ಉತ್ತಮ ಕೆಲಸದಿಂದ ಫಲ ಖಚಿತ

ಚಿತ್ರದುರ್ಗ: ಸಮಾನ ಮನಸ್ಕರರು ಒಂದಾಗಿ ಉತ್ತಮ ಕಾರ್ಯ ಮಾಡಿದರೆ ಫಲ ಖಚಿತ ಎಂದು ಯೋಗಗುರು ರವಿ ಕೆ.ಅಂಬೇಕರ್ ಹೇಳಿದರು.

ನಗರದ ಶ್ರೀ ಸದ್ಗುರು ಸೇವಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸೇವಾ ಮನೋಭಾವ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಆರ್ಥಿಕ ನೆರವು ದೊರತಲ್ಲಿ ಕೆಲಸಗಳು ಸುಲಭವಾಗುತ್ತವೆ ಎಂದರು.

ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ವಾವಲಂಬನೆ ವಿದ್ಯಾಭ್ಯಾಸದಿಂದ ದೊರೆಯುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಸಮಾಜದ ಬೆಂಬಲವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಸಹನಾ ಮಾತೃಶ್ರೀ ಸಂಸ್ಥೆ ಅಧ್ಯಕ್ಷೆ ಡಾ.ಸುಧಾ ಜಗದೀಶ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ವಿಶೇಷ ಗೌರವವಿದೆ. ಈ ಕಾರಣಕ್ಕೆ ಸಮಾಜ ಸೇವೆಗಳಲ್ಲಿ ಮಹಿಳೆಯರು ಸಕ್ರಿಯರಾಗಿ ಮುಂಚೂಣಿಯಲ್ಲಿದ್ದಾರೆ ಎಂದರು.

ಕ್ಲಬ್‌ನ ಕಾರ್ಯದರ್ಶಿ ಕವಿತಾ ಜೈನ್ ಮಾತನಾಡಿ, ಸ್ತ್ರೀಯರು ತಮ್ಮ ರಕ್ಷಣೆಯತ್ತ ಗಮನ ಹರಿಸಬೇಕು. ಕುಟುಂಬದ ಸಹಕಾರ ಮಾತ್ರವಲ್ಲದೆ ಸ್ವಾವಲಂಬನೆ ಸಾಧಿಸಿದರೆ ಸುರಕ್ಷಿತವಾಗಿರಬಹುದು ಎಂದು ತಿಳಿಸಿದರು.

ಇನ್ನರ್‌ವೀಲ್ ಲೇಡಿಸ್ ಕ್ಲಬ್ ಅಧ್ಯಕ್ಷೆ ರೀನಾ ವೀರಭದ್ರಪ್ಪ ಇತರರು ಮಾತನಾಡಿದರು. ಉಪನ್ಯಾಸಕ ಕೆಂಚವೀರಪ್ಪ, ಯೋಗ ಶಿಕ್ಷಕಿ ಪುಟ್ಟಮ್ಮ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆ ಕಾರ್ಯದರ್ಶಿ ಶೈಲಾ ಬಾಬು, ಸದಸ್ಯರಾದ ರೋಹಿಣಿ ಬಸವರಾಜ್, ಸುಜಾತಾ ತಿಪ್ಪೇಸ್ವಾಮಿ, ಹೇಮಂತಿನಿ ಪ್ರಕಾಶ್, ಸಹ ಕಾರ್ಯದರ್ಶಿ ಶೋಭಾ ಶಿವಕುಮಾರ್ ಉಪಸ್ಥಿತರಿದ್ದರು.

ಸರಳತೆಯಿಂದ ಉನ್ನತ ಸ್ಥಾನ: ಜೀವನದಲ್ಲಿ ಸರಳತೆ, ಉನ್ನತ ಚಿಂತನೆ ಹೊಂದಿದ್ದರೆ ಸಮಾಜದಲ್ಲಿ ಉತ್ತಮ ಸ್ಥಾನಕ್ಕೇರಲು ಸಾಧ್ಯ. ಸಮಾಜಮುಖಿ ಚಿಂತನೆಗಳ ಮೂಲಕ ಸಮಾಜ ಕಾರ್ಯಗಳಲ್ಲಿ ನಿಸ್ವಾರ್ಥವಾಗಿ ಪಾಲ್ಗೊಳ್ಳಬೇಕು. ಇದರಿಂದ ಜೀವನದಲ್ಲಿ ನೆಮ್ಮದಿ ಲಭಿಸಲಿದೆ ಎಂದು ಇನ್ನರ್‌ವೀಲ್ ಲೇಡಿಸ್ ಕ್ಲಬ್ ಅಧ್ಯಕ್ಷೆ ರೀನಾ ವೀರಭದ್ರಪ್ಪ ತಿಳಿಸಿದರು.

Leave a Reply

Your email address will not be published. Required fields are marked *