ನಿನ್ನೆಯ ಪಂದ್ಯದಲ್ಲಿ ದಾಖಲೆ ಮೇಲೆ ದಾಖಲೆ ಬರೆದು ಯೂನಿವರ್ಸಲ್​ ಬಾಸ್ ಹೇಳಿಕೆ ಸಮರ್ಥಿಸಿಕೊಂಡ ಗೇಲ್​

ನವದೆಹಲಿ: ವಿಶ್ವ ಕ್ರಿಕೆಟ್​ನ ದೈತ್ಯ ಆಟಗಾರ ವೆಸ್ಟ್​ ಇಂಡೀಸ್​ನ ಕ್ರಿಸ್​ ಗೇಲ್ ವಿಶ್ವಕಪ್​ ನಂತರ ನಿವೃತ್ತಿ ಘೋಷಿಸುವುದಾಗಿ ಹೇಳಿರುವುದು ಎಷ್ಟೋ ಕ್ರೀಡಾಭಿಮಾನಿಗಳಿಗೆ ನಿರಾಸೆಯನ್ನು ಉಂಟುಮಾಡಿದೆ. ಕ್ರಿಕೆಟ್​ನಲ್ಲಿ ನಾನೇ ಯೂನಿವರ್ಸಲ್​​ ಬಾಸ್​ ಎಂದು ಹೇಳಿಕೊಂಡ ಗೇಲ್​ ಸಾಮರ್ಥ್ಯ ಏನೆಂಬುದಕ್ಕೆ ನಿನ್ನೆ ಇಂಗ್ಲೆಂಡ್​ ವಿರುದ್ಧ ನಡೆದ ಪಂದ್ಯವೇ ಸಾಕ್ಷಿಯಾಗಿದೆ.

ಕ್ರೀಸ್​ನಲ್ಲಿ ಕ್ರಿಸ್​ ಗೇಲ್​ ನಿಂತರೆ ಕ್ರಿಕೆಟ್​ ಪ್ರಿಯರಿಗೆ ಹಬ್ಬವೋ ಹಬ್ಬ. ಬ್ಯಾಟ್​ ಬೀಸಿದರೆ ಬೌಂಡರಿಗಳ ಸುರಿಮಳೆಗೈಯುವ ಗೇಲ್​ ಬುಧವಾರ ಆತಿಥೇಯ ಇಂಗ್ಲೆಂಡ್​ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೆಲವು ವಿಶಿಷ್ಟ ದಾಖಲೆಗಳನ್ನು ತಮ್ಮ ಬತ್ತಳಿಕೆಗೆ ಸೇರಿಸಿಕೊಂಡಿದ್ದಾರೆ.

ದಾಖಲೆ ನಂ.1
ನಿನ್ನೆ ನಡೆದ ಪಂದ್ಯದಲ್ಲಿ ಆಂಗ್ಲ ಬೌಲರ್​ಗಳ ಮೇಲೆ ಸವಾರಿ ಮಾಡಿದ ಗೇಲ್ 129 ಎಸೆತದಲ್ಲಿ 3 ಬೌಂಡರಿ ಹಾಗೂ 12 ಸಿಕ್ಸರ್​ ನೆರವಿನೊಂದಿಗೆ​ 135 ರನ್​ ಗಳಿಸಿದರು. ಏಕದಿನ ಪಂದ್ಯಗಳಲ್ಲಿ ಮೂರು ಬಾರಿ 10ಕ್ಕಿಂತ ಹೆಚ್ಚು ಸಿಕ್ಸರ್​ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಕಳೆದ ವರ್ಷ ಮಾರ್ಚ್​ನಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ 11 ಸಿಕ್ಸರ್​ ಹಾಗೂ 2015ರ ವಿಶ್ವಕಪ್​ ಟೂರ್ನಿಯಲ್ಲಿ ಜಿಂಬಾಂಬ್ವೆ ವಿರುದ್ಧ 16 ಸಿಕ್ಸರ್​ ಬಾರಿಸಿದ್ದರು.

ದಾಖಲೆ ನಂ.2
ಆಂಗ್ಲರ ವಿರುದ್ಧ 12 ಸಿಕ್ಸರ್​ ಬಾರಿಸಿದ ಗೇಲ್​ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಂದೇ ತಂಡದ ವಿರುದ್ಧ 100 ಸಿಕ್ಸರ್​ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಆಂಗ್ಲರ ವಿರುದ್ಧದ 31 ಏಕದಿನ ಪಂದ್ಯದಲ್ಲಿ 57, 11 ಟಿ20ಯಲ್ಲಿ 28 ಹಾಗೂ 20 ಟೆಸ್ಟ್​ ಪಂದ್ಯದಲ್ಲಿ 15 ಸಿಕ್ಸರ್ ಬಾರಿಸಿದ್ದಾರೆ.

