ಲಾರಿ, ಖಾಸಗಿ ಬಸ್, ಕಾರು ಚಾಲಕರ ಬೆಂಬಲ

ಕೊಳ್ಳೇಗಾಲ: ಪಟ್ಟಣದ ವರ್ತಕರು, ಲಾರಿ, ಖಾಸಗಿ ಬಸ್ ಹಾಗೂ ಕಾರು ಚಾಲಕರು, ಪೆಟ್ರೋಲ್ ಬಂಕ್ ಮಾಲೀಕರು ಸೇವೆ ಸ್ಥಗಿತಗೊಳಿಸಿ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದರು. ಔಷಧ, ಹಾಲು ಮಾರಾಟ ಮಳಿಗೆಗಳನ್ನು ಹೊರತುಪಡಿಸಿ, ಉಳಿದ ವ್ಯಾಪಾರ ವಹಿವಾಟುಗಳು ಸಂಜೆವರೆಗೂ ಸ್ಥಗಿತಗೊಂಡಿತ್ತು. ಈ ನಡುವೆ ಅಲ್ಲಲ್ಲಿ ಆಟೋಗಳ ಸಂಚಾರ ಕಂಡು ಬಂತು.
ಪಟ್ಟಣದ ಬಸ್ ನಿಲ್ದಾಣ, ಡಾ.ಅಂಬೇಡ್ಕರ್, ಡಾ.ರಾಜ್‌ಕುಮಾರ್ ರಸ್ತೆ ಸೇರಿ ಪ್ರಮುಖ ರಸ್ತೆ ಬದಿಯ ಅಂಗಡಿ ಮಳಿಗೆಗಳು ಬಂದ್ ಆಗಿದ್ದರಿಂದ ರಸ್ತೆ ಬಿಕೋ ಎನ್ನುತ್ತಿತ್ತು. ದೇವಾಂಗಪೇಟೆ, ಬಸ್ತಿಪುರ ರಸ್ತೆ, ನೂರ್‌ಮೊಹಲ್ಲಾ ಬಡಾವಣೆಗಳಲ್ಲಿ ಜನ ಸಂದಣಿ ಎಂದಿನಂತ್ತಿತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಡಿವೈಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದ ಹಿನ್ನೆಲೆ ನಿತ್ಯ ಗಿಜುಗುಡುತ್ತಿದ್ದ ಮಹದೇಶ್ವರ ಕಾಲೇಜು ರಸ್ತೆ, ದಕ್ಷಿಣ ಬಡಾವಣೆ, ಎಸ್.ವಿ.ಕೆ.ಕಾಲೇಜು ವೃತ್ತಗಳು ಭಣಗುಡುತ್ತಿದ್ದವು. ತಾಲೂಕು ಕಚೇರಿ, ಸಬ್‌ರಿಜಿಸ್ಟ್ರಾರ್ ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದರೂ ಎಂದಿನಂತೆ ಜನ ಸಂದಣಿಯಿರಲಿಲ್ಲ.
ಬಂದ್ ಬೆಂಬಲಿಸಿ ಬೈಕ್ ರ‌್ಯಾಲಿ: ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಜಯಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಅವರ ನೇತೃತ್ವದಲ್ಲಿ ನಗರಸಭೆಯ ನೂತನ ಕಾಂಗ್ರೆಸ್ ಸದಸ್ಯರು, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಸೇರಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬೈಕ್ ರ‌್ಯಾಲಿ ಮಾಡಿದರು. ಇದೇ ವೇಳೆ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ಎನ್‌ಎಲ್ ಮುಂದೆ ಧರಣಿ: ಭಾರತ್ ಬಂದ್ ಹಿನ್ನೆಲೆ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಎಸ್‌ಎನ್‌ಎಲ್ ಕಚೇರಿ ಮುಂದೆ ಸಾಕೇಂತಿಕವಾಗಿ ಧರಣಿ ನಡೆಸಿದರು. ಪರಿಣಾಮ, ಅಧಿಕಾರಿಗಳು ದೈನಂದಿನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಕಚೇರಿಗೆ ಬೀಗ ಹಾಕಿದರು. ಇದೇ ರೀತಿ ಪಟ್ಟಣದ ಪ್ರಧಾನ ಅಂಚೆ ಕಚೇರಿ ಮುಂದೆಯೂ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಧರಣಿ ನಡೆಸಿದರು. ಧರಣಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಿನಕಹಳ್ಳಿ ರಾಚಯ್ಯ, ಅಕ್ಮಲ್‌ಪಾಷ, ಚೇತನ್ ದೊರೆರಾಜ್, ಅಣಗಳ್ಳಿ ಬಸವರಾಜು, ನಗರಸಭಾ ಸದಸ್ಯರಾದ ಶಾಂತರಾಜ್, ರಾಘವೇಂದ್ರ ಸೇರಿದಂತೆ ಇತರರು ಹಾಜರಿದ್ದರು.