ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಮಂಗಳವಾರ ಕ್ರೈಸ್ತರು ಸಂಕ್ರಾಂತಿ (ಪೊಂಗಲ್) ಹಬ್ಬವನ್ನು ಆಚರಿಸಿದರು.
ಹಬ್ಬದ ಅಂಗವಾಗಿ ಗ್ರಾಮದ ಚರ್ಚ್‌ನಲ್ಲಿ ಫಾದರ್ ಪ್ರಕಾಶ್ ಅವರಿಂದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಹಬ್ಬದ ಶುಭಾಶಯ ಕೋರಲಾಯಿತು. ಬಳಿಕ ಗ್ರಾಮದ ಬಸ್ ನಿಲ್ದಾಣದ ಬಳಿ ಮುಖಂಡರು ಹಾಗೂ ಯುವಕರು ಸಿಹಿ ಪೊಂಗಲ್ ತಯಾರಿಸಿ ಸಾರ್ವಜನಿಕರಿಗೆ ವಿತರಿಸಿ ಹಬ್ಬದ ಶುಭಾಶಯ ಕೋರಿದರಲ್ಲದೇ ಕಬ್ಬು ಹಾಗೂ ಎಳ್ಳುಬೆಲ್ಲ ವಿತರಿಸಿ ಸಂತಸ ಹಂಚಿಕೊಂಡರು.
ಈ ವೇಳೆ ಗ್ರಾಮದ ಚರ್ಚ್ ಧರ್ಮಗುರು ಫಾದರ್ ಪ್ರಕಾಶ್ ಮಾತನಾಡಿ, ಪ್ರತಿ ವರ್ಷವೂ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಅನ್ನ ಹಾಗೂ ಧಾನ್ಯಗಳನ್ನು ನೀಡಿದ ದೇವರಿಗೆ ಕೃತಜ್ಞತೆ ಸಲ್ಲಿಸಲು ಸಲುವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ನಾಡಿನ ಜನತೆಗೆ ಶುಭವಾಗಲಿ. ಜನರ ಜೀವನದಲ್ಲಿ ನೆಮ್ಮದಿಯನ್ನು ತರಲಿ ಎಂದು ಆಶಿಸಿದರು. ಈ ವೇಳೆ ಗ್ರಾಮಸ್ಥರು ಹಾಜರಿದ್ದರು.