ಜಿಲ್ಲಾ ಪಂಚಾಯಿತಿ ಸಿಇಒ ನಡೆಗೆ ತಾಲೂಕು ಪಂಚಾಯಿತಿ ಆಕ್ಷೇಪ

ಚಳ್ಳಕೆರೆ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ಗಂಭೀರವಾಗಿದ್ದರೂ, ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ಕವಿತಾ ರಾಮಣ್ಣ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯೆ ಸುವರ್ಣಮ್ಮ, ಜಿಪಂ ಸಿಇಒ ದಿನಕ್ಕೊಂದು ನಿಯಮಾವಳಿ ಮಾಡುತ್ತಿದ್ದು, ನೀರಿನ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಬಹುತೇಕ ಸದಸ್ಯರು ದನಿಗೂಡಿಸಿದರು.

ಕಮ್ಮತ್‌ಮರಿಕುಂಟೆ, ಕಾಪರಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಸ್ಥಗಿತವಾಗಿ 2 ತಿಂಗಳಾಗಿದೆ. ಮೀರಾಸಾಬಿಹಳ್ಳಿ ಮತ್ತು ಕರೀಕೆರೆ ಗ್ರಾಮದಲ್ಲಿ ನೀರಿನ ಸರಬರಾಜು ಅಸಮಪರ್ಕವಾಗಿದೆ. ಬುಡ್ನಹಟ್ಟಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕಿರು ನೀರು ಸರಬರಾಜು ಯೋಜನೆ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಕಳಪೆಯಾಗಿದೆ.

ಬೊಮ್ಮನಕುಂಟೆ, ಕೊರ‌್ಲಕುಂಟೆಯ ಪ್ರೌಢಶಾಲೆ ವಿದ್ಯಾರ್ಥಿಗಳು ನೀರಿಗೆ ಪರದಾಡುತ್ತಿದ್ದಾರೆ ಎಂದು ಸಮಸ್ಯೆ ಬಿಚ್ಚಿಟ್ಟರು. ಮೈಲನಹಳ್ಳಿ ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಿ 3 ತಿಂಗಳಾದರೂ, ಪೈಪ್‌ಲೈನ್ ವ್ಯವಸ್ಥೆ ಮಾಡಿಲ್ಲ. ಟ್ಯಾಂಕರ್ ನೀರು ಸರಬರಾಜು ಮಾಡುವ ವಿಷಯದಲ್ಲಿ ಪಂಚಾಯಿತಿ ಮಟ್ಟದಲ್ಲಿ ಹಗರಣ ನಡೆದಿದೆ ಎಂದು ಸದಸ್ಯರಾದ ಎಸ್.ಸಮರ್ಥರಾಯ ಅರೋಪಿಸಿದರು. ಇತರ ಸದಸ್ಯರು ದನಿಗೂಡಿಸಿದರು.

ಅನುದಾನದ ಕೊರತೆಯಿಲ್ಲ ಎನ್ನುವ ಅಧಿಕಾರಿಗಳು, ಹಲವು ಸಬೂಬು ಹೇಳಿ ನೀರು ಪೂರೈಕೆಗೆ ನಿರ್ಲಕ್ಷೃ ಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳಿಗೆ ಕರೆ ಮಾಡಿದರೂ ಸ್ವೀಕರಿಸದೇ ನಿರ್ಲಕ್ಷೃ ಮಾಡುತ್ತಾರೆ. ಅಂಥ ಅಧಿಕಾರಿಗಳಿಗೆ ನೋಟಿಸ್ ನೀಡಬೇಕು ಎಂದು ಸದಸ್ಯ ನವೀನ್ ಆಗ್ರಹಿಸಿದರು.

ಇಒ ಈಶ್ವರ ಪ್ರಸಾದ್ ಮಾತನಾಡಿ, ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಪಿಡಿಒಗಳಿಗೆ ಜವಾಬ್ದಾರಿ ನೀಡಲಾಗಿದೆ. ಅವರ ಸಭೆ ಕರೆದು ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಳಪೆ ಬಿತ್ತನೆ ಬೀಜ, ರಸಗೊಬ್ಬರ ವಿತರಿಸುವ ಅಂಗಡಿ ಮುಚ್ಚಿಸುವ ಕೃಷಿ ಇಲಾಖೆ, ಕಳೆದ ವರ್ಷ ಕಲ್ಲು, ಮಣ್ಣು ತುಂಬಿದ್ದ ಕಳಪೆ ಶೇಂಗಾ ಬಿತ್ತನೆ ಬೀಜ ವಿತರಿಸಿ ರೈತರಿಗೆ ವಂಚಿಸಿತ್ತು. ಪ್ರಸ್ತುತ ವರ್ಷವೂ ಇಲಾಖೆ ವಿತರಿಸಿದ ಶೇಂಗಾ ಬಿತ್ತನೆ ಬೀಜ ಕಳಪೆಯಾಗಿವೆ. ಕೃಷಿ ಅಧಿಕಾರಿಗಳಿಗೆ ಶಿಕ್ಷೆ ನೀಡುವವರು ಯಾರು ಎಂದು ಸದಸ್ಯ ಎಚ್.ಆಂಜನೇಯ ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಎಡಿ ಮಾರುತಿ, ಈ ಬಗ್ಗೆ ಕೆಒಎಫ್ ನಿಗಮಕ್ಕೆ ನೋಟಿಸ್ ನೀಡಲಾಗಿದೆ. ಕಳಪೆ ಬಿತ್ತನೆ ಬೀಜ ಹಿಂಪಡೆದು ರೈತರಿಗೆ ಹಣ ವಾಪಸ್ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇಲಾಖೆಯಿಂದ ಅಂಥ ತಪ್ಪು ಆಗದಂತೆ ಎಚ್ಚರಿಕೆ ವಹಿಸುತ್ತೇವೆ ಎಂದರು.

ಅಧ್ಯಕ್ಷೆ ಕವಿತಾ ಮಾತನಾಡಿ, ಬಿತ್ತನೆ ಬೀಜ ವಿತರಣೆಗೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಬಗ್ಗೆ ಫೋನ್ ಮೂಲಕ ವಿಚಾರಿಸಿದಾಗ ನಿರ್ಲಕ್ಷೃದಿಂದ ಉತ್ತರ ನೀಡಿದ್ದಾರೆ ಎಂದು ಕೃಷಿ ಅಧಿಕಾರಿ ಮಾರುತಿ ವಿರುದ್ಧ ಆರೋಪ ಮಾಡಿದರು.

ಹಳೇ ವರ್ಷದಂತೆ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದೆ. ತಪ್ಪಾಗಿದ್ದರೆ ಕ್ಷಮಿಸಿ ಎಂದು ಮಾರುತಿ ಕ್ಷಮೆಯಾಚಿಸಿದರು.

ಉಪಾಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ರಾಮರೆಡ್ಡಿ, ತಿಪ್ಪಮ್ಮ, ಗಂಗಿಬಾಯಿ, ನಾಗಮ್ಮ, ಶ್ರೀನಿವಾಸ್, ಕೆ.ಟಿ. ತಿಪ್ಪೇಸ್ವಾಮಿ ಹಾಗೂ ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *