ಅವಕಾಶಗಳ ಹೆಬ್ಬಾಗಿಲು ಕೊರಿಯೊಗ್ರಫಿ

| ಶ್ರೀಲತಾ ಕಿರಣ್/ ರೂಪಾಲಿ ಭಟ್

ಇತ್ತೀಚಿನ ದಿನಗಳಲ್ಲಿ ವೃತ್ತಿ ಕ್ಷೇತ್ರದಲ್ಲಿ ಪದೇ ಪದೇ ಕೇಳಿ ಬರುವ ಪದ ಎಂದರೆ ಕೊರಿಯೊಗ್ರಫಿ. ಟಿ.ವಿ.ಯಲ್ಲಿ ಬರುವ ರಿಯಾಲಿಟಿ ಶೋ, ನೃತ್ಯ-ನಾಟಕ ಸ್ಪರ್ಧೆ, ಸಿನಿಮಾಗಳಲ್ಲಿ ಬರುವ ನೃತ್ಯ ಇಲ್ಲವೇ ಶಾಲಾ ಕಾಲೇಜುಗಳಲ್ಲಿ ನಡೆಯುವ ವಾರ್ಷಿಕೋತ್ಸವ… ಇವೆಲ್ಲಾ ಯಶಸ್ವಿಯಾಗಿ ಎಲ್ಲರ ಗಮನ ಸೆಳೆಯಬೇಕಾದರೆ ಅಲ್ಲಿ ಕೊರಿಯೊಗ್ರಫರ್ ಪಾತ್ರ ಅವಶ್ಯವಾಗಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊರಿಯೊಗ್ರಫಿ ಕುರಿತಾದ ಚಿತ್ರಣ ಇಲ್ಲಿದೆ.

ಪುಟ್ಟ ಪುಟಾಣಿಗಳಿಂದ ಹಿಡಿದು ಅತ್ಯಂತ ಪ್ರಸಿದ್ಧರಾಗಿರುವ ಹಿರಿಯ ಕಲಾವಿದರ ನೃತ್ಯ, ಸಂಗೀತ, ನಾಟಕ ಇತ್ಯಾದಿ ಕಾರ್ಯಕ್ರಮ ವೀಕ್ಷಿಸುವಾಗ ನಮ್ಮ ಬಾಯಿಯಿಂದ ‘ವಾವ್’ ಎಂಬ ಶಬ್ದ ಹೊರಬಂತೆಂದರೆ ಆ ಕೀರ್ತಿ ಸಲ್ಲಬೇಕಾದುದು ಆ ಕಲಾವಿದರ ಅಭಿಯನದ ಜತೆಜತೆಗೇನೇ ಅದರ ನೃತ್ಯ ಸಂಯೋಜಕರಿಗೆ.

ಒಂದು ಶಾಲೆ ಎಂದಿಟ್ಟುಕೊಳ್ಳಿ. ಅಲ್ಲಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅತಿ ಕಡಿಮೆ ಅವಧಿಯಲ್ಲಿ ನೃತ್ಯ ಪ್ರದರ್ಶಿಸಬೇಕಿದೆ. ಆ ಶಾಲೆಯಲ್ಲಿ ಶಾಸ್ತ್ರೀಯ, ಪಾಶ್ಚಿಮಾತ್ಯ, ಜಾನಪದ… ಹೀಗೆ ಬೇರೆ ಬೇರೆ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರಿಗೆ ಬೇಕಿರುವುದು ಎಲ್ಲ ನೃತ್ಯಗಳ ಸಮ್ಮಿಳನವಾಗಿರುವ ಒಂದೇ ನೃತ್ಯ. ಹೇಗೆ ಮಾಡುವುದು? ವಿದ್ಯಾರ್ಥಿಗಳೆಲ್ಲಾ ಅವರವರ ಕ್ಷೇತ್ರದಲ್ಲಿ ಪಳಗಿದ್ದರೂ ಎಲ್ಲವನ್ನೂ ಒಂದೇ ನೃತ್ಯದಲ್ಲಿ ಅಳವಡಿಸಲು ಗೊತ್ತಿರುವುದಿಲ್ಲ. ಗೊತ್ತಿದ್ದರೂ ನೃತ್ಯದ ಪರಿಕಲ್ಪನೆಗೆ ತಕ್ಕಂತೆ ನೃತ್ಯದ ಆಯೋಜನೆ ಮಾಡಲು ಅವರಿಗೆ ತಿಳಿದಿರುವುದಿಲ್ಲ. ಅಂಥ ಸಂದರ್ಭದಲ್ಲಿ ಕೆಲಸಕ್ಕೆ ಬರುವವರೇ ನೃತ್ಯ ಸಂಯೋಜಕ ಅಥವಾ ಕೊರಿಯೊಗ್ರಫರ್.

