ದಾಖಲೆಗಳ ಸರದಾರ ಕ್ರಿಸ್​ ಗೇಲ್​ರಿಂದ ಮತ್ತೊಂದು ಮೈಲಿಗಲ್ಲು!

ನವದೆಹಲಿ: ದಾಖಲೆಗಳ ಮೇಲೆ ದಾಖಲೆ ಬರೆಯುತ್ತಾ ವೃತ್ತಿ ಜೀವನದ ಯಶಸ್ಸಿನ ಉತ್ತುಂಗದಲ್ಲಿರುವ ವೆಸ್ಟ್​ ಇಂಡೀಸ್​ ತಂಡದ ದೈತ್ಯ ದಾಂಡಿಗ ಕ್ರಿಸ್​ ಗೇಲ್ ಮತ್ತೊಂದು ಮೈಲಿಗಲ್ಲನ್ನು ನಿರ್ಮಿಸಿದ್ದಾರೆ.

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದವರ ಸಾಲಿಗೆ ಪಾಕಿಸ್ತಾನದ ಆಟಗಾರ ಶಾಹಿದ್​ ಅಫ್ರಿದಿಗೆ ಸಮಾನಾಗಿ ಗೇಲ್​ ಬಂದು ನಿಂತಿದ್ದಾರೆ.

ಭಾನುವಾರ ಸೇಂಟ್​ ಕಿಟ್ಸ್​ನಲ್ಲಿ ನಡೆದ ಬಾಂಗ್ಲದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಐದು ಸಿಕ್ಸರ್​ ಬಾರಿಸುವ ಮೂಲಕ ಈ ಸಾಧನೆ ಗೈದಿದ್ದಾರೆ. ಮೂರು ಮಾದರಿಯ ಪಂದ್ಯಗಳಲ್ಲಿ ಒಟ್ಟು 476 ಸಿಕ್ಸರ್​ ಬಾರಿಸಿರುವ ಗೇಲ್​ ಅಫ್ರಿದಿಗೆ ಸರಿ ಸಮನಾಗಿ ನಿಂತಿದ್ದಾರೆ.

ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಗೇಲ್​ ಕೇವಲ 443 ಪಂದ್ಯದಲ್ಲೇ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ಸಾಧನೆ ಮಾಡಲು ಅಫ್ರಿದಿ ಅವರು 524 ಪಂದ್ಯಗಳನ್ನಾಡಿದ್ದರು.

ಅಫ್ರಿದಿ ಅವರು ಏಕದಿನ ಪಂದ್ಯದಲ್ಲಿ 351, ಟಿ20ಯಲ್ಲಿ 73 ಹಾಗೂ ಟೆಸ್ಟ್​ ಪಂದ್ಯದಲ್ಲಿ 52 ಸಿಕ್ಸರ್​ ಬಾರಿಸಿದರೆ, ಗೇಲ್​ ಏಕದಿನ 275, ಟಿ20ಯಲ್ಲಿ 103 ಹಾಗೂ ಟೆಸ್ಟ್​ನಲ್ಲಿ 98 ಸಿಕ್ಸರ್​ ಬಾರಿಸಿದ್ದಾರೆ.

ಟೀಂ ಇಂಡಿಯಾದ ಎಂ.ಎಸ್​. ಧೋನಿ ಅವರು 504 ಪಂದ್ಯದಲ್ಲಿ 342 ಸಿಕ್ಸರ್​ ಬಾರಿಸುವುದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್​)