ಅಗಸ್ತಾದಲ್ಲಿ ಸೋನಿಯಾ ಹಸ್ತ

ನವದೆಹಲಿ: ಯುಪಿಎ ಕಾಲದಲ್ಲಿ ನಡೆದ ಬಹುಕೋಟಿ ಅಗಸ್ತಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಪ್ರಕರಣ ಈಗ ‘ಗಾಂಧಿ ಕುಟುಂಬ’ಕ್ಕೆ ಮುಳ್ಳಾಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.

ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ವಿಚಾರಣೆ ವೇಳೆ ಸ್ಪೋಟಕ ಮಾಹಿತಿಗಳನ್ನು ಬಾಯ್ಬಿಟ್ಟಿದ್ದಾನೆ. ‘ಶ್ರೀಮತಿ ಗಾಂಧಿ’, ‘ಇಟಲಿ ಲೇಡಿ’ ಎಂದು ಹಲವೆಡೆ ಉಲ್ಲೇಖಿಸಿದ್ದಾನೆ. ಪ್ರಸ್ತುತ ಸ್ಥಿತಿಯಲ್ಲಿ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸುವುದು ಸೂಕ್ತವಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದೆಹಲಿಯ ಪಟಿಯಾಲ ಹೌಸ್ ಕೋರ್ಟ್​ಗೆ ಶನಿವಾರ ತಿಳಿಸಿದ್ದಾರೆ. ಇದು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

‘ಆರ್’ ಎಂದರೆ ಯಾರು?: ಮಿಶೆಲ್ ಡೈರಿಯಲ್ಲಿ ‘ಆರ್’ ಎಂಬ ಉಲ್ಲೇಖವಿದೆ. ಇದು ಕಾಂಗ್ರೆಸ್​ನ ಪ್ರಮುಖ ರಾಜಕಾರಣಿ ಹೆಸರು ಎಂದೂ ಹೇಳಲಾಗುತ್ತದೆ. ಈ ಗುಪ್ತ ಬರಹದ ಕುರಿತು ಇನ್ನಷ್ಟು ತನಿಖೆ ನಡೆಸಬೇಕಿದೆ ಎಂದು ಕೋರ್ಟ್​ಗೆ ಇ.ಡಿ. ತಿಳಿಸಿದೆ. ಮನವಿ ಪುರಸ್ಕರಿಸಿದ ಕೋರ್ಟ್, ಮಿಶೆಲ್​ನನ್ನು ಮತ್ತೆ ಏಳು ದಿನ ಇ.ಡಿ. ವಶಕ್ಕೆ ಒಪ್ಪಿಸಿದೆ.

ಎಚ್​ಎಎಲ್ ರಹಸ್ಯ: ಹೆಲಿಕಾಪ್ಟರ್ ಖರೀದಿ ಒಪ್ಪಂದದಿಂದ ಬೆಂಗಳೂರು ಮೂಲದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್​ಎಎಲ್) ಕೈಬಿಟ್ಟು, ನಂತರ ಟಾಟಾ ಸಂಸ್ಥೆಗೆ ವ್ಯವಹಾರದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿರುವ ಕುರಿತೂ ಮಿಶೆಲ್ ಇ.ಡಿ.ಗೆ ಮಾಹಿತಿ ನೀಡಿದ್ದಾನೆ.