ಒಂದು ನೃತ್ಯಕ್ಕೆ, ಸಂಗೀತಕ್ಕೆ, ಸಾಹಿತ್ಯಕ್ಕೆ ಹೊಸರೂಪವನ್ನು ಒದಗಿಸುವವರೇ ಇವರು. ನೃತ್ಯ, ಸಂಗೀತ, ನಾಟಕ ಇತ್ಯಾದಿಗಳಲ್ಲಿ ರಂಗಸಜ್ಜಿಕೆಯಿಂದ ಹಿಡಿದು ದೀಪಾಲಂಕಾರದವರೆಗೂ, ನೃತ್ಯ ಪಾತ್ರಕ್ಕೆ ಸರಿಯಾದ ವೇಷಭೂಷಣ ಉಪಯೋಗಿಸುವುದರಿಂದ ಹಿಡಿದು ಕಲಾವಿದ ಅಭಿನಯಿಸುವ ಪಾತ್ರ ಅರ್ಥಪೂರ್ಣವಾಗಿ ಪ್ರೇಕ್ಷಕರಿಗೆ ಕಾಣಿಸುವ ಹಾಗೆ ಮುಖವರ್ಣಿಕೆ, ಧ್ವನಿ ವ್ಯವಸ್ಥೆ, ರಂಗಪರಿಕರಗಳನ್ನು ಸಂಯೋಜಿಸುವವರೆಗಿನ ಕರ್ತವ್ಯ ಇವರದ್ದು.

