ಹಸಿಮೆಣಸಿನಕಾಯಿ ಇದೆ ನೋಡು..!

ಹಾವೇರಿ: ‘ದ್ರಾಕ್ಷಿ ತಗೋ, ಇಲ್ಲಾ ಹಸಿಮೆಣಸಿನಕಾಯಿ ಇದೆ ನೋಡು. ಕೇಕ್ ಬೇಕೋ ಬ್ರೆಡ್ ಬೇಕೋ?. ಆಟೋರಿಕ್ಷಾ ಇರ್ಲಿ, ಬ್ರೀಪ್​ಕೇಸ್ ಅಡ್ಡಿಯಿಲ್ಲ. ಚಪ್ಪಲಿ, ಬೂಟು ಬ್ಯಾಡ ಮಾರಾಯಾ…’

ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವರು ಜನಪ್ರಿಯ ಚಿಹ್ನೆಗಳಿಗಾಗಿ ತಡಕಾಡುವಾಗ ಬೆಂಬಲಿಗರಿಂದ ಕೇಳಿ ಬರುತ್ತಿದ್ದ ಮಾತುಗಳಿವು.

ಪಕ್ಷದ ಅಭ್ಯರ್ಥಿಗಳಿಗೆ ಚಿಹ್ನೆಯ ಸಮಸ್ಯೆ ಇಲ್ಲ. ಆದರೆ, ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆ ಬೇಕಾಗಿದ್ದರಿಂದ ತಮಗಿಷ್ಟವಾದದನ್ನು ಆಯ್ಕೆ ಮಾಡಿಕೊಳ್ಳಲು ಪರದಾಡಿದರು.

ಚುನಾವಣಾ ಆಯೋಗ 109 ಚಿಹ್ನೆಗಳನ್ನು ಗುರುತಿಸಿದೆ. ಪಕ್ಷೇತರರು ನಾಮಪತ್ರದಲ್ಲಿ ಮೂರು ಚಿಹ್ನೆಗಳನ್ನು ನಮೂದಿಸಬಹುದಾಗಿದೆ. ಆ ಮೂರರಲ್ಲಿ ಆದ್ಯತೆಯ ಮೇರೆಗೆ ಚಿಹ್ನೆಗಳನ್ನು ಆಯೋಗ ಹಂಚಿಕೆ ಮಾಡುತ್ತದೆ. ಹೀಗಾಗಿ ಜನಪ್ರಿಯ ಚಿಹ್ನೆಗಳತ್ತಲೇ ಅಭ್ಯರ್ಥಿಗಳು ಆಸಕ್ತಿ ವಹಿಸಿ ಹುಡುಕಾಟ ನಡೆಸಿದರು. ಮತದಾರರಿಗೆ ಪರಿಚಿತವಿರುವಂತಹ ಚಿಹ್ನೆಗಳಿಗೆ ಭಾರಿ ಬೇಡಿಕೆ ಬಂದಿತ್ತು. ಚುನಾವಣಾ ಆಯೋಗ ನಿಗದಿಪಡಿಸಿದ ಚಿಹ್ನೆಗಳು ಆಕರ್ಷಕ ಹಾಗೂ ಕುತೂಹಲಕಾರಿಯಾಗಿವೆ. ದಿನಬಳಕೆಯ ವಸ್ತುಗಳು, ವಿದ್ಯುನ್ಮಾನ ಗೃಹೋಪಯೋಗಿ ವಸ್ತುಗಳು, ಹಣ್ಣು, ತರಕಾರಿಗಳು ಮತದಾರರಿಗೆ ಸುಲಭವಾಗಿ ತಿಳಿಯುವ, ನೆನಪಿಡುವ ಹಾಗೂ ಗುರುತಿಸುವ ದೃಷ್ಟಿಯಿಂದ ಅನುಕೂಲವಾಗಿದ್ದು, ಅವುಗಳಿಗೆ ಅಭ್ಯರ್ಥಿಗಳು ಹೆಚ್ಚಿನ ಗಮನ ಹರಿಸಿದರು.

ಅಭಾಸವಾಗುವ ಚಿಹ್ನೆಗಳು: ಚಪ್ಪಲಿ ಚಿಹ್ನೆ ಪಡೆದರೆ ಮತದಾರರು ತಮ್ಮ ಬಗ್ಗೆ ಯಾವ ಅರ್ಥ ಕಲ್ಪಿಸುವರೊ ಏನೋ, ಗಾಜಿನಲೋಟದ ಚಿಹ್ನೆ ಪಡೆದರೆ ಜನರು ತಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಾರೇನೋ, ಟೋಪಿ ಆಯ್ದುಕೊಂಡರೆ ಮತದಾರರು ತಮ್ಮ ಬಗ್ಗೆ ಏನೆಂದುಕೊಳ್ಳುತ್ತಾರೋ ಏನೋ ಎಂಬೆಲ್ಲ ಆಲೋಚನೆಯಲ್ಲಿ ಮುಳುಗಿದ್ದಾರೆ. ಹೀಗಾಗಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಬಾರದ ರೀತಿಯ ಚಿಹ್ನೆ ಆಯ್ಕೆ ಮಾಡಿಕೊಳ್ಳಲು ಅಭ್ಯರ್ಥಿಗಳು ತಡಕಾಡಿದರು.

ಜನಪ್ರಿಯ ಚಿಹ್ನೆಗಳಿಗೆ ಬೇಡಿಕೆ: ಆಟೋರಿಕ್ಷಾ, ಹೊಲಿಗೆಯಂತ್ರ, ಬ್ಯಾಟ್, ಬ್ಯಾಟ್ಸ್​ಮನ್, ಕ್ಯಾಮರಾ, ಉಂಗುರ, ಟೆಲಿಫೋನ್, ಮಿಕ್ಸಿ, ಹೆಲ್ಮೆಟ್, ಟಿವಿ, ತೆಂಗಿನಕಾಯಿ ಚಿಹ್ನೆಗಳಿಗೆ ಹೆಚ್ಚು ಬೇಡಿಕೆಯಿರುವುದು ಕಂಡುಬಂತು.