ಕೋಟೆನಗರಿಯಲ್ಲಿ ನೆನಪುಗಳ ಶೋಭಾಯಾತ್ರೆ

ಕೆ.ಪಿ. ಓಂಕಾರಮೂರ್ತಿ ಚಿತ್ರದುರ್ಗ: ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತೆ ರಾಜ್ಯವನ್ನೇ ಸೂಜಿಗಲ್ಲಿನಂತೆ ಸೆಳೆದ ವಿಶ್ವ ಹಿಂದು ಮಹಾಗಣಪತಿ ಶೋಭಾಯಾತ್ರೆಯ ಸಂಭ್ರಮ ಜನರ ಮನದಿಂದ ಮರೆಯಾಗಿಲ್ಲ.

ಶನಿವಾರ ಬರೋಬ್ಬರಿ 12 ಗಂಟೆ ಕಾಲ ಸಾಗಿದ ಶೋಭಾಯಾತ್ರೆಯ ಗುಂಗು ಚಿತ್ರದುರ್ಗದ ಜನರನ್ನು ಆವರಿಸಿದೆ. ತಡರಾತ್ರಿ 11.30 ಕ್ಕೆ ಚಂದ್ರವಳ್ಳಿಯಲ್ಲಿ ಗಣಪತಿ ವಿಸರ್ಜನೆ ಮಾಡಿ ಬಂದ ಯುವಕರು ಭಾನುವಾರ ಬೆಳ್ಳಂಬೆಳಗ್ಗೆ ಚರ್ಚೆಯಲ್ಲಿ ತಲ್ಲೀನರಾಗಿದ್ದರು.

ವಯಸ್ಸಿನ ಅಂತರವಿಲ್ಲದೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಲ್ಲಿ ದಣಿವು ಮರೆಯಾಗಿತ್ತು. ಶೋಭಾಯಾತ್ರೆಯ ಅನುಭವಗಳನ್ನು ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು.

ಕೆಲವರು ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡುತ್ತಿದ್ದರು. ಇನ್ನೂ ಕೆಲವರು ಎಷ್ಟು ಲೈಕ್, ಕಾಮೆಂಟ್ಸ್ ಬಂದಿದೆ ಎಂಬುದನ್ನು ಪರಿಶೀಲಿಸುತ್ತಾ ಸ್ನೇಹಿತರಿಗೆ ಶೇರ್ ಮಾಡುತ್ತಿದ್ದರು.

ಚಂದ್ರವಳ್ಳಿಯತ್ತ ಹೆಜ್ಜೆ: ರಾತ್ರಿ ಗಣಪತಿ ವಿರ್ಸಜನೆಗೆ ಹೋಗದ ಅನೇಕರು ಬೆಳಗ್ಗೆ ಚಂದ್ರವಳ್ಳಿಯತ್ತ ಸಾಗಿದರು. ಬಾವಿಯ ಬಳಿ ನಿಂತು ಗಣಪತಿ ಇಲ್ಲೇ ಬಿಟ್ಟಿದ್ದು ನೋಡಿ ಎನ್ನುತ್ತಾ ಮಕ್ಕಳಿಗೆ ತೋರಿಸುತ್ತಿದ್ದರು. ಇಡೀ ವಾತಾವರಣ ಜಾತ್ರೆಯಂತೆ ಕಂಡು ಬಂದಿತು.
ಒಂದೆಡೆ ಲಕ್ಷಾಂತರ ಜನ ಪ್ರತ್ಯಕ್ಷವಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರೆ ಅದಕ್ಕೂ ದುಪ್ಪಟ್ಟು ಭಕ್ತರು ಸಾಮಾಜಿಕ ಜಾಲತಾಣದ ಮೂಲಕ ಪರೋಕ್ಷವಾಗಿ ಸಾಕ್ಷಿಯಾದರು. ಚಿತ್ರದುರ್ಗದ ಹುಡ್ಗರು, ಚಿತ್ರದುರ್ಗ ಫೋರ್ಟ್ ಹೀಗೆ ನಾನಾ ಹೆಸರಿನ ಪೇಜ್‌ಗಳಲ್ಲಿ ಸಾವಿರಾರು ಶೇರ್‌ಗಳಾಗಿದ್ದರೆ ನಾಲ್ಕೈದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.