ಶಾಸ್ತ್ರೀಯ ನೃತ್ಯ ಪದ್ಧತಿಯಲ್ಲಿನ ಜೀವಾಳವಾಗಿರುವ ನೃತ್ತ, ನೃತ್ಯ ಹಾಗೂ ನಾಟ್ಯ ವಿಭಾಗಗಳಲ್ಲಿನ ಹಸ್ತ ಮುದ್ರೆ, ಮೈ ಬಾಗುವಿಕೆ, ಅಭಿನಯ, ಸಾಹಿತ್ಯ ಪ್ರಕಾರಗಳಿಗೆ ಜೀವ ತುಂಬುವ ಜತೆಜತೆಗೆ, ನೃತ್ಯದ ಕಥಾಕಲ್ಪನೆಗಳನ್ನು ಯಥಾವತ್ತಾಗಿ ಚಿತ್ರಿಸುವ ಚಾಣಾಕ್ಷತೆ ಮತ್ತು ಪ್ರದರ್ಶನಾ ಕಾಲದಲ್ಲಿ ಸರ್ವೆಸಾಧಾರಣವಾಗಿ ಬರುವ ತಪ್ಪು-ಒಪ್ಪುಗಳನ್ನು ನಿವಾರಿಸುವ ಪ್ರತಿಭೆ ಇವರಲ್ಲಿರುತ್ತದೆ, ಇರಬೇಕು. ಟಿ.ವಿ.ಚಾನೆಲ್​ಗಳಲ್ಲಿ ನೃತ್ಯ, ನಾಟಕಗಳ ರಿಯಾಲಿಟಿ ಶೋಗಳ ಯುಗವಿದು. ಅಷ್ಟೇ ಅಲ್ಲದೇ ಹಿಂದೆಲ್ಲಾ ವರ್ಷಕ್ಕೆ ಒಂದೋ, ಎರಡೋ ಚಿತ್ರಗಳು ಬಿಡುಗಡೆ ಆಗಿದ್ದರೆ ಅದೇ ದೊಡ್ಡದಾಗಿತ್ತು. ಆದರೆ ಈಗ ಹಾಗಲ್ಲ. ಕನ್ನಡ ಚಿತ್ರರಂಗವನ್ನೇ ತೆಗೆದುಕೊಂಡರೂ, ವರ್ಷಕ್ಕೆ 200ಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗುತ್ತಿವೆ. ಟಿ.ವಿ.ಯಲ್ಲಿ ಬರುವ ರಿಯಾಲಿಟಿ ಶೋಗಳಿಗೆ ಕೊರಿಯೊಗ್ರಫಿಯೇ ಜೀವಾಳವಾಗಿದ್ದರೆ, ಚಲನಚಿತ್ರಗಳಲ್ಲಿನ ನೃತ್ಯಗಳ ಬಂಡವಾಳವೂ ಅದೇನೆ. ಒಂದು ಭಾಷೆಯಲ್ಲಿ ‘ಭೇಷ್’ ಎನಿಸಿಕೊಂಡರೆ ಅವರಿಗೆ ಬೇರೆ ಭಾಷೆಗಳ ರಿಯಾಲಿಟಿ ಶೋಗಳಿಗೆ ಹಾಗೂ ಸಿನಿಮಾಗಳಿಗೆ ಭಾರಿ ಡಿಮಾಂಡ್ ಬರುತ್ತದೆ.

ಅದಕ್ಕೇ ತಾನೆ… ‘ನಾನು ಡಾಕ್ಟರ್’, ‘ನಾನು ಇಂಜಿನಿಯರ್’, ‘ನಾನು ಜರ್ನಲಿಸ್ಟ್’, ‘ನಾನು ಚಾರ್ಟರ್ಡ್ ಅಕೌಂಟೆಂಟ್’, ‘ನಾನು ವಕೀಲ’, ‘ನಾನು ಪೊಲೀಸ್ ಅಧಿಕಾರಿ’…. ಹೀಗೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುವವರಿಗಿಂತ ಒಂದು ಹೆಜ್ಜೆ ಮುಂದೆ ಎಂಬಂತೆ ‘ನಾನು ಕೊರಿಯೊಗ್ರಫರ್’ ಎಂದು ಹೇಳುವ ಹಲವಾರು ಮುಖಗಳನ್ನು ನಮ್ಮ ಸುತ್ತಮುತ್ತಲೂ ಕಾಣಬಹುದಾಗಿದೆ.

ಯಶಸ್ವಿ ಕೊರಿಯೊಗ್ರಫರ್ ಆಗುವುದು ಹೇಗೆ?

