಮತ್ತು ಒಂದರಲ್ಲಿ ಬಿಜೆಪಿ ಜಯಗಳಿಸಿತ್ತು. ದೇವದುರ್ಗ ಶಾಸಕ ಎ.ವೆಂಕಟೇಶ ನಾಯಕ ನಿಧನದಿಂದ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಕೆ.ಶಿವನಗೌಡ ನಾಯಕ ಗೆದ್ದು ಬಿಜೆಪಿಗೆ ಮತ್ತೊಂದು ಸಂಖ್ಯೆ ಹೆಚ್ಚಾಗಿ, ಕಾಂಗ್ರೆಸ್ ಸಂಖ್ಯೆ ಕುಸಿಯಿತು.


ಜಾತಿ ಸಮೀಕರಣವೇ ಪ್ರಧಾನ

ಸಿಂಧನೂರು ಕ್ಷೇತ್ರದಲ್ಲಿ ವ್ಯಕ್ತಿ-ಜಾತಿಗತ ವಿಷಯಗಳೇ ಹೆಚ್ಚು ಪ್ರಭಾವ ಬೀರುತ್ತವೆ. ಲಿಂಗಾಯತರು, ಕುರುಬರು ಹೆಚ್ಚಿರುವ ಕ್ಷೇತ್ರದಲ್ಲಿ ಹಿಂದುಳಿದ ಮತ್ತು ಮುಂದುವರಿದವರು ಎಂಬ ಅಂಶವೇ ಚುನಾವಣೆಯಲ್ಲಿ ಗೆಲುವಿಗೆ ಕಾರಣವಾಗಲಿವೆ. ಈವರೆಗೆ ಗೆದ್ದು ಬಂದು ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನದ ಯೋಗಾಯೋಗ ಒದಗಿಲ್ಲ. ಇಲ್ಲಿ ಯಾವ ಪಕ್ಷದ ಶಾಸಕ ಗೆಲ್ಲುವರೋ ಆ ಪಕ್ಷಕ್ಕೆ ಅಧಿಕಾರ ಸಿಗುವುದಿಲ್ಲ ಎಂಬ ಶಾಪವನ್ನು 2013ರಲ್ಲಿ ಹಂಪನಗೌಡ ಬಾರ್ದಲಿ ಸುಳ್ಳಾಗಿಸಿದರು. ಆಂಧ್ರ-ಬಾಂಗ್ಲಾ ವಲಸಿಗರು ಹೆಚ್ಚಿರುವ ಕ್ಷೇತ್ರದಲ್ಲಿ ಟಿಕೆಟ್​ಗಾಗಿ ಹೆಚ್ಚಿನ ಪೈಪೋಟಿ ಇದೆ.


ಟಿಕೆಟ್ ಆಕಾಂಕ್ಷಿಗಳ ತಳಮಳ

ಇದುವರೆಗಿನ ಚುನಾವಣೆಗಳಲ್ಲಿ ಹೆಚ್ಚಿನ ಬಾರಿ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿರುವ ರಾಯಚೂರು ನಗರ ಕ್ಷೇತ್ರ ಮತದಾರರು, ಸತತ ಎರಡು ಬಾರಿ ಗೆದ್ದವರಿಗೆ ಹ್ಯಾಟ್ರಿಕ್ ಸಾಧನೆಗೆ ಅವಕಾಶ ನೀಡಿಲ್ಲ. ಮೊದಲಿಂದಲೂ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತಾ ಬಂದಿರುವ ಕಾಂಗ್ರೆಸ್​ಗೆ ಈಗ ಮತ್ತೊಮ್ಮೆ ಭಿನ್ನಮತದ ಆತಂಕ ಎದುರಾಗಿದೆ. ಕ್ಷೇತ್ರದ ಶಾಸಕ ಡಾ.ಶಿವರಾಜ ಪಾಟೀಲ್ ಬಿಜೆಪಿ ಸೇರಿದ್ದರಿಂದ ಈಗಾಗಲೇ ಇರುವ 12ಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ತಳಮಳ ಹೆಚ್ಚಾಗಿದೆ. ಇನ್ನು ನನಗೇ ಜೆಡಿಎಸ್ ಟಿಕೆಟ್ ಎಂದು ಹೇಳಿಕೊಳ್ಳುತ್ತಿರುವವರಿಗೆ ಬಿಜೆಪಿಯಿಂದ ವಲಸೆ ಬರುವವರ ಆತಂಕ ಎದುರಾಗಿದೆ. ಕಳೆದ ಬಾರಿ ಕಾಂಗ್ರೆಸ್​ನೊಳಗಿನ ಭಿನ್ನಮತ, ಪ್ರಬಲವಿಲ್ಲದ ಬಿಜೆಪಿ ಅಭ್ಯರ್ಥಿಯಿಂದ ಶಾಸಕರಾಗಿದ್ದ ಶಿವರಾಜ ಪಾಟೀಲ್​ಗೆ ಈ ಬಾರಿ ಅಗ್ನಿಪರೀಕ್ಷೆ ಖಚಿತ.