ನಾಲ್ಕೇ ತಾಸಿನಲ್ಲಿ ಸ್ವಚ್ಛಗೊಳಿಸಿದರು ಪೌರನೌಕರರು: ಶೋಭಾಯಾತ್ರೆ ಅಂಗವಾಗಿ ನಗರದ 51 ಕ್ಕೂ ಹೆಚ್ಚು ಕಡೆ ಸಂಘ ಸಂಸ್ಥೆಗಳು ಪ್ರಸಾದ ವಿತರಿಸಿದ್ದರಿಂದ ಮುಖ್ಯ ರಸ್ತೆಗಳಲ್ಲಿ ಊಟದ ತಟ್ಟೆ ಹಾಗೂ ಪ್ಲಾಸ್ಟಿಕ್ ಬಿದ್ದಿತ್ತು.

ಭಾನುವಾರ ಬೆಳಗ್ಗೆ ಆರು ಗಂಟೆಗೆ ರಸ್ತೆಗಳಿಗಿದ 170 ಪೌರ ಕಾರ್ಮಿಕರು ಹನ್ನೊಂದು ಗಂಟೆಯ ಹೊತ್ತಿಗೆ ಇಡೀ ನಗರವನ್ನು ಸ್ವಚ್ಛಗೊಳಿಸಿದರು. ಎರಡು ಲಾರಿ, ಎಂಟು ಟ್ರ್ಯಾಕ್ಟರ್ ಬಳಸಿಕೊಂಡು ಚಳ್ಳಕೆರೆ ಟೋಲ್‌ಗೇಟ್‌ನಿಂದ ಕನಕ ವೃತ್ತದವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಇಪ್ಪತ್ತು ಲೋಡ್ ಕಸವನ್ನು ನಗರಸಭೆಗೆ ಸೇರಿದ ಜಾಗದಲ್ಲಿ ವಿಲೇವಾರಿ ಮಾಡಲಾಯಿತು.

ಸಂಘ ಸಂಸ್ಥೆಗಳು ಪ್ರಸಾದ ವಿತರಣೆ ಸ್ಥಳದಲ್ಲಿ ಕಸದ ಬುಟ್ಟಿ ಇಟ್ಟಿದ್ದರೂ ಜನ ಸಂದಣಿ ಹೆಚ್ಚಾಗಿದ್ದರಿಂದ ಸ್ವಚ್ಛತೆಯ ಕನಸು ಸಾಕಾರವಾಗಿರಲಿಲ್ಲ. ಇದನ್ನು ಅರಿತಿದ್ದ ಪೌರ ಕಾರ್ಮಿಕರು ಕೆಲವೇ ಗಂಟೆಗಳಲ್ಲಿ ಇಡೀ ರಸ್ತೆಯನ್ನು ಸ್ವಚ್ಛಗೊಳಿಸಿ, ಜನರ ಮೆಚ್ಚುಗೆಗೆ ಪಾತ್ರರಾದರು.

ಮೊದಲ ಬಾರಿಗೆ ಇಷ್ಟು ದೊಡ್ಡ ಶೋಭಾಯಾತ್ರೆಯ ಫೋಟೋಗಳನ್ನು ಸೆರೆ ಹಿಡಿದಿದ್ದೇನೆ. ಮನೆಯಿಂದ ಹೊರಡುವಾಗ ಇದ್ದ ಲೆಕ್ಕಾಚಾರ ಜನರನ್ನು ನೋಡಿದ ಬಳಿಕ ಉಲ್ಟಾ ಆಯಿತು. ಕಣ್ಮುಂದೆ ನೂರಾರೂ ಫ್ರೇಮ್‌ಗಳು ಹಾದು ಹೋಗುತ್ತಿದ್ದವು. ಕ್ಷಣವೂ ವ್ಯರ್ಥ ಮಾಡದೆ ಫೋಟೋ ಕ್ಲಿಕ್ಕಿಸಿದೆ. ಬಳಿಕ ಒಂದೊಂದು ದೃಶ್ಯವೂ ನೂರಾರು ನೋಟ ಕಟ್ಟಿಕೊಟ್ಟವು. ಫೇಸ್‌ಬುಕ್‌ಗೆ ಹಾಕಿದ ಕೆಲ ಗಂಟೆಯಲ್ಲೇ 16 ಸಾವಿರ ಮಂದಿ ವೀಕ್ಷಿಸಿದರೆ 160 ಶೇರ್ ಆಗಿತ್ತು. ಇದು ಜೀವನದಲ್ಲಿ ಮರೆಯದ ಕ್ಷಣ.
ಅಂಜನ್, ಹವ್ಯಾಸಿ ಫೋಟೋಗ್ರಾಫರ್