ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…

ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಚೌಕಿದಾರ ಎಂದು ಹೇಳಿಕೊಲ್ಳುತ್ತಾರೆ. ಆದರೆ, ಅವರು ಯಾರಿಗೆ ಚೌಕಿದಾರ?… ಅವರು ಅನಿಲ್​ ಅಂಬಾನಿ, ನೀರವ್​ ಮೋದಿ, ವಿಜಯ್​ ಮಲ್ಯ ಅವರಂತಹವರಿಗೆ ಚೌಕಿದಾರ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಲೇವಡಿ ಮಾಡಿದ್ದಾರೆ.

ಕಲಬುರಗಿಯ ಎನ್​.ವಿ. ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದರು. ತಾವು ಪ್ರಧಾನಿಯಾಗುವ ಮುನ್ನ ಆನೆ ಮಲಗಿತ್ತು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಅಂದರೆ ಅವರು ಪ್ರಧಾನಿಯಾಗುವವರೆಗೂ ಏನೂ ಆಗಿರಲಿಲ್ಲ ಎಂಬ ಅರ್ಥದಲ್ಲಿ ಈ ಮಾತನ್ನಾಡುತ್ತಾರೆ. ಅಂದರೆ, ಏಕಾಂಗಿಯಾಗಿ ದೇಶವನ್ನು ಆಳಲು ಬಯಸುತ್ತಾರೆ. ಆದರೆ, ತಾವು ಕಳ್ಳತನ ಮಾಡುತ್ತಿರುವಾಗಲೇ ಸಿಕ್ಕಿಬಿದ್ದಾದ ಬಳಿಕ ಇಡೀ ರಾಷ್ಟ್ರದ ಚೌಕಿದಾರ ಎಂದು ಹೇಳುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ ಅವರೇ ದಯವಿಟ್ಟು ತಿಳಿಸಿ. ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದದ ಹೆಸರಿನಲ್ಲಿ ನೀವು 33 ಸಾವಿರ ಕೋಟಿ ರೂಪಾಯಿ ಹಣ ಕದ್ದು ಅನಿಲ್​ ಅಂಬಾನಿ ಅವರಿಗೆ ಕೊಟ್ಟಿದ್ದೇಕೆ ಎಂದು ದಯವಿಟ್ಟು ದೇಶಕ್ಕೆ ತಿಳಿಸಿ. ಇದು ಭಾರತೀಯ ವಾಯುಪಡೆಗೆ ಸೇರಿದ ಹಣ ಅಲ್ಲವೇ.. ಎಂದು ರಾಹುಲ್​ ಪ್ರಶ್ನಿಸಿದರು.

ಕರ್ನಾಟಕ ಯುವಕರ ಉದ್ಯೋಗ ಕಸಿದಿದ್ದಾರೆ
ಕರ್ನಾಟಕದ ಯುವಜನತೆ ತಮಗೆ ಉದ್ಯೋಗ ನೀಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ. ಅದರೆ, ಅದು ಇನ್ನೂ ಈಡೇರಿಲ್ಲ. ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದದನ್ವಯ ಬೆಂಗಳೂರಿನಲ್ಲಿರುವ ಹಿಂದೂಸ್ಥಾನ್​ ಏರೋನಾಟಿಕ್ಸ್​ ಲಿಮಿಟೆಡ್​ನಲ್ಲಿ ಯುದ್ಧ ವಿಮಾನಗಳನ್ನು ತಯಾರಿಸುವ ಕಾರ್ಯವಾಗಿದ್ದರೆ ಕರ್ನಾಟಕದ ಯುವಜನತೆಗೆ ಉದ್ಯೋಗ ಸಿಕ್ಕಿರುತ್ತಿತ್ತು. ಆದರೆ, ಅದು ಅನಿಲ್​ ಅಂಬಾನಿ ಪಾಲಾಗಿದ್ದರಿಂದ, ಉದ್ಯೋಗ ದೊರೆಯದೇ ಹೋಯಿತು ಎಂದು ರಾಹುಲ್​ ಬೇಸರ ವ್ಯಕ್ತಪಡಿಸಿದರು.

ನಾವು ಸಾಲಮನ್ನಾ ಮಾಡಿದ್ದೇವೆ

ನಾವು ರೈತರ ಸಾಲಮನ್ನಾ ಮಾಡಿಲ್ಲ ಎಂದು ಪ್ರಧಾನಿ ಮೋದಿ ಹೋದಲ್ಲಿ, ಬಂದಲ್ಲಿ ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ನಾವು ಸಾಲಮನ್ನಾ ಮಾಡಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ಕೂಡ ರೈತರ ಸಾಲಮನ್ನಾ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ವೇದಿಕೆ ಮೇಲೆ ನೀಡಿದ ಭರವಸೆಯನ್ನು ಚಾಚೂ ತಪ್ಪದೆ ಈಡೇರಿಸಲು ಪ್ರಯತ್ನಿಸುತ್ತೇವೆ ಎಂದರು. (ಏಜೆನ್ಸೀಸ್​)

One Reply to “ಪ್ರಧಾನಿ ಮೋದಿ ಯಾರಿಗೆ ಚೌಕಿದಾರ? ಅನಿಲ್​ ಅಂಬಾನಿ, ನೀರವ್​ ಮೋದಿ, ಮಲ್ಯರಂಥ ಶ್ರೀಮಂತರ ಚೌಕಿದಾರ…”

  1. When your government was there your leaders commission received and looted banks, idiat now you are blaming the modi . You are not equal to his foot wear.

Comments are closed.