ದಾಖಲೆ ನಂ. 3
ನಿನ್ನೆಯ ಪಂದ್ಯದಲ್ಲಿ 12 ಸಿಕ್ಸರ್​ ಸಿಡಿಸುವ ಮೂಲಕ ಅಫ್ರಿದಿ ಹೆಸರಿನಲ್ಲಿದ್ದ ಅತಿ ಹೆಚ್ಚು ಸಿಕ್ಸರ್​ ದಾಖಲೆಯನ್ನು ಸರಿಗಟ್ಟಿದರು. ಎಲ್ಲ ಮಾದರಿಯ ಪಂದ್ಯಗಳಲ್ಲಿ ಗೇಲ್​​ ಇದುವರೆಗೂ 444 ಪಂದ್ಯಗಳನ್ನು ಆಡಿದ್ದು, ಒಟ್ಟು 477 ಸಿಕ್ಸರ್​ ಸಿಡಿಸಿ ಮೊದಲ ಸ್ಥಾನಕ್ಕೇರಿದ್ದಾರೆ. 524 ಪಂದ್ಯಗಳಲ್ಲಿ 476 ಸಿಕ್ಸರ್​ಗಳೊಂದಿಗೆ ಅಫ್ರಿದಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿಂಡೀಸ್​ ವಿಶೇಷ ಸಾಧನೆಗೆ ಗೇಲ್​ ಕಾರಣ
ನಿನ್ನೆ ನಡೆದ ಪಂದ್ಯದಲ್ಲಿ ಕೆರಿಬಿಯನ್​ ಪಡೆ ಆಂಗ್ಲರ ವಿರುದ್ಧ ಆಕ್ರಮಣಕಾರಿ ಆಟ ಪ್ರದರ್ಶಿಸಿ, 23 ಸಿಕ್ಸರ್​ ಸಿಡಿಸಿದೆ. ಈ ಮೂಲಕ ಏಕದಿನ ಪಂದ್ಯವೊಂದರಲ್ಲಿ ಎದುರಾಳಿ ತಂಡದ ವಿರುದ್ಧ 23 ಸಿಕ್ಸರ್​ ಬಾರಿಸಿದ ಮೊದಲ ತಂಡ ಎಂಬ ದಾಖಲೆ ಬರೆದುಕೊಂಡಿದೆ. ಇದಕ್ಕೆ ಗೇಲ್​ ಸಿಡಿಸಿದ 12 ಸಿಕ್ಸರ್​ ಪ್ರಮುಖ ಕಾರಣವಾಗಿದೆ. 2014ರಲ್ಲಿ ವಿಂಡೀಸ್​ ವಿರುದ್ಧ ನ್ಯೂಜಿಲೆಂಡ್​ 22 ಸಿಕ್ಸರ್​ ಬಾರಿಸಿ ದಾಖಲೆ ಮಾಡಿತ್ತು.

ನಿನ್ನೆಯ ಪಂದ್ಯ ಸೋತ ವಿಂಡೀಸ್​​
ನಿನ್ನೆ ನಡೆದ ಪಂದ್ಯದಲ್ಲಿ ವಿಂಡೀಸ್​ ಇಷ್ಟೆಲ್ಲ ದಾಖಲೆ ಮಾಡಿದರೂ ಸಹ ಪಂದ್ಯವನ್ನು ಕೈಚೆಲ್ಲಿದೆ. ಮೊದಲು ಬ್ಯಾಟ್​ ಮಾಡಿದ ವಿಂಡೀಸ್​ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 360 ರನ್​ ಬೃಹತ್​ ಮೊತ್ತ ಕಲೆಹಾಕಿತ್ತು. ಗುರಿಬೆನ್ನತ್ತಿದ ಆಂಗ್ಲ ಪಡೆ 48.4 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 364 ರನ್​ ಕಲೆಹಾಕುವ ಮೂಲಕ ಗೆಲುವಿನ ಕೇಕೆ ಹಾಕಿತು. (ಏಜೆನ್ಸೀಸ್​)