More

  ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ

  ಬೆಂಗಳೂರು: ‘ರಾಘವೇಂದ್ರ ಚಿತ್ರವಾಣಿ’ ಸಂಸ್ಥೆಯ 43ನೇ ವಾರ್ಷಿಕೋತ್ಸವ ಹಾಗೂ 19ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜ.25ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ.

  ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಡಿ.ವಿ. ಸುಧೀಂದ್ರ ಅವರು ನಿರ್ವಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಪ್ರತಿ ವರ್ಷ ಎರಡು ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಕನ್ನಡ ಚಿತ್ರರಂಗದ ಮತ್ತು ಪತ್ರಿಕೋದ್ಯಮದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

  ಈ ಬಾರಿ ಹಿರಿಯ ನಿರ್ವಪಕ ಕೆ.ಪ್ರಭಾಕರ್, ಹಿರಿಯ ಪತ್ರಕರ್ತೆ ಎಸ್.ಜಿ. ತುಂಗಾರೇಣುಕಾ ಅವರಿಗೆ ‘ರಾಘವೇಂದ್ರ ಚಿತ್ರವಾಣಿ’ ಪ್ರಶಸ್ತಿ, ಖ್ಯಾತ ಹಿನ್ನೆಲೆ ಗಾಯಕಿ ಪಿ.ಸುಶೀಲಾ ಅವರಿಗೆ ‘ಡಾ ರಾಜ್​ಕುಮಾರ್’ ಪ್ರಶಸ್ತಿ, ನಿರ್ದೇಶಕ ಎಸ್.ಉಮೇಶ್​ಗೆ ‘ಆರ್.ಶೇಷಾದ್ರಿ ಸ್ಮರಣಾರ್ಥ’ ಪ್ರಶಸ್ತಿ, ಹಿರಿಯ ನಟಿ ಪ್ರಮೀಳಾ ಜೋಷಾಯ್ಗೆ ‘ಖ್ಯಾತ ಅಭಿನೇತ್ರಿ ಜಯಮಾಲಾ ಎಚ್.ಎಂ.ರಾಮಚಂದ್ರ’ ಪ್ರಶಸ್ತಿ ನೀಡಲಾಗುತ್ತದೆ. ‘ಗರ’ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನೀಡಿದ ಸಂಗೀತ ನಿರ್ದೇಶಕ ಸಾಗರ್ ಗುರುರಾಜ್​ಗೆ ‘ಎಂ.ಎಸ್. ರಾಮಯ್ಯ ಮೀಡಿಯಾ ಆಂಡ್ ಎಂಟರ್​ಟೈನ್​ವೆುಂಟ್ ಪ್ರೈ.ಲಿ’ ಪ್ರಶಸ್ತಿ, ಶಿವರಾಮ ಕಾರಂತ ಅವರ ‘ಮೂಕಜ್ಜಿಯ ಕನಸುಗಳು’ ಕಾದಂಬರಿ ಆಧಾರಿತ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶಿಸಿದ ಪಿ.ಶೇಷಾದ್ರಿಗೆ ಖ್ಯಾತ ನಿರ್ದೇಶಕ, ನಿರ್ವಪಕ ‘ಕೆ.ವಿ. ಜಯರಾಂ’ ಪ್ರಶಸ್ತಿ, ‘ಬಿಂಬ: ಆ ತೊಂಭತ್ತು ನಿಮಿಷಗಳು’ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಶ್ರೀನಿವಾಸ್ ಪ್ರಭು ಅವರಿಗೆ ‘ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ’, ಚೊಚ್ಚಲ ಚಿತ್ರ ನಿರ್ದೇಶನಕ್ಕಾಗಿ ‘ಪ್ರೀಮಿಯರ್ ಪದ್ಮಿನಿ’ ನಿರ್ದೇಶಕ ರಮೇಶ್ ಇಂದಿರ ಅವರಿಗೆ ಹಾಗೂ ‘ಗಂಟುಮೂಟೆ’ ನಿರ್ದೇಶಕಿ ರೂಪಾ ರಾವ್ ಅವರಿಗೆ ‘ರಂಗತಜ್ಞ, ಕಿರುತೆರೆ-ಹಿರಿತೆರೆ ನಿರ್ದೇಶಕ ಬಿ.ಸುರೇಶ್’ ಪ್ರಶಸ್ತಿ, ‘ಗಿರ್ವಿುಟ್’ ಚಿತ್ರದ ‘ಆರಂಭವೇ ಆನಂದವೇ’ ಗೀತರಚನೆಗಾಗಿ ಕಿನ್ನಾಲ್ ರಾಜ್ ಅವರಿಗೆ ‘ಹಿರಿಯ ಪತ್ರಕರ್ತ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ, ಹಿರಿಯ ಪೋಷಕ ನಟ ರಮೇಶ್ ಭಟ್ ಅವರಿಗೆ ‘ಹಿರಿಯ ಪತ್ರಕರ್ತ ಸಿ.ಸೀತಾರಾಂ ಸ್ಮರಣಾರ್ಥ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts