ಮನಬಂದಂತೆ ಗುಂಡಿನ ದಾಳಿಯನ್ನು 17 ನಿಮಿಷ ಲೈವ್​ಸ್ಟ್ರೀಮ್​ ಮಾಡಿದ್ದ ಕ್ರೈಸ್ಟ್​ಚರ್ಚ್​ ದಾಳಿಕೋರ: ನಾಲ್ವರು ಶಂಕಿತರನ್ನು ಬಂಧಿಸಿದ ಪೊಲೀಸರು

ಕ್ರೈಸ್ಟ್​ಚರ್ಚ್​: ಇಲ್ಲಿನ ಮಸೀದಿಯೊಳಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ಮಾಡಿದ ದಾಳಿಕೋರ ತನ್ನ ಕೃತ್ಯವನ್ನು 17 ನಿಮಿಷ ಲೈವ್​ಸ್ಟ್ರೀಮ್​ ಮಾಡಿದ್ದಾನೆ. ತನ್ನನ್ನು ತಾನು ಆಸ್ಟ್ರೇಲಿಯಾ ಮೂಲದ 28 ವರ್ಷದ ಬ್ರೆಂಟನ್​ ಟಾರಂಟ್​ ಎಂದು ಗುರುತಿಸಿಕೊಂಡಿರುವ ಆತ ತನ್ನ ಟ್ವಿಟರ್​ ಅಕೌಂಟ್​ ಮೂಲಕ ಇದನ್ನು ಲೈವ್​ ಸ್ಟ್ರೀಮ್​ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಇದನ್ನು ಗಮನಿಸಿದ ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್​ ಬ್ರೆಂಟನ್​ ಟಾರಂಟ್​ ಎಂಬಾತನ ಅಕೌಂಟ್​ ಅನ್ನು ಸ್ಥಗಿತಗೊಳಿಸಿತು. ಇದೀಗ ಪೊಲೀಸರು ಈ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

40 ಜನರ ಸಾವು: ಕ್ರೈಸ್ಟ್​ಚರ್ಚ್​ ಮಸೀದಿ ಮೇಲಿನ ದಾಳಿಯಲ್ಲಿ ಇದುವರೆಗೆ 40 ಜನ ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ. ನ್ಯೂಜಿಲೆಂಡ್​ನ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿನ ಎಂದು ನ್ಯೂಜಿಲೆಂಡ್​ ಪ್ರಧಾನಿ ಜೆಸಿಂದಾ ಆರ್ಡರ್ನ್​ ಬಣ್ಣಿಸಿದ್ದಾರೆ.

ಇದೊಂದು ಭಯೋತ್ಪಾದಕರ ದಾಳಿ ಎಂದು ಹೇಳಿರುವ ಅವರು, ಆಸ್ಟ್ರೇಲಿಯಾ ಮೂಲದ ಒಬ್ಬ ವ್ಯಕ್ತಿ ಸೇರಿ ಒಟ್ಟು ನಾಲ್ವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ.

ಇದೊಂದು ಹೀನಾ ಕೃತ್ಯ. ಇಂತಹ ಕೃತ್ಯಗಳನ್ನು ನ್ಯೂಜಿಲೆಂಡ್​ ಎಂದೂ ಬೆಂಬಲಿಸುವುದಿಲ್ಲ. ಇಂತಹ ಘಟನೆಗಳಿಂದ ಮೂಲ ನಿವಾಸಿಗಳಿಗಿಂತಲೂ ನ್ಯೂಜಿಲೆಂಡ್​ಗೆ ವಲಸೆ ಬಂದಿರುವವರಿಗೆ ತುಂಬಾ ತೊಂದರೆಯುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)