ಇಟಲಿ ಲೇಡಿ ಮಗ…: ಆರೋಪಿ ಮಿಶೆಲ್ ವಿಚಾರಣೆ ವೇಳೆ ‘ಇಟಲಿ ಮಹಿಳೆಯ ಮಗ’ ‘ಭಾರತದ ಮುಂದಿನ ಪ್ರಧಾನಿಯಾಗುವವ’ ಎಂದು ಹೇಳಿದ್ದಾನೆ ಎಂದು ಇ.ಡಿ. ತಿಳಿಸಿದೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದಾನೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಹಸ್ತಲಾಘವ ನೆಪದಲ್ಲಿ ಚೀಟಿ ರವಾನೆ!: ಕ್ರಿಶ್ಚಿಯನ್ ಮಿಶೆಲ್ ಹಸ್ತಲಾಘವ ಮೂಲಕ ತಮ್ಮ ವಕೀಲರಿಗೆ ಚೀಟಿಗಳನ್ನು ರವಾನಿಸಿದ್ದಾನೆ ಎಂದು ಇಡಿ ಕೋರ್ಟ್​ಗೆ ತಿಳಿಸಿದೆ. ವೈದ್ಯಕೀಯ ಪರೀಕ್ಷೆ ವೇಳೆ ಮಿಶೆಲ್ ತನ್ನ ವಕೀಲ ಎ.ಕೆ. ಜೋಸೆಫ್ ಕೈ ಕುಲುಕುವಾಗ ಸಣ್ಣ ಚೀಟಿಯನ್ನು ಗುಪ್ತವಾಗಿ ನೀಡಿದ. ವಿಚಾರಣೆ ವೇಳೆ ಕೇಳಲಾಗಿರುವ ಪ್ರಶ್ನೆಗಳು, ಇವುಗಳಿಗೆ ಹೇಗೆ ಉತ್ತರಿಸಬೇಕು? ಇನ್ನಿತರ ಮಾಹಿತಿಗಳು ಇದರಲ್ಲಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮಿಶೆಲ್ ಪರ ವಕೀಲ ಜೋಸೆಫ್, ವಿಚಾರಣೆ ವೇಳೆ ಕೆಲವು ಪ್ರಶ್ನೆಗಳಿಗೆ ಕಾನೂನಾತ್ಮಕವಾಗಿ ಉತ್ತರಿಸಬೇಕಿದೆ. ಅದಕ್ಕೆ ಮಿಶೆಲ್ ಸಹಾಯ ಬಯಸಿದ್ದ. ದೆಹಲಿ ಕೋರ್ಟ್ ಆವರಣದಲ್ಲಿ ಮಿಶೆಲ್ ತಮ್ಮತ್ತ ಯಾವುದೋ ಚೀಟಿ ತೂರಲು ಪ್ರಯತ್ನಿಸಿದ. ಅಷ್ಟರಲ್ಲಿ ಅದನ್ನು ಅಧಿಕಾರಿಗಳು ಕಸಿದುಕೊಂಡರು ಎಂದಿದ್ದಾರೆ.

ಮಿಶೆಲ್ ಮೇಲೆ ಒತ್ತಡ, ಕಾಂಗ್ರೆಸ್ ಆರೋಪ

ಗಾಂಧಿ ಕುಟುಂಬದವರ ಹೆಸರನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವಂತೆ ಮಿಶೆಲ್ ಮೇಲೆ ಒತ್ತಡ ಹೇರಲಾಗುತ್ತಿದೆ. ಈ ಹಗರಣದಲ್ಲಿ ಗಾಂಧಿ ಕುಟುಂಬದವರನ್ನು ಹೇಗಾದರೂ ಮಾಡಿ ಎಳೆದುತರುವಂತೆ ತನಿಖಾ ಸಂಸ್ಥೆ ಮೇಲೆ ಚೌಕಿದಾರ್ (ಪ್ರಧಾನಿ ನರೇಂದ್ರ ಮೋದಿ) ಒತ್ತಡ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಏನಿದು ಹಗರಣ?