ನಾಟ್ಯವು ಒಂದು ಮನೆಯಾದರೆ, ಆಂಗಿಕ, ವಾಚಿಕ, ಆಹಾರ್ಯ ಹಾಗೂ ಸಾತ್ವಿಕಗಳು ಆ ಮನೆಯ ನಾಲ್ವರು ಸದಸ್ಯರಿದ್ದಂತೆ. ಈ ಚತುರ್ವಿಧಗಳನ್ನು ಅಳವಡಿಸಿಕೊಂಡು ನೃತ್ಯ ಸಂಯೋಜಿಸಿ, ಪ್ರೇಕ್ಷಕನ ಮನಸ್ಸಿನಲ್ಲಿ ಅದು ಗಾಢವಾಗಿ ನೆಲೆನಿಂತು ರಸೋತ್ಪಾದನೆ ಉಂಟು ಮಾಡುವಂಥ ಸಾಮರ್ಥ್ಯ ಇರಬೇಕಾದುದು ಯಶಸ್ವಿ ಕೊರಿಯೊಗ್ರಫರ್​ಗೆ ಅತ್ಯಗತ್ಯ. ಅಂದ ಮಾತ್ರಕ್ಕೆ ನೃತ್ಯ ಕಲಿತವರೆಲ್ಲಾ ಕೊರಿಯೊಗ್ರಫರ್ ಆಗಲು ಸಾಧ್ಯವಿಲ್ಲ.

ಉತ್ತಮ ಕೊರಿಯೊಗ್ರಫರ್ ಆಗಲು ದೀರ್ಘ ಪರಿಶ್ರಮದ ಅಗತ್ಯ ಇದೆ. ಜತೆಜತೆೆಗೆ ನಾನಾ ನೃತ್ಯ ಪ್ರಕಾರಗಳ ಪರಿಚಯ, ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಅನುಭವವೂ ಬೇಕಾಗುತ್ತದೆ. ಭಾರತೀಯ ನೃತ್ಯ ಪ್ರಕಾರಗಳ ಚರಿತ್ರೆ, ನಾಟ್ಯಶಾಸ್ತ್ರದ ಬಗ್ಗೆ ಅರಿವು ಇದಕ್ಕೆ ತುಂಬಾ ಮುಖ್ಯ. ಸಂಗೀತ, ತಾಳಗಳ ಜ್ಞಾನವಿರಬೇಕು. ಗುಂಪಿನಲ್ಲಿ ಸೌಹಾರ್ದ ಕಾಯ್ದುಕೊಂಡು ಕಾರ್ಯನಿರ್ವಹಿಸುವ ಚಾಕಚಕ್ಯತೆ ಅರಿತಿರಬೇಕು. ಉತ್ತಮ ಸಂವಹನ ಮತ್ತು ನಾಯಕತ್ವ ಗುಣ ಅಗತ್ಯವಾಗಿ ಬೇಕಾಗುತ್ತದೆ. ಒಂದೇ ನೃತ್ಯವನ್ನು ವಿಭಿನ್ನ ಸ್ಥಳಗಳಲ್ಲಿ ಪ್ರದರ್ಶಿಸಬೇಕಾದ ಸಂದರ್ಭ ಬಂದರೆ, ಕೊರಿಯೊಗ್ರಫಿಯಲ್ಲಿ ಕೂಡ ಬದಲಾವಣೆ ಮಾಡಬೇಕಾದುದು ಅನಿವಾರ್ಯ. ಏಕೆಂದರೆ ಪ್ರದರ್ಶನ ನೀಡಬೇಕಾಗಿರುವ ವೇದಿಕೆ ಒಂದೇ ತೆರನಾಗಿ ಇರುವುದಿಲ್ಲ. ಆ ವೇದಿಕೆಯ ರೂಪ, ಆಕಾರ, ಗಾತ್ರಕ್ಕೆ ತಕ್ಕಂತೆ ಕಲಾವಿದರನ್ನು ಸಜ್ಜುಗೊಳಿಸುವುದು ಕೊರಿಯೊಗ್ರಫರ್​ಗೆ ಇರುವ ಚಾಲೆಂಜ್. ಇದನ್ನು ಕೂಡ ಸಮರ್ಥವಾಗಿ ನಿಭಾಯಿಸಬೇಕಾದ ಜಾಣ್ಮೆ ಅವರಲ್ಲಿ ಇರಬೇಕು.

