ಅಗಸ್ತಾ ವೆಸ್ಟ್​ಲ್ಯಾಂಡ್ ಹಗರಣ: ಸೋನಿಯಾ ಹೆಸರು ಹೇಳಿದ ಮಧ್ಯವರ್ತಿ ಮಿಶೆಲ್; ‘R’ ಎಂದಿದ್ದು ಯಾರಿಗೆ?

ನವದೆಹಲಿ: ಅಗಸ್ತಾ ವೆಸ್ಟ್​ಲ್ಯಾಂಡ್​ನ ಮಧ್ಯವರ್ತಿ ಕ್ರಿಶ್ಚಿಯನ್​ ಮಿಶೆಲ್​ ವಿಚಾರಣೆ ವೇಳೆ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಅವರ ಹೆಸರು ಹೇಳಿದ್ದಾನೆ ಎಂದು ಜಾರಿ ನಿರ್ದೇಶನಾಲಯವು ಇಂದು ಕೋರ್ಟ್​ಗೆ ತಿಳಿಸಿದೆ.
ಇದೇ ವೇಳೆ ” the son of the Italian lady (ಇಟಲಿ ಮಹಿಳೆಯ ಪುತ್ರ)” ಮತ್ತು ಅವರು ಹೇಗೆ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂಬ ಬಗ್ಗೆ ಮಿಶೆಲ್​ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದ್ದು, ಈ ಪ್ರಸ್ತಾಪ ರಾಹುಲ್​ ಗಾಂಧಿ ಅವರಿಗೇ ಸಂಬಂಧಿಸಿದ್ದು ಎಂದೂ ಜಾರಿ ನಿರ್ದೇಶನಾಲಯವು ಕೋರ್ಟ್​ ಎದುರು ಅನುಮಾನ ವ್ಯಕ್ತಪಡಿಸಿದೆ.

“ಮಿಶೆಲ್​ ಹೇಳುತ್ತಿರುವ R ಎಂದರೆ ಯಾರು ಎಂಬುದನ್ನು ನಾವು ಇನ್ನಷ್ಟೇ ಅರ್ಥ ಮಾಡಿಕೊಳ್ಳಬೇಕಾಗಿದೆ. ಬೇರೆ ಬೇರೆ ವ್ಯಕ್ತಿಗಳ ಜತೆಗೆ ಮಿಶೆಲ್​ನನ್ನು ವಿಚಾರಣೆ ಮಾಡುವ ಮೂಲಕ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ,” ಎಂದು ಜಾರಿ ನಿರ್ದೇಶನಾಲಯ ದೆಹಲಿಯ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.
ಅಗಸ್ತಾ ವೆಸ್ಟ್​ಲ್ಯಾಂಡ್​ ವಿವಿಐಪಿ ಹೆಲಿಕಾಪ್ಟರ್​ ಖರೀದಿ ಒಪ್ಪಂದದಲ್ಲಿ ಮಧ್ಯವರ್ತಿಯಾಗಿದ್ದ ಎನ್ನಲಾಗಿರುವ ಮಿಶೆಲ್​ನನ್ನು ಅಕ್ರಮ ಹಣ ವರ್ಗಾವಣೆ ಆರೋಪದ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಕಳೆದ ತಿಂಗಳು ಬಂಧಿಸಿ ಭಾರತಕ್ಕೆ ಕರೆ ತಂದಿದೆ. ಇದಕ್ಕೂ ಮೊದಲು ಮಿಶೆಲ್​ನನ್ನು ಭಾರತ ಸರ್ಕಾರದ ಕೋರಿಕೆ ಮೇರೆಗೆ ಯುಎಇ ಸರ್ಕಾರ ಗಡಿಪಾರು ಮಾಡಿತ್ತು.
ಇಂದು ಮಿಶೆಲ್​ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಜಾರಿ ನಿರ್ದೇಶನಾಲಯ ತನಿಖೆಯ ದೃಷ್ಟಿಯಿಂದ ಮತ್ತಷ್ಟು ದಿನ ವಶಕ್ಕೆ ನೀಡುವಂತೆ ಕೋರಿತು. ಇದಕ್ಕೆ ಸಮ್ಮತಿಸಿದ ಪಟಿಯಾಲ ಹೌಸ್​ ನ್ಯಾಯಾಲಯ ಏಳು ದಿನಗಳ ಕಾಲ ಇ.ಡಿ. ವಶಕ್ಕೆ ನೀಡಿದೆ.

ಮಿಶೆಲ್​ ಅವರನ್ನು ಕೋರ್ಟ್​ಗೆ ಹಾಜರುಪಡಿಸುವ ವೇಳೆ ಕೆಲ ನಾಟಕೀಯ ಬೆಳವಣಿಗೆಗಳು ನಡೆದಿವೆ. ಮಿಶೆಲ್​ ಪರ ವಾದ ಮಂಡಿಸಿದ ವಕೀಲ ಅಲ್ಜೋ ಜೋಸೆಫ್​ ” ಕಾನೂನು ಪ್ರತಿಕ್ರಿಯೆಗಳನ್ನು ಹೇಗೆ ನೀಡಬೇಕು ಎಂಬುದರ ಬಗ್ಗೆ ಮಿಶೆಲ್​ಗೆ ಕೆಲ ಪ್ರಶ್ನೆಗಳಿದ್ದವು. ಕೋರ್ಟ್​ಗೆ ಬಂದಾಗ ಅವರು ನಮಗೆ ಏನನ್ನೋ ಹೇಳಲು ಬಂದರು. ಆದರೆ, ನಮಗೆ ಅದೇನೆಂದು ಅರ್ಥವಾಗಲಿಲ್ಲ. ಅವರು ನಮಗೆ ಏನನ್ನೋ ಕೊಡಲು ಪ್ರಯತ್ನಿಸುತ್ತಿದ್ದದ್ದನ್ನು ಗಮನಿಸಿದೆವು. ಆಗ ಅವರ ಕೈಯಿಂದ ಚೀಟಿಯೊಂದು ಜಾರಿ ಬಿತ್ತು. ಆದರೆ, ಅದನ್ನು ದೂರಕ್ಕೆ ಒಯ್ಯಲಾಯಿತು,” ಎಂದು ಅವರು ಕೋರ್ಟ್​ಗೆ ಹೇಳಿಕೊಂಡಿದ್ದಾರೆ.
ತಮ್ಮೆಲ್ಲ ವಾದಗಳ ಹೊರತಾಗಿಯೂ ಮಿಶೆಲ್​ ಅವರ ವಕೀಲರಿಗೆ ಕೇಸಿನಲ್ಲಿ ಹಿನ್ನಡೆಯುಂಟಾಗಿದೆ. ಮಿಶೆಲ್​ನನ್ನು ಭೇಟಿ ಮಾಡುವ ವಿಚಾರದಲ್ಲಿ ವಕೀಲರಿಗೆ ಕೋರ್ಟ್​ ನಿಯಂತ್ರಣ ಹೇರಿದೆ. ಅಲ್ಲದೆ, ಮಿಶೆಲ್​ನಿಂದ ಅಂತರ ಕಾಯ್ದುಕೊಳ್ಳುವಂತೆಯೂ ಸೂಚಿಸಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ 15 ನಿಮಿಷ ಮಾತ್ರ ಮಿಶೆಲ್​ನನ್ನು ಭೇಟಿಯಾಗಲು ಅವರ ವಕೀಲರಿಗೆ ಅವಕಾಶ ಕಲ್ಪಿಸಲಾಗಿದೆ.