ಸಾರ್ವಜನಿಕ ಬಾಂಧವ್ಯ ಬೆಸೆಯುವ ಹಬ್ಬ

ಬಾಳೆಹೊನ್ನೂರು: ಕ್ರಿಸ್​ವುಸ್ ಭಕ್ತಿ ಭಾವಗಳ, ಸೌಹಾರ್ದತೆ, ಸಡಗರ ಮತ್ತು ಸಾರ್ವಜನಿಕ ಬಾಂಧವ್ಯ ಬೆಸೆಯುವ ಹಬ್ಬವಾಗಿ ವಿಶ್ವದಾದ್ಯಂತ ಆಚರಿಸಲ್ಪಡುತ್ತಿದೆ ಎಂದು ವಿಜಯಮಾತೆ ಚರ್ಚ್​ನ ಧರ್ಮಗುರು ಲ್ಯಾನ್ಸಿಪಿಂಟೋ ಹೇಳಿದರು.

ಪಟ್ಟಣದ ವಿಜಯಮಾತೆ ಚರ್ಚ್​ನಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಕ್ರಿಸ್​ವುಸ್ ಎಂದಾಕ್ಷಣ ನರನಾಡಿಗಳಲ್ಲಿ ನವ ಚೈತನ್ಯ ಉದಯವಾಗುತ್ತದೆ. ಕ್ರೖೆಸ್ತ ಸಮುದಾಯದ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಅಪಾರ ಮಹತ್ವವಿದೆ. ಏಸುಕ್ರಿಸ್ತನ ಜನನ ತೀರಾ ಸಾಮಾನ್ಯ ಮಗುವಿನ ಜನನದಂತೆ ಕಂಡರೂ ಲೋಕಕ್ಕೆ ತಿಳಿದಿದ್ದು ಅಸಮಾನ್ಯ ದೇವರು ಎಂದರು.

ಕ್ರಿಸ್​ವುಸ್ ಹಿಂದಿನ ದಿನವನ್ನು ಕ್ರಿಸ್ಮಸ್ ಈವ್, ನಂತರದ 12ನೇ ದಿನವನ್ನು ಎಪಿಫನಿ ಎಂದೂ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬ ವಿಶೇಷವಾಗಿ ಉಡುಗೊರೆಗಳಿಗೆ ಪ್ರಸಿದ್ಧವಾಗಿದ್ದು, ಉಡುಗೊರೆ ಹೊತ್ತು ಬರುವ ಸಾಂತಾಕ್ಲಾಸ್ ಪುಟಾಣಿಗಳನ್ನು ರಂಜಿಸುತ್ತಾನೆ. ಸಂತ ನಿಕೋಲಾಸ್ ಎಂಬ ಕ್ರೖೆಸ್ತ ಪಾದ್ರಿಯ ಪ್ರತೀಕವೇ ಈ ಸಾಂತಾ ಕ್ಲಾಸ್ ಎಂಬ ನಂಬಿಕೆಯಿದೆ ಎಂದರು.

ಸಂಭ್ರಮದ ಕ್ರಿಸ್​ವುಸ್ ಆಚರಣೆ : ಹೋಬಳಿಯಾದ್ಯಂತ ಮಂಗಳವಾರ ಕ್ರೖೆಸ್ತರು ಸಂಭ್ರಮದಿಂದ ಕ್ರಿಸ್​ವುಸ್ ಆಚರಿಸಿದರು. ಮನೆ ಮುಂದೆ ಏಸುಕ್ರಿಸ್ತ ಜನನ ವೃತ್ತಾಂತ ತಿಳಿಸುವ ಆಕರ್ಷಕ ಗೋದಲಿಗಳನ್ನು ನಿರ್ವಿುಸಿ ನಕ್ಷತ್ರ, ಕ್ರಿಸ್​ವುಸ್ ಟ್ರೀ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ಬೆಳಗ್ಗೆ ಪಟ್ಟಣದ ವಿಜಯಮಾತೆ ಚರ್ಚ್​ನಲ್ಲಿ ಸಾವಿರಾರು ಕ್ರಿಸ್ತರು ಧರ್ಮಗುರು ಲ್ಯಾನ್ಸಿ ಪಿಂಟೋ ನೇತೃತ್ವದಲ್ಲಿ ಮೇಣದಬತ್ತಿಗಳನ್ನು ಹಚ್ಚಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಕೇಕ್ ಹಾಗೂ ಸಿಹಿ, ತಿಂಡಿಗಳನ್ನು ಹಂಚಿದರು.

ಸೋಮವಾರ ರಾತ್ರಿಯೂ ಚರ್ಚ್​ನಲ್ಲಿ ಪ್ರಾರ್ಥನೆ, ಕ್ರಿಸ್ತ ಜನನದ ಕುರಿತು ಗೀತೆಗಳನ್ನು ಹಾಡಿದರು. ವಿಜಯಮಾತೆ ಚರ್ಚ್ ಅನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಾಗುಂಡಿ, ಕಡಬಗೆರೆ, ಗೋರಿಗಂಡಿ ಮುಂತಾದೆಡೆಯು ಸಹ ಚರ್ಚ್​ಗಳಲ್ಲಿ ಕ್ರಿಸ್​ವುಸ್ ಸಂಭ್ರಮ ಮನೆ ಮಾಡಿತ್ತು.