ವೃತ್ತಿಯಾಗಿ ಕೊರಿಯೊಗ್ರಫಿ

ಸಂಗೀತ, ನೃತ್ಯ ಎಂಬುದು ಕೇವಲ ಹವ್ಯಾಸವೆಂದು ಹಲವರು ತಪ್ಪಾಗಿ ತಿಳಿದಿದ್ದಾರೆ. ಆದರೆ ಇವು ವೃತ್ತಿ ಕ್ಷೇತ್ರದಲ್ಲಿ ತನ್ನದೇ ಆದ ಹೊಸ ಆಯಾಮಗಳನ್ನು ಪಡೆದುಕೊಂಡಿವೆೆ. ಹವ್ಯಾಸಕ್ಕಾಗಿ ಸಂಗೀತ, ನಾಟಕ, ನೃತ್ಯ ಕಲೆಗಳನ್ನು ಕಲೆಯುವುದು ಒಂದೆಡೆಯಾದರೆ, ಇದರಲ್ಲಿಯೇ ಮುಂದುವರಿಯಬೇಕು ಎಂದುಕೊಳ್ಳುವವರಿಗೆ ಬೆಂಗಳೂರಿನ ‘ಏಮ್್ಸ’, ರೇವಾ ಇನ್​ಸ್ಟಿಟ್ಯೂಟ್, ಮೂಡುಬಿದಿರೆಯ ಆಳ್ವಾಸ್ ಕಾಲೇಜ್, ಮೈಸೂರಿನ ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಆಂಡ್ ಪರ್​ಫಾರ್ವಿುಂಗ್ ಆರ್ಟ್ ಯೂನಿವರ್ಸಿಟಿ ಸೇರಿದಂತೆ ಹಲವರು ಕಾಲೇಜು ಹಾಗೂ ವಿಶ್ವವಿದ್ಯಾಲಗಳಲ್ಲಿ ಬಿ.ಎ, ಎಂ.ಎ, ಪಿಎಚ್.ಡಿ

ಕೋರ್ಸ್​ಗಳಿವೆ. ಅಷ್ಟೇ ಅಲ್ಲದೆ ಕೆಲವೊಂದು ಖಾಸಗಿ ಶಾಲಾ ಕಾಲೇಜುಗಳಲ್ಲಿಯೂ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಮೊದಲಾದ ಕೋರ್ಸ್​ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ, ಕೆಲವೊಂದು ವಿಶ್ವವಿದ್ಯಾಲಯದ ಪದವಿಯಲ್ಲಿ ನೃತ್ಯ ವಿಷಯವನ್ನು ಪಠ್ಯದ ಭಾಗವಾಗಿ ಅಳವಡಿಸಲಾಗಿದೆ. ಪಿಯುಸಿ ಮುಗಿಸಿದ ನಂತರ ಪದವಿಯಲ್ಲಿ ನೃತ್ಯ ವಿಷಯವನ್ನು ಆಯ್ಕೆ ಮಾಡಿಕೊಂಡರೆ ಅಲ್ಲಿ ಕೊರಿಯೊಗ್ರಫಿ ಬಗ್ಗೆ ಪಾಠ ಮಾಡಲಾಗುತ್ತದೆ. ಇವುಗಳ ಹೊರತಾಗಿ ಕೆಲವೊಂದು ಡಾನ್ಸ್ ಅಕಾಡೆಮಿಗಳು ನೃತ್ಯ ಸಂಯೋಜನೆಯ ತರಬೇತಿ ನೀಡುತ್ತವೆ.

ಅವಕಾಶಗಳು ಎಲ್ಲೆಲ್ಲಿ?

  • ಟಿ.ವಿ.
  • ರಿಯಾಲಿಟಿ ಶೋ
  • ಸಿನಿಮಾ
  • ಶಾಲಾ- ಕಾಲೇಜು
  • ರಂಭೂಮಿ
  • ನೃತ್ಯ ತರಬೇತಿ

(ಲೇಖಕಿಯರು ನೃತ್ಯ ಸಂಯೋಜಕಿಯರು)