ಆಳ್ವಾಸ್ ಕ್ರಿಸ್‌ಮಸ್ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ದ್ವೇಷ ಮತ್ತು ಧರ್ಮ ಹೀಗೆ ವಿಭಜಿಸುವ ಗೋಡೆಗಳನ್ನು ಕಿತ್ತೆಸೆದು ಮಾನವೀಯತೆ ಬೆಸೆಯುವ ಬಂಧುತ್ವ ಬೆಳೆಸುವುದು ಇಂದಿನ ಅಗತ್ಯ. ಬಂಧುತ್ವ ಎನ್ನುವುದು ಜಾತಿ, ಮತ, ಧರ್ಮದ ಎಲ್ಲೆ ಮೀರಿದ ಸಂಬಂಧ ಎಂದು ಮಂಗಳೂರು ಕ್ಯಾಥೊಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ದಾನ್ಹ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಗುರುವಾರ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ‘ಆಳ್ವಾಸ್ ಕ್ರಿಸ್‌ಮಸ್ ಸಂಭ್ರಮ 2018’ರಲ್ಲಿ ಅವರು, ನಾವೆಲ್ಲರೂ ಆತ್ಮಸಾಕ್ಷಿಗೆ ಸ್ಪಂದಿಸಿ ಒಳಿತನ್ನುಂಟು ಮಾಡುವ ಮತ್ತು ಆ ಮೂಲಕ ಯಾರೂ ಕಸಿದುಕೊಳ್ಳಲಾಗದ ನಿಜವಾದ ಶಾಂತಿಯನ್ನು ಬದುಕಿನಲ್ಲಿ ಅನುಭವಿಸುವವರಾಗಬೇಕು ಎಂದು ಆಶೀರ್ವಚನ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಡಾನ್ ಬೋಸ್ಕೊ ಸಿಬಿಎಸ್‌ಸಿ ಸಂಸ್ಥೆ ಪ್ರಾಂಶುಪಾಲ ಮಹೇಶ್ ಡಿಸೋಜ ಕ್ರಿಸ್‌ಮಸ್ ಸಂದೇಶ ನೀಡಿದರು. ಸ್ನೇಹಾಲಯ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ಜೋಸೆಫ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ದಾಖಲಾತಿ ವಿಭಾಗ ಅಧಿಕಾರಿ ಎಲ್.ಜೆ. ಫರ್ನಾಂಡಿಸ್ ಸ್ವಾಗತಿಸಿದರು. ಉಪನ್ಯಾಸಕ ರಾಜೇಶ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸ್ಟ್ಯಾನಿ ಸನ್ಮಾನ ಪತ್ರ ವಾಚಿಸಿದರು. ಪ್ರಾಂಶುಪಾಲ ಡಾ.ಕುರಿಯನ್ ವಂದಿಸಿದರು.

ಆಳ್ವಾಸ್ ಕ್ರಿಸ್‌ಮಸ್ ಸಂಭ್ರಮ ವಿಶೇಷ: ಕ್ರಿಸ್‌ಮಸ್ ಸಂಭ್ರಮ ಪ್ರಯುಕ್ತ ವಿದ್ಯಾಗಿರಿಯಲ್ಲಿರುವ ನುಡಿಸಿರಿ ವೇದಿಕೆಯನ್ನು (ರತ್ನಾಕರವರ್ಣಿ) ನಕ್ಷತ್ರ, ವಿಭಿನ್ನ ರೀತಿಯ ವಿದ್ಯುತ್ ದೀಪಾಲಂಕಾರ, ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕ್ರಿಸ್‌ಮಸ್ ವಿಶೇಷ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತರ ಕೊಡುಗೆ ಅನನ್ಯ. ಮದರ್ ತೆರೆಸಾರಂತವರ ಕೊಡುಗೆ ನಮ್ಮೆಲ್ಲರಿಗೂ ಸ್ಪೂರ್ತಿಯಾದರೆ, ಶಾಂತಿ, ಪ್ರೀತಿ, ಸಹಬಾಳ್ವೆಯನ್ನು ಮಾತು ಕೃತಿಯಲ್ಲಿ ಪಾಲಿಸುತ್ತಿರುವ ಕ್ರೈಸ್ತರ ಜೀವನ ಸಂದೇಶ ಅರ್ಥಪೂರ್ಣವಾದದ್ದು.
– ಡಾ.ಮೋಹನ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