ಚುಕುಬುಕು ರೈಲು… ಇನ್ನು ಇದೇ ಸ್ಕೂಲು..

ಭಟ್ಕಳ: ಮಕ್ಕಳ ಸಂಖ್ಯೆ ಕ್ಷೀಣಿಸುತ್ತ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವ ಕೊರಗು ಒಂದಡೆಯಾದರೆ, ಇಲ್ಲೊಂದು ಕನ್ನಡ ಶಾಲೆಯು ವಿದ್ಯಾರ್ಥಿಗಳನ್ನು ಸೆಳೆಯಲು ವಿನೂತನ ಪ್ರಯತ್ನ ಮಾಡಿದೆ.

ತಾಲೂಕಿನ ಬೆಂಗ್ರೆ ಪಂಚಾಯಿತಿ ವ್ಯಾಪ್ತಿಯ ಮೂಡಶಿರಾಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ತನ್ನ ಕಟ್ಟಡವನ್ನು ರೈಲಿನ ಮಾದರಿಯಲ್ಲಿ ಬದಲಿಸಿಕೊಳ್ಳುವ ಮೂಲಕ ಮಕ್ಕಳನ್ನು ತನ್ನತ್ತ ಆಕರ್ಷಿಸುತ್ತಿದೆ.

ದೂರದಿಂದ ನೋಡಿದರೆ ಇಲ್ಲೊಂದು ರೈಲು ನಿಂತಿರುವಂತೆ ಭಾಸವಾಗುತ್ತಿರುವ ಮಟ್ಟಕ್ಕೆ ವಿನ್ಯಾಸ ಮಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 2006ರಲ್ಲಿ ಆರಂಭಗೊಂಡ ಶಾಲೆಯು ಮೊದಲು ಚಿಕ್ಕ ಕೊಠಡಿಯಲ್ಲಿಯೇ ನಡೆಯುತ್ತಿತ್ತು. ಬಳಿಕ ಅಲ್ಲಿನ ಮುನ್ನಾ ನಾಯ್ಕ ಕುಟುಂಬದವರು ಶಾಲೆಗೆ ಜಾಗ ದಾನ ಮಾಡಿದ್ದರಿಂದ ಉತ್ತಮ ಕಟ್ಟಡ ನಿರ್ವಣವಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಉತ್ತಮ ವಾತಾವರಣವಿರಬೇಕೆಂಬ ದೃಷ್ಟಿಯಿಂದ ಬೆಂಗ್ರೆ ಪಂಚಾಯಿತಿ ಸದಸ್ಯರು, ಸ್ಥಳೀಯರು ಗಮನಹರಿಸಿ ವಿಶೇಷ ವಿನ್ಯಾಸದೊಂದಿಗೆ ರೈಲಿನ ಮಾದರಿಯಲ್ಲಿ ಶಾಲೆಯ ಕಟ್ಟಡ ನಿರ್ವಿುಸಿದ್ದಾರೆ.

ಇಲ್ಲಿನ ಶಾಲೆಯನ್ನು ಶೇ. 80 ರಷ್ಟು ರೈಲಿನ ಮಾದರಿಯಲ್ಲಿ ತಯಾರಿಸಲಾಗಿದ್ದು, ಇನ್ನೊಂದು ವಾರದೊಳಗೆ ಪ್ಲಾಟ್​ಫಾಮ್ರ್ ನಿರ್ವಿುಸಿ ಉದ್ಘಾಟಿಸಲಾಗುವುದು. ಕಲಾವಿದ ದಿನೇಶ ದೇವಾಡಿಗ ಕೈಚಳಕ ಇದರಲ್ಲಿ ಅಡಗಿದೆ. ಶಿಕ್ಷಕರ ಆಸಕ್ತಿ, ಗ್ರಾಮಸ್ಥರ ಬೆಂಬಲ, ಎಸ್​ಡಿಎಂಸಿ ಸಹಕಾರದಿಂದಾಗಿ ಈ ಕಾರ್ಯ ಕೈಗೂಡಿದೆ. ಕೊಠಡಿಯ ಬಾಗಿಲು, ಕಿಟಕಿಗಳು ಸಂಪೂರ್ಣವಾಗಿ ರೈಲಿನ ಬೋಗಿಯಂತೆ ಕಾಣುತ್ತಿವೆ. ಶಾಲೆಯಲ್ಲಿ ಸದ್ಯ ಒಟ್ಟು 36 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸ್ಮಾರ್ಟ್ ಕ್ಲಾಸ್​ನ ಕಲಿಕೆಯೂ ಇಲ್ಲಿರುವುದು ಇನ್ನೊಂದು ಹೆಗ್ಗಳಿಕೆ.

ಶಾಲೆಯಲ್ಲಿ 2 ಕೊಠಡಿಗಳು, ಅಡುಗೆ ಹಾಗೂ ದಾಸ್ತಾನು ಕೋಣೆ ಇದೆ. ರೈಲಿನ ಮಾದರಿಯಲ್ಲಿ ವಿನ್ಯಾಸ ಮಾಡಲು ಸುಮಾರು 80 ಸಾವಿರ ರೂ. ವ್ಯಯಿಸಲಾಗಿದೆ. ನ.1ರಂದು ರೈಲಿನ ವಿನ್ಯಾಸಕ್ಕೆ ಚಾಲನೆ ನೀಡಲಾಗಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಎಲ್ಲ್ಲ ಕಾರ್ಯ ಮುಗಿಯಲಿದೆ. ಕಟ್ಟಡದ ಒಳಭಾಗದಲ್ಲಿ ನಲಿ ಕಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೌಂಡ್ ಟೆಬಲ್ ಮತ್ತು ಕುರ್ಚಿಗಳನ್ನು ಇಡಲಾಗಿದೆ.

1ರಿಂದ 5ನೇ ತರಗತಿ ಇದ್ದು, ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಬೆಂಚ್ ಮತ್ತು ಡೆಸ್ಕ್ ವ್ಯವಸ್ಥೆ ಇಲ್ಲ. ಕಳೆದ ವರ್ಷ 25 ಮಕ್ಕಳಿದ್ದು, ಈ ಬಾರಿ ಅದರ ಸಂಖ್ಯೆ 36ಕ್ಕೆ ಏರಿದೆ. ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದನ್ನು ಬದಲಿಸಬೇಕು ಎನ್ನುವ ಹಂಬಲವಿತ್ತು. ಹೊಸ ವಿನ್ಯಾಸದಲ್ಲಿ ಶಾಲೆ ನಿರ್ವಿುಸಬೇಕು, ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು. ಅದರೊಂದಿಗೆ ಹೊಸತನವೂ ಇರಬೇಕು ಎಂದು ಯೋಚಿಸಿ ಈ ರೀತಿಯ ರೂಪ ನೀಡಿದ್ದೇವೆ. ಶಾಲೆ ಮೇಲೆ ಗ್ರಾಪಂ ವಿಶೇಷ ಕಾಳಜಿ ಇಟ್ಟಿದ್ದರಿಂದ ಇದು ಸಾಧ್ಯವಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಶಾಲೆಯ ಏಳಿಗೆಗೆ ನಿವೇಶನಕ್ಕೆ ಜಾಗ ನೀಡಿದ ದಾನಿಗಳ ಸಹಕಾರ ಹಾಗೂ ಬಿಇಒ ಬೆಂಬಲದಿಂದ ತಾಲೂಕಿನಲ್ಲಿಯೇ ವಿಶೇಷ ಮಾದರಿ ಶಾಲೆಯಾಗಿ ಬದಲಾಗಲು ಸಾಧ್ಯವಾಗಿದೆ.  | ಮನೋಜ ಶೆಟ್ಟಿ, ಪ್ರಭಾರ ಮುಖ್ಯಾಧ್ಯಾಪಕ

 ಕಾನ್ವೆಂಟ್ ಶಾಲೆಗಳ ವ್ಯಾಮೋಹವು ಕನ್ನಡ ಶಾಲೆಗಳ ಅವನತಿಗೆ ಕಾರಣವಾಗಿದೆ. ರೈಲ್ವೆ ಹಳಿಯ ಪಕ್ಕದಲ್ಲೇ ಈ ಶಾಲೆ ಇರುವುದು ರೈಲಿನ ಮಾದರಿ ನಿರ್ವಿುಸಲು ಸ್ಪೂರ್ತಿಯಾಗಿದೆ. ಬೆಂಗ್ರೆ ಪಂಚಾಯಿತಿಯ ಎಲ್ಲ ಸದಸ್ಯರ ಸಹಕಾರ ದೊರಕಿದ್ದರಿಂದ ಇಲ್ಲಿನ ಶಾಲೆಗೆ ಶೌಚಗೃಹ, ಗಾರ್ಡನ್, ಬಾವಿ ಸೇರಿ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿದೆ. ಕನ್ನಡ ಉಳಿಸಿ ಕನ್ನಡ ಬೆಳೆಸಿ ಅಭಿಯಾನಕ್ಕೆ ನಮ್ಮ ಶಾಲೆಯೇ ಸ್ಪೂರ್ತಿಯಾಗಲಿ ಎಂಬ ಆಶಯ ನಮ್ಮದು.  ___ವೆಂಕ್ಟಯ್ಯ ಭೈರುಮನೆ, ಬೆಂಗ್ರೆ ಗ್ರಾಪಂ ಅಧ್ಯಕ್ಷ