ಬೂಮ್​ ಅಫ್ರಿದಿಯ ದಾಖಲೆ ಸರಿಗಟ್ಟಿ ಯೂನಿವರ್ಸಲ್​​ ಬಾಸ್​ ಆದ ರನ್​ ದೈತ್ಯ ಕ್ರಿಸ್​ ಗೇಲ್​

ಲಂಡನ್​: ಮುಂದಿನ ವಿಶ್ವಕಪ್​ ನಂತರ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿರುವ ವೆಸ್ಟ್​ಇಂಡೀಸ್​ ತಂಡದ ರನ್​ ದೈತ್ಯ ಕ್ರಿಸ್​ ಗೇಲ್​ ಕ್ರಿಕೆಟ್​ನಲ್ಲಿ ತಾವೇ ಯೂನಿವರ್ಸಲ್​ ಬಾಸ್​ ಎಂದು ಹೇಳಿಕೊಂಡಿದ್ದರು. ಇದೀಗ ಹೊಸದೊಂದು ದಾಖಲೆ ಬರೆದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಹೌದು, ಪಾಕ್​ ತಂಡದ ಸ್ಫೋಟಕ ಆಟಗಾರ ಶಾಹಿದ್​ ಅಫ್ರಿದಿ ಹೆಸರಿನಲ್ಲಿದ್ದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್​ ಗಳಿಸಿದ ದಾಖಲೆಯನ್ನು ಗೇಲ್​ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ಕೆನ್ಸಿಂಗ್ಟನ್ ಓವಲ್​ನಲ್ಲಿ ಬುಧವಾರ ನಡೆದ ಮೊದಲ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಗೇಲ್​ ಈ ಸಾಧನೆಗೆ ಪಾತ್ರರಾಗಿದ್ದಾರೆ.

ಎಲ್ಲ ಮಾದರಿಯ ಪಂದ್ಯಗಳು ಸೇರಿ ಗೇಲ್​​ ಇದುವರೆಗೂ 444 ಪಂದ್ಯಗಳನ್ನು ಆಡಿದ್ದು, ಒಟ್ಟು 477 ಸಿಕ್ಸರ್​ ಸಿಡಿಸಿ ಮೊದಲ ಸ್ಥಾನಕ್ಕೇರಿದ್ದಾರೆ. 524 ಪಂದ್ಯಗಳಲ್ಲಿ 476 ಸಿಕ್ಸರ್​ಗಳೊಂದಿಗೆ ಅಫ್ರಿದಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. 398 ಸಿಕ್ಸರ್​ಗಳೊಂದಿಗೆ ನ್ಯೂಜಿಲೆಂಡ್​ನ ಬ್ರೆಂಡನ್​ ಮೆಕ್ಕಲಂ ಮೂರನೇ ಸ್ಥಾನದಲ್ಲಿದ್ದಾರೆ. 352 ಸಿಕ್ಸರ್​ ಸಿಡಿಸಿರುವ ಶ್ರೀಲಂಕಾದ ಸನತ್​ ಜಯಸೂರ್ಯ​ ನಾಲ್ಕನೇ ಸ್ಥಾನದಲ್ಲಿದ್ದರೆ, ಟೀಂ ಇಂಡಿಯಾದ ರೋಹಿತ್​ ಶರ್ಮ 349 ಸಿಕ್ಸರ್​ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಗೇಲ್​ ಏಕದಿನ ಪಂದ್ಯದಲ್ಲಿ 276, ಟಿ20ಯಲ್ಲಿ 103 ಹಾಗೂ ಟೆಸ್ಟ್​ ಪಂದ್ಯಗಳಲ್ಲಿ 98 ಸಿಕ್ಸರ್​ ಬಾರಿಸಿದ್ದಾರೆ. (ಏಜೆನ್ಸೀಸ್​)