ಮಾನ್ವಿ ಕಾಂಗ್ರೆಸ್ ಭದ್ರಕೋಟೆ

ಕಾಂಗ್ರೆಸ್ ಭದ್ರಕೋಟೆಯಾದ ಮಾನ್ವಿ ಕ್ಷೇತ್ರದಲ್ಲಿ ತನ್ನ ರಾಜಕೀಯ ಗುರು ಎನ್.ಎಸ್.ಬೋಸರಾಜು ಪ್ರಭಾವಳಿಯಿಂದ ಎರಡು ಬಾರಿ ಹಂಪಯ್ಯ ನಾಯಕ ಶಾಸಕರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಆಪ್ತರೊಬ್ಬರು ತಮ್ಮ ಸೊಸೆ ಕಣಕ್ಕಿಳಿಸುವ ಸಿದ್ಧತೆ ನಡೆದಿರುವುದು ಕೇಳಿಬರುತ್ತಿದೆ. ಜೆಡಿಎಸ್​ನಲ್ಲಿ ಟಿಕೆಟ್​ಗಾಗಿ ಪೈಪೋಟಿ ಕಂಡಿಬಂದಿಲ್ಲ. ಬಿಜೆಪಿಯಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ, ಬೋಸರಾಜು ಪ್ರಭಾವ ಬಳಸಿಕೊಂಡು ಹಂಪಯ್ಯ ನಾಯಕ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ.


ಮಸ್ಕಿಯಲ್ಲಿ ಪಕ್ಷ ಬದಲಾದರೂ ವ್ಯಕ್ತಿ ಬದಲಿಲ್ಲ

ಕ್ಷೇತ್ರ ಪುನರ್​ವಿಂಗಡಣೆ ವೇಳೆ ರಚನೆಗೊಂಡ ಮಸ್ಕಿಯಲ್ಲಿ 10 ವರ್ಷಗಳಿಂದ ಪಕ್ಷ ಬದಲಾದರೂ ವ್ಯಕ್ತಿ ಬದಲಾಯಿಸದೆ ಮತದಾರರು ಪ್ರತಾಪಗೌಡ ಪಾಟೀಲರನ್ನು ಶಾಸಕನನ್ನಾಗಿ ಮಾಡಿದ್ದಾರೆ. ಮಸ್ಕಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಜನರ ಕನಸು ಮತ್ತೊಂದು ಚುನಾವಣೆ ಹೊಸ್ತಿಲಲ್ಲಿ ಕನಸಾಗಿಯೇ ಉಳಿದಿದೆ. ಚುನಾವಣೆಯಲ್ಲಿ ಅಳಿಯ (ಕಾಂಗ್ರೆಸ್- ಪ್ರತಾಪಗೌಡ ಪಾಟೀಲ್), ಮಾವ (ಬಿಜೆಪಿ- ಮಹಾದೇವಪ್ಪ ಗೌಡ) ನಡುವೆ ಕದನ ಸಾಧ್ಯತೆಯಿದೆ. ಬಿಜೆಪಿಯಲ್ಲೂ ಟಿಕೆಟ್​ಗಾಗಿ ಪೈಪೋಟಿಯಿದ್ದು, ಜೆಡಿಎಸ್​ನಿಂದ ರಾಜಾ ಸೋಮನಾಥ ನಾಯಕ ಸ್ಪರ್ಧೆಗೆ ಮುಂದಾಗಿರುವುದರಿಂದ ತುರುಸಿನ ಪೈಪೋಟಿ ದಟ್ಟವಾಗಿವೆ.


ಹ್ಯಾಟ್ರಿಕ್ ಕನಸಲ್ಲಿ ವಜ್ಜಲ್

ಲಿಂಗಸುಗೂರು ಕ್ಷೇತ್ರದಲ್ಲಿ ಒಂದೇ ಪಕ್ಷಕ್ಕೆ ಅಂಟಿಕೊಳ್ಳದೆ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ನೀಡುತ್ತಾ ಬಂದಿದ್ದಾರೆ ಮತದಾರರು. 1967ರಿಂದ 1983ರವರೆಗೆ ಸತತ ಕಾಂಗ್ರೆಸ್​ಗೆ ಮಣೆ ಹಾಕಿರುವ ಮತದಾರರು, ನಂತರ ಬೇರೆಬೇರೆ ಪಕ್ಷಗಳಿಗೆ ಮಣೆ ಹಾಕಿದ್ದಾರೆ. ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ, ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕ, ಅಮರೇಗೌಡ ಬಯ್ಯಾಪುರಗೆ ರಾಜಕೀಯವಾಗಿ ನೆಲೆ ನೀಡುವ ಜತೆಗೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ರಾಜಕೀಯ ನೆಲೆ ಕಂಡುಕೊಳ್ಳಲು ಈ ಕ್ಷೇತ್ರ ಕಾರಣವಾಗಿದೆ. ಪ್ರಸ್ತುತ ಶಾಸಕ ಮಾನಪ್ಪ ವಜ್ಜಲ್ ರಾಜೀನಾಮೆ ನೀಡಿ, ಬಿಜೆಪಿಯತ್ತ ಮುಖ ಮಾಡಿದ್ದರಿಂದ ಪಕ್ಷಾಂತರ ಡ್ರಾಮಾ ನಡೆದಿದೆ.


ಅನ್ಯರಿಗೆ ಮಣೆ ಹಾಕಿದ ಮತದಾರ

ಮೊದಲಿಂದಲೂ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಹೊರಗಿನವರಿಗೆ ಮತದಾರರು ಮಣೆ ಹಾಕುತ್ತಾ ಬಂದಿದ್ದು, ಗೆದ್ದು ಬಂದವರು ಮಂತ್ರಿ ಪದವಿ ಅನುಭವಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆನ್ನುವ ಕೂಗು ಬಲವಾಗಿ ಕೇಳಿಬರುತ್ತಿರುವ ನಡುವೆ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಬಿಜೆಪಿ ಮುಖಂಡರು ತಿರುಗಿ ಬಿದ್ದಿದ್ದಾರೆ. ಕಾಂಗ್ರೆಸ್-ಜೆಡಿಎಸ್​ನಲ್ಲೂ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾಂಗ್ರೆಸ್​ನಿಂದ ಸಂಸದ ಬಿ.ವಿ.ನಾಯಕ ಸ್ಪರ್ಧಿಸಲಿದ್ದಾರೆ ಎಂಬ ಮಾತಿದೆ. ನಕ್ಸಲ್​ಪೀಡಿತ ಗ್ರಾಮಗಳಿರುವ ಕ್ಷೇತ್ರದಲ್ಲಿ ಪಕ್ಷ, ಅಭಿವೃದ್ಧಿ ವಿಷಯಗಳಿಗಿಂತ ವ್ಯಕ್ತಿ ನೋಡಿ ಮಣೆ ಹಾಕುವುದು ಕಂಡುಬಂದಿದೆ.


ದಾಯಾದಿ ನಾಯಕರ ನಡುವೆ ಕದನ

ದೇವದುರ್ಗ ಕ್ಷೇತ್ರದಲ್ಲಿ ಬಹುತೇಕ ಬಾರಿ ಪರಕೀಯರಿಗೆ ಮತದಾರರು ಮಣೆ ಹಾಕಿದ್ದಾರೆ. ದುರಂತವೆಂದರೆ ಇಲ್ಲಿಂದ ಗೆದ್ದ ಬಹುತೇಕರು ಸಚಿವರಾದರೂ ಕ್ಷೇತ್ರದ ಅಭಿವೃದ್ಧಿ, ಶೈಕ್ಷಣಿಕ, ಆರ್ಥಿಕತೆಯಲ್ಲಿ ಮಾತ್ರ ಕ್ಷೇತ್ರ ಕಟ್ಟಕಡೆ ಸ್ಥಾನದಲ್ಲಿದೆ. 2008ರಲ್ಲಿ ಪ.ಪಂಗಡಕ್ಕೆ ಮೀಸಲಾದ ನಂತರ ಕ್ಷೇತ್ರದಲ್ಲಿ ಸಂಬಂಧಿಕರ ನಡುವೆಯೆ ಕದನ ನಡೆಯುತ್ತಿದೆ. ಅನಕ್ಷರಸ್ಥ ಯಲ್ಲಪ್ಪ ಅಕ್ಕರಕಿಯನ್ನು ಶಾಸಕರನ್ನಾಗಿ ಮಾಡಿದ ಮತದಾರರು, ಒಂದು ಬಾರಿ ತಾತನ ವಿರುದ್ಧ ಸ್ಪರ್ಧಿಸಿದ್ದ ಮೊಮ್ಮಗನಿಗೆ ಜೈ ಅಂದಿದ್ದಾರೆ. ಮತ್ತೊಮ್ಮೆ ತಾತನನ್ನು ಗೆಲ್ಲಿಸಿ ಮೊಮ್ಮಗನನ್ನು ಮನೆಗೆ ಕಳುಹಿಸಿದ್ದಾರೆ. ಈಗಿನ ಬಿಜೆಪಿ ಶಾಸಕ ಕೆ.ಶಿವನಗೌಡ ನಾಯಕಗೆ ಅವರ ಸಹೋದರಿಯ ಪತಿ-ಜಿಪಂ ಸದಸ್ಯ ವೆಂಕಟೇಶ ಪೂಜಾರಿ ಜೆಡಿಎಸ್​ನಿಂದ ಸ್ಪರ್ಧಿಸಲು ಸಿದ್ಧವಾಗಿದ್ದಾರೆ. ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಪೈಪೋಟಿ ಇಲ್ಲದಿದ್ದರೂ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆದಿದ್ದು, ಸಂಸದ ಬಿ.ವಿ.ನಾಯಕ ಅಭ್ಯರ್ಥಿಯಾಗಬೇಕೆಂಬ ಒತ್ತಾಯಗಳಿವೆ.

 

Leave a Reply

Your email address will not be published. Required fields are marked *

Back To Top