ಅತಿ ಗಣ್ಯರ ಸಂಚಾರಕ್ಕಾಗಿ ಇಟಲಿ ಮೂಲದ ಅಗಸ್ತಾ ವೆಸ್ಟ್​ಲ್ಯಾಂಡ್ ಕಂಪನಿಯಿಂದ 12 ಎಡಬ್ಲ್ಯೂ 101 ಹೆಲಿಕಾಪ್ಟರ್​ಗಳನ್ನು -ಠಿ; 3,600 ಕೋಟಿ ಮೊತ್ತಕ್ಕೆ ಖರೀದಿಸಲು 2010ರ ಫೆಬ್ರವರಿಯಲ್ಲಿ ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಕರಾರಿಗೆ ಸಹಿ ಹಾಕಿದರು. ಈ ವ್ಯವಹಾರ ಕುದುರಿಸಲು ಮಧ್ಯವರ್ತಿ ಕ್ರಿಶ್ಚಿಯನ್ ಮಿಶೆಲ್ ಮೂಲಕ ಭಾರತದ ವಾಯುಪಡೆ ಅಧಿಕಾರಿಗಳು ಮತ್ತು ಇತರರಿಗೆ ಲಂಚ ನೀಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ಅಗಸ್ತಾ ವೆಸ್ಟ್​ಲ್ಯಾಂಡ್ ಕಂಪನಿಯಿಂದಲೇ ಹೆಲಿಕಾಪ್ಟರ್​ಗಳನ್ನು ಖರೀದಿಸುವಂತೆ ಅಂದಿನ ವಾಯುಪಡೆ ಮುಖ್ಯಸ್ಥ ತ್ಯಾಗಿ ಮೇಲೆ ರಾಜಕೀಯ ಒತ್ತಡವಿತ್ತು ಎನ್ನಲಾಗಿದೆ. ಹೆಲಿಕಾಪ್ಟರ್ ಖರೀದಿಸುವಂತೆ ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಅಗಸ್ತಾ ವೆಸ್ಟ್​ಲ್ಯಾಂಡ್ ಕಂಪನಿ ಮಾತೃಸಂಸ್ಥೆ ಫಿನ್​ವೆುಕಾನಿಕಾ ಅಧ್ಯಕ್ಷ ಗೈಸೆಪೆ ಓರ್ಸಿ ಮತ್ತು ಸಿಇಒ ಬ್ರೂನೋ ಸ್ಪಗ್ನೋಲಿನಿಯನ್ನು 2013ರ ಫೆಬ್ರವರಿಯಲ್ಲಿ ಇಟಲಿಯಲ್ಲಿ ಬಂಧಿಸಲಾಯಿತು. ಖರೀದಿ ಒಪ್ಪಂದಕ್ಕಾಗಿ -ಠಿ; 70ರಿಂದ 100 ಕೋಟಿ ಮೊತ್ತ ಲಂಚದ ರೂಪದಲ್ಲಿ ಹರಿದಾಡಿದೆ ಎಂದು ಈ ಪ್ರಕರಣದ ವಿಚಾರಣೆ ನಡೆಸಿದ್ದ ಇಟಲಿ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ಖರೀದಿ ಒಪ್ಪಂದವನ್ನು ಯುಪಿಎ ಸರ್ಕಾರ ತಡೆ ಹಿಡಿಯಿತು. 2014ರಲ್ಲಿ ಒಪ್ಪಂದವನ್ನೇ ರದ್ದುಮಾಡಲಾಯಿತು. ಹೆಲಿಕಾಪ್ಟರ್ ಖರೀದಿಗೆ ಅಗಸ್ತಾವೆಸ್ಟ್​ಲ್ಯಾಂಡ್ ಕಂಪನಿಗೆ ಪಾವತಿಸಿದ್ದ ಮೊತ್ತದಲ್ಲಿ ಬಹುಪಾಲು ಹಣವನ್ನು ಭಾರತ ವಾಪಸು ಪಡೆಯಿತು.

ವಕೀಲರ ಭೇಟಿಗೆ ನಿರ್ಬಂಧ

ವಕೀಲರನ್ನು ಸಂರ್ಪಸುವುದಕ್ಕೆ ಮಿಶೆಲ್​ಗೆ ಅವಕಾಶ ನೀಡಬಾರದು. ಆತನ ವಕೀಲರು ವಿಚಾರಣೆಯಲ್ಲಿ ಏನು ಹೇಳಬೇಕು, ಏನನ್ನು ಹೇಳಬಾರದು ಎಂಬುದರ ಬಗ್ಗೆ ವಿವರ ನೀಡುತ್ತಾರೆ. ಇದರಿಂದ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಇ.ಡಿ. ಕೋರ್ಟ್​ಗೆ ಮನವಿ ಮಾಡಿದೆ. ಇದನ್ನು ಗಂಭಿರವಾಗಿ ಪರಿಗಣಿಸಿದ ಕೋರ್ಟ್, ಮಿಶೆಲ್ ಪರ ವಕೀಲರು ಆತನಿಂದ ದೂರವಿರಬೇಕು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ 15 ನಿಮಿಷ ಮಾತ್ರ ಭೇಟಿ ಮಾಡಬಹುದು ಎಂದು ಸೂಚಿಸಿದೆ.