ವಿದಾಯ ಘೋಷಣೆ ಬೆನ್ನಲ್ಲೇ ಗೇಲ್ ಅಬ್ಬರ​: ಮತ್ತಷ್ಟು ದಿನ ರಂಜಿಸಲಿ ಎಂದು ಕ್ರೀಡಾಭಿಮಾನಿಗಳ ಮನವಿ

ಗ್ರೆನಡಾ(ವೆಸ್ಟ್​ಇಂಡೀಸ್​): ಏಕದಿನ ವಿಶ್ವಕಪ್ ನಂತರ​ ಕ್ರಿಕೆಟ್​ನಿಂದ ದೂರವಾಗುತ್ತೇನೆ ಎಂದು ಹೇಳಿ ವಿದಾಯದ ಘೋಷಣೆ ಮಾಡಿರುವ ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್, ಪ್ರಸ್ತುತ ಇಂಗ್ಲೆಂಡ್​​​ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ​ ಅಬ್ಬರಿಸುತ್ತಿರುವುದನ್ನು ನೋಡಿದವರು ವಿದಾಯ ಬೇಡವೆಂದು ಆಗ್ರಹಿಸುವುದಂತೂ ಸತ್ಯ. ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಗೇಲ್​ ಇನ್ನಷ್ಟು ದಿನ ನಮ್ಮನ್ನು ರಂಜಿಸಲಿ ಎಂಬುದು ಅನೇಕ ಕ್ರೀಡಾಭಿಮಾನಿಗಳ ಅಭಿಮತವಾಗಿದೆ.

ಪ್ರವಾಸಿ ಇಂಗ್ಲೆಂಡ್​​ ವಿರುದ್ಧ ಗುರುವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ಗೇಲ್​ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆಂಗ್ಲರ ವಿರುದ್ಧ ಕೇವಲ 97 ಎಸೆತಗಳಲ್ಲಿ 14 ಸಿಕ್ಸರ್​ ಹಾಗೂ 11 ಬೌಂಡರಿ ನೆರವಿನೊಂದಿಗೆ 162 ರನ್​​ ದಾಖಲಿಸಿದ ಗೇಲ್ 25ನೇ ಶತಕದೊಂದಿ​ಗೆ 10 ಸಾವಿರ ಪೂರೈಸಿದರು.

ಕೇವಲ 55 ಎಸೆತಗಳಲ್ಲಿ 100 ರನ್​ ಗಡಿ ಮುಟ್ಟಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ ಗೇಲ್​, ಅಂತಾರಾಷ್ಟ್ರೀಯ ಕ್ರಿಕೆಟ್​ನ ಎಲ್ಲ ಮಾದರಿಯ ಪಂದ್ಯಗಳಲ್ಲಿ ಒಟ್ಟಾರೆ 500 ಸಿಕ್ಸರ್​ ಬಾರಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ 10 ಸಾವಿರ ರನ್​​ ಗಡಿ ದಾಟಿದ 14ನೇ ಆಟಗಾರನೆಂಬ ಖ್ಯಾತಿಗೆ ಗೇಲ್​ ಪಾತ್ರರಾಗಿದ್ದು, ಬ್ರಿಯಾನ್​ ಲಾರಾ ಅವರನ್ನು ಬಿಟ್ಟರೆ, 10 ಸಾವಿರ ರನ್​ ಪೂರೈಸಿದ ವೆಸ್ಟ್​ ಇಂಡೀಸ್​ನ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಗೇಲ್​ ಗಳಿಸಿದ್ದಾರೆ.

ಗೇಲ್​ ಅಬ್ಬರದ ನಡುವೆಯೂ ಆತಿಥೇಯ ವಿಂಡೀಸ್​ ಪ್ರವಾಸಿ ಆಂಗ್ಲರ​ ವಿರುದ್ಧ ಸೋಲಿಗೆ ಶರಣಾಯಿತು. ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಆಂಗ್ಲ​ ಪಡೆ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 418 ರನ್​ಗಳ ಬೃಹತ್​ ಗುರಿ ನೀಡಿತು. ಗುರಿ ಬೆನ್ನತ್ತಿದ ವಿಂಡೀಸ್​ ಉತ್ತಮ ಇಂಗ್ಲೆಂಡ್​ಗೆ ಉತ್ತಮ ಪೈಪೋಟಿ ನೀಡಿತು. 48 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಅಂತಿಮವಾಗಿ 389 ರನ್​ ಗಳಿಸಿ, ಸೋಲಿಗೆ ಶರಣಾಯಿತು. (ಏಜೆನ್ಸೀಸ್​)