ಚಿತ್ರದುರ್ಗ: ಭಾರತೀಯ ಪರಂಪರೆ ಪಾಲನೆಯಿಂದ ಕರೊನಾ ಸೋಂಕು ಹತೋಟಿ ಸಾಧ್ಯ ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಹೇಳಿದರು.
ಮಾಸ್ಕ್ ಡೇ ಅಂಗವಾಗಿ ನಗರಸಭೆ ಕಚೇರಿ ಆವರಣದಲ್ಲಿ ಆರೋಗ್ಯ ಇಲಾಖೆ ಗುರುವಾರ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಪಾಶ್ಚಿಮಾತ್ಯ ಸಂಸ್ಕೃತಿ ತ್ಯಜಿಸಿ ನಮ್ಮ ಸಂಸ್ಕೃತಿಯ ಆಚರಣೆಗೆ ನಾವಿಂದು ಮುಂದಾಗ ಬೇಕಿದೆ. ಲಾಕ್‌ಡೌನ್ ಸಡಿಲಗೊಂಡಿರುವ ಸಂದರ್ಭದಲ್ಲಿ ಜನರ ಓಡಾಟ ಹೆಚ್ಚಿದ್ದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದರಿಂದ ಕರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳ ಬಹುದು ಎಂದರು.
ಡಿಸಿ ಆರ್.ವಿನೋತ್ ಪ್ರಿಯಾ ಮಾತನಾಡಿ,ಉದಾಸೀನ ಮಾಡದೇ ಮಾಸ್ಕ್ ಧರಿಸಿ. ದ್ವಿಚಕ್ರ ವಾಹನದಲ್ಲಿ ಇಬ್ಬರ ಸವಾರಿ ಸೂಕ್ತವಲ್ಲ, ಮಾತನಾಡುವಾಗಲು ಮಾಸ್ಕ್ ಇರಬೇಕೆಂದು ಮನವಿ ಮಾಡಿದರು.
ಎಸ್ಪಿ ಜಿ.ರಾಧಿಕಾ ಮಾತನಾಡಿ, ಸಡಿಲಗೊಂಡಿರುವುದು ಲಾಕ್‌ಡೌನ್ ಹೊರತು, ಕರೊನಾ ಸೋಂಕಲ್ಲ. ರೋಗ ಇಲ್ಲವೆಂಬ ಉಡಾಫೆ ಬೇಡ. ತಪ್ಪದೆ ಮಾಸ್ಕ್ ಧರಿಸಿ, ರೋಗದಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ, ಇತರರನ್ನು ರಕ್ಷಿಸಿ ಎಂದರು.
ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಎಸಿ ವಿ.ಪ್ರಸನ್ನ, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಡಿಎಸ್ ಡಾ. ಎಚ್.ಜೆ.ಬಸವರಾಜಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು, ಪರಿಸರ ಇಂಜಿನಿಯರ್ ಜಾಫರ್, ನಗರ ಠಾಣೆ ಪಿಐ ಟಿ.ಆರ್.ನಯೀಂ ಅಹಮದ್, ಆರೋಗ್ಯ ಇಲಾಖೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇದ್ದರು.
ನಗರಸಭೆಯಿಂದ ಆರಂಭವಾದ ಜಾಥಾ, ಗಾಂಧಿ ವೃತ್ತ ಹಾದು ಡಿಎಚ್‌ಒ ಕಚೇರಿ ಬಳಿ ಪೂರ್ಣಗೊಂಡಿತು.