ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾ.23 ರಂದು ಚುನಾವಣೆ

ಚಿತ್ರದುರ್ಗ: ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಾ. 23 ರಂದು ಚುನಾವಣೆ ನಡೆಯಲಿದ್ದು, ಈವರೆಗೆ ಇದ್ದ ಮೂವರು ಅಕಾಂಕ್ಷಿಗಳ ಸಂಖ್ಯೆ ನಾಲ್ಕಕ್ಕೇ ಏರಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಮುಖರು, ಕೆಪಿಸಿಸಿ ಕಾರ್ಯದರ್ಶಿ ಆರ್. ವೆಂಕಟೇಶ್ ಮತ್ತಿತರರು ಖಾಸಗಿ ಹೋಟೆಲ್‌ನಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಒಟ್ಟು 22 ಕಾಂಗ್ರೆಸ್ ಸದಸ್ಯರ ಪೈಕಿ ಹಾಜರಿದ್ದ 18 ಸದಸ್ಯರು ಹಾಗೂ ಇಬ್ಬರು ಜೆಡಿಎಸ್ ಸದಸ್ಯರ ಅಭಿಪ್ರಾಯವನ್ನು ವೆಂಕಟೇಶ್ ಸಂಗ್ರಹಿಸಿದರು ಎನ್ನಲಾಗಿದೆ. ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಿದ್ದಾರೆ.

ಹೊಸ ಅಧ್ಯಕ್ಷರ ಅಧಿಕಾರ ಮಾ.23 ರಿಂದ 2021ರ ಮೇ 3ರವರೆಗೆ ಅಂದರೆ 26 ತಿಂಗಳು ಉಳಿಯಲಿದೆ. ಈ ಅವಧಿಯನ್ನು ತಲಾ ಐದು ತಿಂಗಳಂತೆ ಅಧಿಕಾರ ಹಂಚಿಕೆಗೆ ಮುಖಂಡರು ಸಹಮತಕ್ಕೆ ಬಂದಿದ್ದಾರೆ.

ಪ್ರಬಲ ಆಕಾಂಕ್ಷಿಗಳಾದ ಜಿ.ಎಂ. ವಿಶಾಲಾಕ್ಷಿ ನಟರಾಜ್, ಶಶಿಕಲಾ ಸುರೇಶ್‌ಬಾಬು ಹಾಗೂ ಕೌಸಲ್ಯ ಅವರೊಂದಿಗೆ ಈಗ ಎಸ್ಸಿ ಅಭ್ಯರ್ಥಿಯೊಬ್ಬರಿಗೂ ಅಧಿಕಾರ ಕೊಡಬೇಕೆಂದು ಜಿಪಂ ಸದಸ್ಯರು ಆಗ್ರಹಿಸಿದ್ದಾರೆ.

ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವರು ಇದ್ದರು. ಆದ್ದರಿಂದ ಅಧಿಕಾರ ಕೇಳಿರಲಿಲ್ಲ. ಈಗ ಅಗತ್ಯವಿದೆ ಎಂದು ಜಿಪಂ ಎಸ್‌ಸಿ ಸದಸ್ಯರು ವಾದ ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂವರ ಬದಲು ನಾಲ್ವರಿಗೆ ಅಧಿಕಾರ ಹಂಚಲು ಮುಖಂಡರು ನಿರ್ಧರಿಸಿದ್ದಾರೆ. ವೆಂಕಟೇಶ್ ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಗ್ಗೆ ನಾಮಪತ್ರ ಸಲ್ಲಿಕೆ ವೇಳೆ ಹೆಸರು ಪ್ರಕಟಿಸುವ ಸಾಧ್ಯತೆಗಳಿವೆ.

ಸಂಸದ ಬಿ.ಎನ್. ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಶಾಸಕ ಟಿ. ರಘುಮೂರ್ತಿ, ಮಾಜಿ ಶಾಸಕರಾದ ಡಿ. ಸುಧಾಕರ್, ಗೋವಿಂದಪ್ಪ, ತಿಪ್ಪೇಸ್ವಾಮಿ, ಡಿಸಿಸಿ ಅಧ್ಯಕ್ಷ ಫಾತ್ಯರಾಜನ್, ಜಿಪಂ ಸದಸ್ಯರು, ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿದ್ದರು.

ಪತ್ರಿಕೆ ಜತೆ ಮಾತನಾಡಿದ ಶಾಸಕ ರಘುಮೂರ್ತಿ, ನಾಳೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ನಂತರ ಅಭ್ಯರ್ಥಿ ಹೆಸರು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.